ವಿಶಿಷ್ಟ ಶಿಖರ ತೈಲ ಮಜ್ಜನ ಕಾರ್ಯಕ್ರಮ
- ಭೀಮಣ್ಣ ಗಜಾಪುರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮೇ 13
ಇಲ್ಲೊಂದು ಅಪರೂಪದ ದೇವಸ್ಥಾನವಿದೆ. ಎರಡು ರಾಜವಂಶಸ್ಥರ ಶೈಲಿಯಲ್ಲಿರುವ ಈ ದೇವಸ್ಥಾನ ಅಮರಶಿಲ್ಪಿ ಜಕಣಚಾರಿ ನಿರ್ಮಿಸಿದ್ದು. ಇಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಯ ಕಲೆಗಳನ್ನು ನೋಡುವುದೇ ಅದಮ್ಯ ಅನುಭವ. ಹಂಪಿ ಹೊರ ನೋಡು, ಉಜ್ಜಿನಿ ಒಳ ನೋಡು ಎನ್ನುವ ಮಾತು ಈ ಭಾಗದಲ್ಲಿ ಇಂದಿಗೂ ಜನಮನದಲ್ಲಿದೆ. ಇದರ ಇನ್ನೊಂದು ಅಪರೂಪ ಎಂದರೆ ದೇಶದಲ್ಲೇ ಎಲ್ಲೂ ನಡೆಯದ ತೈಲ ಮಜ್ಜನ ಕಾರ್ಯಕ್ರಮ ಇಲ್ಲಿ ನಡೆಯುತ್ತವೆ.
ಕೂಡ್ಲಿಗಿ ತಾಲೂಕಿನ ಉಜ್ಜಿನಿ ಗ್ರಾಮದಲ್ಲಿರುವ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಐತಿಹಾಸಿಕ ದೇವಾಲಯವೇ ಅಂತಹ ವೈಶಿಷ್ಟಗಳಿಗೆ ಸಾಕ್ಷಿಯಾಗಿದೆ. ಚಾಲುಕ್ಯ ಮತ್ತು ಹೊಯ್ಸಳ ಮಿಶ್ರ ಶೈಲಿಯಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಎರಡನೇ ಪೀಠವಾದ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಮರುಳಸಿದ್ಧೇಶ್ವರ ಸ್ವಾಮಿ ದೇವಾಲಯವಿದೆ. ಉಜ್ಜಿನಿ ಸದ್ಧರ್ಮ ಪೀಠಕ್ಕೆ ಬಂದವರು ಈ ದೇವಾಲಯದ ಕಲೆಯನ್ನು ನೋಡಿ ಮೂಕವಿಸ್ಮಿತರಾಗುತ್ತಾರೆ.
ಪೂರ್ವ ಇತಿಹಾಸ: ಉಜ್ಜಿನಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಮಧ್ಯಪ್ರದೇಶದ ಕಾಳಿಕಾ ಉಜ್ಜೈನಿ. ಆ ಉಜ್ಜೈನಿಗೂ ಬಳ್ಳಾರಿ ಜಿಲ್ಲೆಯಲ್ಲಿರುವ ಈ ಉಜ್ಜಿನಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುವುದು ಸಾಮಾನ್ಯ. ವೀರಶೈವ ಪರಂಪರೆಯ ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ ಪೀಠ ಮೊದಲು ಮಧ್ಯಪ್ರದೇಶದ ಕಾಳಿಕಾ ಉಜ್ಜೈನಿಯಲ್ಲೇ ಇತ್ತು.
10ನೇ ಶತಮಾನದಲ್ಲಿ ಅಲ್ಲಿಯ ಉಜ್ಜಿನಿ ಜಗದ್ಗುರು ಶ್ರೀ ಶಂಭುಮುನಿ ಶಿವಾಚಾರ್ಯರು ಪೀಠಾಧ್ಯಕ್ಷರಾಗಿದ್ದಾಗ ಅಲ್ಲಿಯ ಜೈನಧರ್ಮದ ರಾಜ ವೀರಸೇನ ಉಜ್ಜಿನಿ ಪೀಠಕ್ಕೆ ತೊಂದರೆ ನೀಡುತ್ತಿದ್ದರು. ಕೊನೆಗೆ ರಾಜ ವೀರಸೇನ ವೀರಶೈವರ ಮೇಲೆ ಯುದ್ಧ ಸಾರಿದ. ವೀರಶೈವರು ಗೆದ್ದರೂ ಉಜ್ಜೈನಿ ಪೀಠದ ಆಗಿನ ಜಗದ್ಗುರುಗಳು ಸಾವುನೋವು ನೋಡಿ ಬೇಸತ್ತು ತಮ್ಮ ಶಿಷ್ಯ ಮರಳರಾಧ್ಯರಿಗೆ ಪಟ್ಟಾಧಿಕಾರ ನೀಡಿ ಲಿಂಗೈಕ್ಯರಾದರು. ಅಲ್ಲಿಂದ ಶ್ರೀ ಮರುಳಾರಾಧ್ಯರು ಶಾಂತಿ ಅರಸಿ ದೇಶಾದ್ಯಂತ ಸಂಚರಿಸಿ ಕೊನೆಗೆ ಕರ್ನಾಟಕದ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಈಗಿನ ಉಜ್ಜಿನಿಯಲ್ಲಿ ಪೀಠ ಸ್ಥಾಪಿಸಿದರು ಎಂದು ಇತಿಹಾಸ ಹೇಳುತ್ತದೆ.
