ಐಎಎಸ್ ಅಧಿಕಾರಿಗಳಿಗೆ 'ಸಿಂಡಿಕೇಟ್ ಭಾಗ್ಯ'
-ಶಶಿಧರ ಮೇಟಿ
ಕ.ಪ್ರ.ವಾರ್ತೆ ಬಳ್ಳಾರಿ ನ. 16
ಅತ್ತ ರಾಜ್ಯ ಸರ್ಕಾರ ಘೋಷಿಸಿರುವ ಶಾದಿಭಾಗ್ಯ, ಅಹಿಂದ ಮಕ್ಕಳಿಗೆ 'ಕರ್ನಾಟಕ ದರ್ಶನ' ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇದೀಗ ಇದಕ್ಕೆ ಮತ್ತೊಂದು ಸೇರ್ಪೆಡೆ ಎಂಬಂತೆ ವೈದ್ಯಕೀಯ ಶಿಕ್ಷಣ ಇಲಾಖೆ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಎಚ್‌ಎಸ್‌ಯು) ಕಾಯ್ದೆ ತಿದ್ದುಪಡಿ ಮಾಡಿ, ವಿವಿ ಸಿಂಡಿಕೇಟ್‌ನಲ್ಲಿ ಐಎಎಸ್ ಅಧಿಕಾರಿಗಳನ್ನು ಸದಸ್ಯರಾಗಿ ನೇಮಿಸಲು ಮುಂದಾಗಿದೆ. ಸರ್ಕಾರದ ಈ ನಿಲವು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಅಪಸ್ವರಕ್ಕೆ ಕಾರಣವಾಗಿದೆ. ಆಡಳಿತ ನಿರ್ವಹಣೆಯಲ್ಲಿ ವಿವಿ ವಿಫಲವಾದರೆ, ಅದನ್ನು ಸರಿಪಡಿಸುವ ಕೆಲಸವಾಗಬೇಕು. ಅದು ಬಿಟ್ಟು ಸಿಂಡಿಕೇಟ್‌ನಲ್ಲಿ ಅಧಿಕಾರಿಗಳನ್ನು ನೇಮಿಸುವ ಸರ್ಕಾರದ ನಿಲವು ಸರಿಯಲ್ಲ ಎಂಬ ಚರ್ಚೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿದೆ.
ಐಎಂಎ ನಿಯೋಗದಿಂದ ಸಿಎಂ ಭೇಟಿ: ಸರ್ಕಾರ ಇಂಥ ನಿಲವುಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಪೂರ್ವದಲ್ಲಿ ಸಾಧಕ ಬಾಧಕಗಳ ಕುರಿತು ಸರ್ಕಾರ ಚರ್ಚಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಐಎಂಎ ರಾಜ್ಯಾಧ್ಯಕ್ಷ ವೈ.ಸಿ. ಯೋಗಾನಂದ ರೆಡ್ಡಿ, ಐಎಂಎ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರಪ್ಪ, ನಿಕಟಪೂರ್ವ ರಾಜ್ಯಾಧ್ಯಕ್ಷ ವೈ.ಎಂ. ಸುಧಾಕರ ನೇತೃತ್ವದಲ್ಲಿ ಐಎಂಎ ನಿಯೋಗ ನ.17 ಅಥವಾ 18ರಂದು ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಲಿದೆ. ಇನ್ನು ಈ ಬಾರಿ ವಿಧಾನಸಭೆಗೆ 14 ವೈದ್ಯರು ಆಯ್ಕೆಯಾಗಿದ್ದಾರೆ. ಅವೆಲ್ಲರನ್ನೂ ಭೇಟಿಯಾಗಿ, ಸರ್ಕಾರದ ಇಂಥ ನಿಲುವುಗಳಿಂದ ವೈದ್ಯಕೀಯ ಕ್ಷೇತ್ರದ ಮೇಲಾಗುವ ಪರಿಣಾಮಗಳನ್ನು ತಿಳಿಸಲಾಗುತ್ತದೆ ಎಂದು 'ಕನ್ನಡಪ್ರಭ'ಕ್ಕೆ ಮೂಲಗಳು ತಿಳಿಸಿವೆ.
