ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತುಂಗೆಯ ಹೂಳಿನ ಗೋಳು, ಪರ್ಯಾಯ ಕೇಳು!

ಕರ್ನಾಟಕ ಹಾಗೂ ಆಂಧ್ರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳೆತ್ತುವ ಬದಲು...

Srinivasa Murthy VN
Updated On : 20 May 2013, 11:40 am

ಕ.ಪ್ರ. ವಾರ್ತೆ ಬಳ್ಳಾರಿ ಮೇ 19-
ಕರ್ನಾಟಕ ಹಾಗೂ ಆಂಧ್ರ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳೆತ್ತುವ ಬದಲು ಅದೇ ವೆಚ್ಚದಲ್ಲಿ ಜಲಾಶಯದಿಂದ 50 ಅಥವಾ 100 ಕಿ.ಮೀ. ದೂರದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ ಎಲ್ಲವೂ ಸಲೀಸು. ಇದಕ್ಕೆ ಆಂಧ್ರದ ಸಹಕಾರವೂ ಅಗತ್ಯ!
ಹೌದು. ಹೊಸಪೇಟೆಯ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿಕೊಂಡಿದೆ. ಇದರಿಂದ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿ ರೈತರಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳು ಹಳತಾಗಿವೆ. ಇಂಥ ಯೋಜನೆ ರೂಪಿಸಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಯಾವ “ÈÚáÛ~«Ú ÈÚßÄÇÁÚß’ ಸಹ ಇದರತ್ತ ಯೋಚಿಸುತ್ತಿಲ್ಲ.
ಹೇಗೆ ಸಾಧ್ಯ?: 132.5 ಟಿಎಂಸಿ ನೀರು ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಈಗ ಬರೋಬ್ಬರಿ 30 ಟಿಎಂಸಿ ಹೂಳು ತುಂಬಿಕೊಂಡಿದೆ. ಹೀಗಾಗಿ ಜಲಾಶಯದ ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಈ ಹೂಳೆತ್ತುವುದು ಸುಲಭದ ಮಾತಲ್ಲ. ಕೇವಲ 1 ಟಿಎಂಸಿ ಹೂಳು ಹೊರ ತೆಗೆಯಲು 1000 ಕೋಟಿ ವ್ಯಯಿಸಬೇಕು. ಆದರೆ, ಅದೇ ಮೊತ್ತದಲ್ಲಿ ಡ್ಯಾಂನಿಂದ 50 ಅಥವಾ 100 ಕಿ.ಮೀ. ದೂರದಲ್ಲಿ ನೀರು ಸಂಗ್ರಹಕ್ಕೆ ವ್ಯವಸ್ಥೆ (ಚೆಕ್ ಡ್ಯಾಂ ರೀತಿ) ಮಾಡಬೇಕು. ಜಲಾಶಯದಲ್ಲಿ 30 ಟಿಎಂಸಿ ಹೂಳಿನಿಂದಾಗಿ ಹರಿದು ಹೋಗುವ ನೀರನ್ನು ಈ ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಬಹುದು.
ಇಲ್ಲಿ ಸಂಗ್ರಹವಾದ ನೀರನ್ನೇ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ ಹರಿಸಬಹುದು. ಇಲ್ಲವೇ ಪ್ರತಿವರ್ಷ ಆಂಧ್ರದ ಪಾಲಿನ ನೀರನ್ನು ಬಿಡುಗಡೆ ಮಾಡಬಹುದು. ಜಲಾಶಯದಲ್ಲಿ 30 ಟಿಎಂಸಿ ಹೂಳಿನ ಹೊರತಾಗಿ ಸಂಗ್ರಹವಾದ ನೀರನ್ನು ಕಾಲಾನುಕ್ರಮದಲ್ಲಿ ಬಳಕೆ ಮಾಡಿಕೊಳ್ಳಬಹುದು. ಅಲ್ಲದೇ ಆಂಧ್ರದಲ್ಲೂ ಸಹ ಇದೇ ರೀತಿಯ ವ್ಯವಸ್ಥೆ ಮಾಡಿಕೊಂಡು ಮಳೆಗಾಲದಲ್ಲಿ ಜಲಾಶಯದಿಂದ ಬರುವ ತಮ್ಮ ಪಾಲಿನ ನೀರು ಸಂಗ್ರಹಿಸಿಟ್ಟುಕೊಂಡರೆ ಸಮಸ್ಯೆಯ ಸ್ವಲ್ಪ ಮಟ್ಟಿಗೆ ನಿವಾರಣೆ ಆಗುತ್ತದೆ.
1945, ಫೆ.28ರಂದು ತುಂಗಭದ್ರಾ ಜಲಾಶಯದ ಶಂಕುಸ್ಥಾಪನೆ ಮಾಡಿ 8 ವರ್ಷಗಳ ನಂತರ ಅಂದರೆ 1953ರಲ್ಲಿ ಜಲಾಶಯ ನಿರ್ಮಾಣವಾಯಿತು. ಸುಮಾರು 136 ಕೋಟಿ ವೆಚ್ಚದಲ್ಲಿ ಈ ಜಲಾಶಯ ನಿರ್ಮಿಸಲಾಗಿದೆ. 60 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 0.41 ಟಿಎಂಸಿಯಂತೆ ಈವರೆಗೆ ಸುಮಾರು 30ಕ್ಕೂ ಹೆಚ್ಚು ಟಿಎಂಸಿ ಹೂಳು ಸಂಗ್ರಹವಾಗಿದೆ. ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರಪ್ರದೇಶದ ಕರ್ನೂಲ್, ಅನಂತಪುರ, ಕಡಪ ಜಿಲ್ಲೆಯ ಸುಮಾರು 10 ಲಕ್ಷಕ್ಕೂ ಹೆಚ್ಚು ಎಕರೆಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ವರ್ಷದಿಂದ ವರ್ಷಕ್ಕೆ ಹೂಳಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ರೈತರು ಆತಂಕವೂ ಇಮ್ಮಡಿಯಾಗುತ್ತಿದೆ.
ಹೂಳೆತ್ತಲು ಸಾಧ್ಯವೇ?: ಸದ್ಯದ ಮಟ್ಟಿಗೆ ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವುದು ಕಷ್ಟ. ತಾಂತ್ರಿಕ ಸಮಸ್ಯೆಯಿಂದಾಗಿ ಹೂಳೆತ್ತುವುದಕ್ಕಿಂತ ಪರ್ಯಾಯ ಮಾರ್ಗ ಆಲೋಚಿಸುವುದೇ ಉತ್ತಮ. ಒಂದು ಟಿಎಂಸಿ ಹೂಳನ್ನು ಲಾರಿಗಳಲ್ಲಿ ಸಾಗಿಸಬೇಕಾದರೆ 50 ಲಕ್ಷ ಟ್ರಿಪ್ ಮಾಡಬೇಕು. ಕೇವಲ ಹೂಳು ಸಾಗಿಸಲೇ 1000 ಕೋಟಿಗಿಂತಲೂ ಹೆಚ್ಚಿನ ವೆಚ್ಚವಾಗುತ್ತದೆ. ಹೀಗೆ ಸಾಗಿಸುವ ಹೂಳನ್ನು ವಿಲೇವಾರಿ ಮಾಡುವುದೂ ಕಷ್ಟ. ಅಂದಾಜು 100 ಎಕರೆ ಪ್ರದೇಶದಲ್ಲಿ 240 ಅಡಿಗಳ ಎತ್ತರದಲ್ಲಿ ಒಂದು ಟಿಎಂಸಿ ಹೂಳನ್ನು ಸಂಗ್ರಹಿಸಬೇಕಾಗುತ್ತದೆ. ವರ್ಷವಿಡೀ ಹೂಳೆತ್ತಲು ಸಾಧ್ಯವೇ ಇಲ್ಲ. ವರ್ಷದಲ್ಲಿ ಕೇವಲ 150 ದಿನ ಹೂಳೆತ್ತಬಹುದು. ಇನ್ನು ಜಲಾಶಯವು 84 ಕಿ.ಮೀ. ಉದ್ದ, 12 ಕಿ.ಮೀ ಅಗಲವಿದೆ, 378 ಚದರ ಕಿ.ಮೀ.ಗಳ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಅಂದರೆ ಹೂಳು ಕೇವಲ ಒಂದು ಕಡೆ ಸಂಗ್ರಹವಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ ಹೂಳೆತ್ತವುದು ತುಂಬಾ ಕಷ್ಟ.

ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವುದು ದುಬಾರಿ ಮಾತ್ರವಲ್ಲ ಇನ್ನಿತರ ತಾಂತ್ರಿಕ ದೋಷಗಳಿಂದಾಗಿ ತೀರಾ ಕಷ್ಟದ ಕೆಲಸ. ಇದರಿಂದಾಗಿ  ಪರ್ಯಾಯ ಮಾರ್ಗದ ಬಗ್ಗೆ ಆಲೋಚನೆ ಮಾಡುವುದು ಉತ್ತಮ. ತಜ್ಞರು, ರೈತರು, ಜನಪ್ರತಿನಿಧಿಗಳು ಕುಳಿತುಕೊಂಡು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಲೋಚಿಸಲಾಗುತ್ತದೆ.
-ಕೆ.ಸಿ. ಕೊಂಡಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ  

ಹೂಳೆತ್ತವುದು ತೀರಾ ಕಷ್ಟದ ಮಾತು. ನೀರು ಸಂಗ್ರಹಕ್ಕೆ ಪರ್ಯಾಯ ಮಾರ್ಗವೇ ಸೂಕ್ತ. ಇದರಿಂದಾಗಿ ಮಾತ್ರ ನೀರು ಸಂಗ್ರಹಣೆ ಹೆಚ್ಚಾಗಿ, ನೀರಿನ ಸಮಸ್ಯೆ ನೀಗಿಸಬಹುದು.
-ಗೋವಿಂದಲು, ಟಿ.ಬಿ. ಡ್ಯಾಂನ ನಿವೃತ್ತ ಎಂಜಿನಿಯರ್

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement