ಎಫ್ಡಿಟಿ ಕಟ್ಟದ ಗಣಿ ಕಂಪನಿಗಳ ಆಸ್ತಿ ಮುಟ್ಟುಗೋಲು?
-ಶಶಿಧರ ಮೇಟಿ
ಕ.ಪ್ರ.ವಾರ್ತೆ ಬಳ್ಳಾರಿ ಅ. 21
ಸಿ ಕೆಟಗರಿಯಲ್ಲಿರುವ ಗಣಿ ಗುತ್ತಿಗೆ ಪರವಾನಗಿ ರದ್ದು, ಗಣಿ ಅಕ್ರಮದಿಂದಾದ ನಷ್ಟ ವಸೂಲಿಗೆ ಚಿಂತನೆ ನಡೆಸಿರುವ ಸರ್ಕಾರ ಇದೀಗ ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸದ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಚಿಂತನೆ ನಡೆಸಿದೆ.
ತೆರಿಗೆ ಪಾವತಿಗೆ ಅ.22 ಕೊನೆಯ ದಿನವಾಗಿದ್ದು, ತೆರಿಗೆ ಪಾವತಿಸದಿದ್ದರೆ ಅರಣ್ಯ ಇಲಾಖೆಯು ಸಿ ಕೆಟಗರಿ ಗಣಿ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಚಿಂತನೆ ನಡೆಸಿದೆ.
ಜಿಲ್ಲೆಯ ಸಿ ಕೆಟಗರಿಯಲ್ಲಿನ 14 ಕಂಪನಿಗಳು ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಅದರಲ್ಲಿ ಒಂದು ಕಂಪನಿ ತೆರಿಗೆಯನ್ನೇ ಪಾವತಿಸಿಲ್ಲ. ಸಿ ಕೆಟಗರಿಯಲ್ಲಿ ಲಾಡ್ ಸಹೋದರರು, ಜನಾರ್ದನ ರೆಡ್ಡಿ, ಆನಂದ್ಸಿಂಗ್ ಅವರಿಗೆ ಸೇರಿದ ಕಂಪನಿಗಳಿವೆ.
ದಿನದಿಂದ ದಿನಕ್ಕೆ ತನಿಖೆ, ಸರ್ಕಾರದ ನಿರ್ಧಾರಗಳಿಂದ ಗಣಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಆರ್ಥಿಕ ತೊಂದರೆಗೆ ಒಳಗಾಗುವಂತೆ ಮಾಡಿದೆ. ಜಿಲ್ಲೆಯ 65 ಕಂಪನಿಗಳಿಗೆ ಅರಣ್ಯ ಅಭಿವೃದ್ಧಿ ತೆರಿಗೆ (ಎಫ್ಡಿಟಿ) ಕಟ್ಟಲು ನೋಟಿಸ್ ಜಾರಿ ಮಾಡಿದ್ದರೂ ಇದುವರೆಗೆ ಕೇವಲ 17 ಕಂಪನಿಗಳು ಮಾತ್ರ ಪಾವತಿಸಿವೆ. ಇದೀಗ ಗಣಿಗಾರಿಕೆ ನಡೆಸುತ್ತಿರುವ 14 ಕಂಪನಿಗಳ ಪೈಕಿ ಮೂರು ಕಂಪನಿಗಳನ್ನು ಹೊರತುಪಡಿಸಿ ಎಲ್ಲ ಕಂಪನಿಗಳು ಎಫ್ಡಿಟಿ ಪಾವತಿಸಿವೆ. ಇನ್ನು ಎ ಮತ್ತು ಎ 1 ವರ್ಗದ 4 ಕಂಪನಿಗಳ ಪೈಕಿ ಎರಡು ಕಂಪನಿಗಳು ಮಾತ್ರ ಎಫ್ಡಿಟಿ ಪಾವತಿಸಿವೆ. ಬಿ ಮತ್ತು ಬಿ 1 ವರ್ಗದ 33 ಕಂಪನಿಗಳ ಪೈಕಿ ಕೇವಲ 4 ಕಂಪನಿಗಳು ಎಫ್ಡಿಟಿ ಪಾವತಿಸಿದ್ದು, ಇನ್ನುಳಿದ ಕಂಪನಿಗಳು ತೆರಿಗೆ ಪಾವತಿಸಬೇಕಿದೆ. ಸಿ ಕೆಟಗರಿ 14 ಕಂಪನಿಗಳಲ್ಲಿ ಒಂದೂ ಕೂಡ ಎಫ್ಡಿಟಿ ಪಾವತಿ ಮಾಡಿಲ್ಲ.