17 ಸದಸ್ಯರಿರುತ್ತಾರೆ: ಇದೀಗ ಆರ್‌ಜಿಎಚ್‌ಎಸ್‌ಯುನಲ್ಲಿ 16 ಸಿಂಡಿಕೇಟ್ ಸದಸ್ಯರಿದ್ದಾರೆ. ಐಎಂಎ ರಾಜ್ಯಾಧ್ಯಕ್ಷರು ಸೇರಿ 17 ಸದಸ್ಯರಿರುತ್ತಾರೆ. ಇವರ ಪೈಕಿ ಮೂವರನ್ನು ರಾಜ್ಯಪಾಲರು ನೇಮಿಸುತ್ತಾರೆ. ವಿವಿಯ ಸಿನೆಟ್ ಮೂವರು ಸದಸ್ಯರನ್ನು ಆಯ್ಕೆ ಮಾಡುತ್ತದೆ. ವಿವಿ ಕುಲಪತಿ ನೇಮಿಸಿದ ಒಬ್ಬರು ಪ್ರಾಧ್ಯಾಪಕರು, ವಿವಿಯ ಅಫಿಲಿಯೇಟೆಡ್ ಕಾಲೇಜಿನ ಮೂವರು ಪಾಚಾರ್ಯರು, ರಾಜ್ಯ ಸರ್ಕಾರದಿಂದ ವೈದ್ಯಕೀಯ ಶಿಕ್ಷಣ, ಆರೋಗ್ಯ, ಆಯುಷ್ ಇಲಾಖೆ ನಿರ್ದೇಶಕರು, ವಿವಿ ಕುಲಪತಿ (ಸಿಂಡಿಕೇಟ್ ಅಧ್ಯಕ್ಷ), ವಿವಿ ಆಡಳಿತಾತ್ಮಕ ಕುಲಸಚಿವ, ಮೌಲ್ಯಮಾಪನ ಕುಲಸಚಿವರು ಸಿಂಡಿಕೇಟ್ ಸದಸ್ಯರಾಗುತ್ತಾರೆ. ಆದರೆ ರಾಜ್ಯ ಸರ್ಕಾರವು ವಿವಿಯ ಕಾಯ್ದೆಗೆ ತಿದ್ದುಪಡಿ ತಂದು ಇನ್ನೂ 8 ಸದಸ್ಯರ ಸಂಖ್ಯೆಯನ್ನು ಏರಿಸಲು ಹೊರಟಿದೆ. ಇದರಲ್ಲಿ 5 ಐಎಎಸ್ ಅಧಿಕಾರಿಗಳು, ಮೂವರು ಶಾಸಕರು ಸೇರಿ ಒಟ್ಟು 24 ಸಿಂಡಿಕೇಟ್ ಸದಸ್ಯರಲ್ಲಿ 11 ಸದಸ್ಯರು ಸರ್ಕಾರದಿಂದ ನೇಮಕವಾದ ಸದಸ್ಯರಿರುತ್ತಾರೆ. ಸಿಂಡಿಕೇಟ್ ನಿರ್ಧಾರದಲ್ಲಿ ಇವರ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ಇದ್ದು, ಈ ನೀತಿ ಸರಿಯಲ್ಲ ಎಂಬುದು ಐಎಂಎ ನಿಲುವು.
ಕಾಯ್ದೆ ತಿದ್ದುಪಡಿ ಬೇಡ: ಯಾವುದೇ ವಿವಿ ಸಿಂಡಿಕೇಟ್‌ನಲ್ಲಿ ಇಲ್ಲದ ಹೊಸ ಪದ್ಧತಿ ವೈದ್ಯಕೀಯ ವಿವಿಗೆ ಏಕೆ? ವಿವಿ ಸಿಂಡಿಕೇಟ್ ಕ್ಯಾಬಿನೆಟ್ ಇದ್ದಂತೆ. ಇಲ್ಲಿ ಹಣಕಾಸು ವಿಷಯ ಒಂದು ಭಾಗ ಮಾತ್ರ. ಇನ್ನು ರ್ಯಾಂಕಿಂಗ್, ಪರೀಕ್ಷೆ ವಿಧಾನ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಸಿಂಡಿಕೇಟ್ ಕೈಗೊಳ್ಳುತ್ತದೆ. ಈ ನಿಲವುಗಳಿಂದ ಇಂಥ ನಿರ್ಧಾರಗಳ ಮೇಲೆ ಸರ್ಕಾರ ಹಿಡಿತ ಸಾಧಿಸಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಶಿಕ್ಷಣ ಹೇಗೆ ಸಾಧ್ಯ ಎಂಬ ಅಳಲು ವೈದ್ಯರದ್ದು.