ಎರಡು ಶೈಲಿ: ಚಾಲುಕ್ಯ ಸಾಮ್ರಾಜ್ಯದ ಅರಸ 6ನೇ ವಿಕ್ರಮಾದಿತ್ಯ ಮರುಳಸಿದ್ಧೇಶ್ವರ ದೇವಾಲಯ ನಿರ್ಮಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಈತನು ಹೊಯ್ಸಳ ರಾಜರೊಂದಿಗೆ ವೈವಾಹಿಕ ಸಂಬಂಧ ಹೊಂದಿದ್ದರಿಂದ ಈ ನೆನಪಿಗಾಗಿ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನವನ್ನು ಚಾಲುಕ್ಯ ಮತ್ತು ಹೊಯ್ಸಳ ಮಿಶ್ರಶೈಲಿಯಲ್ಲಿ 11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ದೇವಾಲಯದೊಳಗೆ ಕಲ್ಲಿನಲ್ಲಿ ಕೆತ್ತಿರುವ ಸಹಸ್ರದಳ ಕಮಲ, ಕಂಬಗಳ ಸೂಕ್ಷ್ಮ ಕೆತ್ತನೆಯ ಕಲೆ, ಲಕ್ಷ್ಮಿದೇವಿ ಧ್ಯಾನದಲ್ಲಿ ಕುಳಿತಿರುವ ಶಿಲ್ಪ, ಅಂಕಳೆ ಬಸವಣ್ಣ, ತಂಗಾಳಿ ಗೋಪುರ, ಎಲ್ಲದಕ್ಕಿಂತ ಹೆಚ್ಚಾಗಿ ಗರ್ಭಗುಡಿಯ ಮೇಲಿರುವ ಬಳಪದ ಕಲ್ಲಿನಿಂದ ಕೆತ್ತಿರುವ ಸುಂದರ ಶಿಖರ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತವೆ.
ತೈಲ ಮಜ್ಜನ: ಈ ಹಿಂದೆ ಉಜ್ಜಿನಿ ಪೀಠಕ್ಕೂ ಕೂಡ್ಲಿಗಿ ತಾಲೂಕಿನ ಜರ್ಮಲಿ ಪಾಳೇಗಾರರಿಗೂ ಉತ್ತಮ ಬಾಂಧವ್ಯವಿದ್ದು, ಒಮ್ಮೆ ಜರ್ಮಲಿ ಪಾಳೇಗಾರರು ತಪ್ಪಾಗಿ ನಡೆದುಕೊಂಡಾಗ, ಮಾಡಿದ ತಪ್ಪಿಗೆ ಆಗಿನ ಜಗದ್ಗುರುಗಳು ಶಾಪಕೊಟ್ಟಿದ್ದರಂತೆ.
ಶಾಪ ಪರಿಹಾರಕ್ಕಾಗಿ ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ಶಿಖರಕ್ಕೆ ತಪ್ಪು ಕಾಣಿಕೆಯಾಗಿ ತೈಲ ಎರೆಯಿರಿ ಎಂದು ಆಜ್ಞೆ ಇತ್ತರಂತೆ. ಅಂದಿನಿಂದ ಇಂದಿನವರೆಗೂ ಜರ್ಮಲಿ ಪಾಳೇಗಾರರ ವಂಶಸ್ಥರು ಪ್ರತಿವರ್ಷ ನಡೆಯುವ ಶಿಖರ ತೈಲಾಭಿಷೇಕ ಉತ್ಸವಕ್ಕೆ ಬರಿಗಾಲಿನಿಂದ 25 ಕಿ.ಮೀ. ದೂರದಿಂದ ಹೊತ್ತು ತಂದ ತೈಲವನ್ನು ಶಿಖರಕ್ಕೆ ಎರೆಯುತ್ತಾರೆ.
ಅನಂತರ ಭಕ್ತರೆಲ್ಲರೂ ಗೋಪುರಕ್ಕೆ ತೈಲ ಮಜ್ಜನ ಮಾಡುವ ಸಂಪ್ರದಾಯ ಇಡೀ ದೇಶದಲ್ಲೇ ಅಪರೂಪದ್ದಾಗಿದೆ.
ನಾಳೆ ತೈಲ ಮಜ್ಜನ
ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ದೇವಾಲಯದ ಶಿಖರಕ್ಕೆ ತೈಲ ಮಜ್ಜನ ಕಾರ್ಯಕ್ರಮ ಮೇ 15ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ವೈಶಾಖ ಶುದ್ಧ ಷಷ್ಠಿಯಂದು ಪ್ರತಿವರ್ಷ ಈ ಕಾರ್ಯಕ್ರಮ ನಡೆಯುತ್ತದೆ. ಇಂತಹ ಅಪರೂಪದ ಉತ್ಸವ ನೋಡಲು ಕೂಡ್ಲಿಗಿ ತಾಲೂಕು ಉಜ್ಜಿನಿ ಗ್ರಾಮಕ್ಕೆ ಬರಬಹುದು. ಕೊಟ್ಟೂರು, ಕೂಡ್ಲಿಗಿ, ಜಗಳೂರಿನಿಂದ ಉಜ್ಜಿನಿಗೆ ಸಾರಿಗೆ ಮತ್ತು ಖಾಸಗಿ ಬಸ್ಗಳ ಸೌಲಭ್ಯವಿದೆ.