ಹೃದಯಾಘಾತದಿಂದ ಬಳ್ಳಾರಿ ಜೈಲಿನಲ್ಲೇ ಕೈದಿ ಸಾವು
ಬಳ್ಳಾರಿ: ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೀವವಾಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಹೊಸಪೇಟೆ ತಾಲೂಕಿನ ಮುದ್ದಾಪುರ ಕ್ಯಾಂಪಿನ ಗಣೇಶ್ (23). ಈತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, 3 ವರ್ಷದಿಂದ ಶಿಕ್ಷೆ ಅನುಭವಿಸುತ್ತಿದ್ದ. ಎರಡೂವರೆ ವರ್ಷದಿಂದ ಟಿಬಿ, ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ. ಶನಿವಾರ ರಾತ್ರಿ ಹೃದಯಾಘಾತವಾಗಿ ಕಾರಾಗೃಹದಲ್ಲೇ ಮೃತಪಟ್ಟಿದ್ದಾನೆ. ಜೈಲಿಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಕಾರಾಗೃಹದ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ 9ನೇ ಚುಟುಕು ಸಾಹಿತ್ಯ ಸಮ್ಮೇಳನ: ಅರಸ್
ಮಂಗಳೂರು: ಮುಂದಿನ ವರ್ಷ ಉಡುಪಿಯಲ್ಲಿ 9ನೇ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೈಸೂರು ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್. ಅರಸ್ ಹೇಳಿದ್ದಾರೆ. ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ 'ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ'ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮನುಷ್ಯನ ಮಧ್ಯೆ ಪ್ರೀತಿ, ವಿಶ್ವಾಸ, ಸ್ನೇಹದ ಅಲೆ ಸೃಷ್ಟಿಸಿ, ಮನಸ್ಸನ್ನು ಅರಳಿಸುವ ಕಾರ್ಯ ಸಾಹಿತ್ಯ ಮಾಡುತ್ತದೆ. ಮನದಾಳದ ಭಾವನೆಗಳಿಗೆ ಮೂರ್ತ ಸ್ವರೂಪ ನೀಡುವ ಕೆಲಸ ಚುಟುಕು ಸಾಹಿತ್ಯ ಮಾಡುತ್ತದೆ. 20 ಸಾಲುಗಳ ಕವಿತೆ, ಸಾಹಿತ್ಯಗಳನ್ನು ಬರೆದಷ್ಟು ಸುಲಭವಾಗಿ 4 ಸಾಲಿನ ಚುಟುಕು ರಚಿಸಲು ಸಾಧ್ಯವಿಲ್ಲ. ಗೂಡಾರ್ಥ, ವ್ಯಂಗ್ಯಾರ್ಥ ಮನ ಮುಟ್ಟುವಂತೆ ಮಾಡುವ 4 ಸಾಲಿನ ಚುಟುಕು ಪದಗಳನ್ನು ರಚಿಸಲು ಬಲು ಕಷ್ಟ ಎಂದರು.