ಆಸ್ತಿ ಮುಟ್ಟುಗೋಲು?: ಅ. 22 ಎಫ್ಡಿಟಿ ಕಟ್ಟಲು ಕೊನೆಯ ದಿನವಾಗಿದ್ದು, ಒಂದೆರೆಡು ದಿನಗಳಲ್ಲಿ ಸಿಸಿಎಫ್ ಅವರಿಗೆ ಪತ್ರ ಬರೆದು ಎಫ್ಡಿಟಿ ಪಾವತಿಸದಿರುವ ಕಂಪನಿಗಳ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಸಿ ಕೆಟಗರಿಯಲ್ಲಿರುವ ಕಂಪನಿಗಳ ಮೇಲೆ ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 109ರ ಅಡಿ ಕಂಪನಿಯ ಪಾಲುದಾರರ ಕಂದಾಯ ಆಸ್ತಿ ಮುಟ್ಟುಗೋಲಿಗೆ ಮುಂದಾಗುವ ಸಾಧ್ಯತೆ ಇದೆ. ಒಂದು ವೇಳೆ ಅರಣ್ಯ ಇಲಾಖೆಯು ಇಂಥ ನಿರ್ಧಾರಕ್ಕೆ ಮುಂದಾದರೆ ಸಿ ಕೆಟಗರಿಯ ಗಣಿ ಮಾಲೀಕರಿಗೆ ಮತ್ತಷ್ಟು ಆತಂಕವಾಗಲಿದೆ. ಈಗಾಗಲೇ ಗಣಿ ಗುತ್ತಿಗೆ ರದ್ದಾಗಿದ್ದು ನಷ್ಟ ವಸೂಲಿಗೆ ಸರ್ಕಾರ ಮುಂದಾಗುತ್ತಿರುವ ಮಧ್ಯೆಯೇ ಇದೀಗ ಆಸ್ತಿಯ ಮೇಲೆ ಅರಣ್ಯ ಇಲಾಖೆಯು ಕಣ್ಣು ಹಾಯಿಸುವ ಭೀತಿಯು ಸಾಕಷ್ಟು ಇದೆ.
ಈಗಾಗಲೇ ಆರ್ ಆ್ಯಂಡ್ ಆರ್ ಅನ್ನು ಪೂರ್ಣಗೊಳಿಸಿ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗಳು ಎಫ್ಡಿಟಿ ಪಾವತಿಸದಿದ್ದರೆ ಗಣಿಗಾರಿಕೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಇಲಾಖೆಯು ಚಿಂತನೆ ನಡೆಸಿದೆ. ಇನ್ನು ಆರ್ ಆ್ಯಂಡ್ ಆರ್ ಅನುಷ್ಠಾನಗೊಳಿಸುತ್ತಿರುವ ಎ ಮತ್ತು ಎ1, ಬಿ ಮತ್ತು ಬಿ1 ಕಂಪನಿಗಳು ಎಫ್ಡಿಟಿ ಕಟ್ಟದಿರುವ ಬಗ್ಗೆ ಸಿಇಸಿ ನೇಮಿಸಿರುವ ಮಾನಿಟರಿಂಗ್ ಕಮಿಟಿ ಗಮನಕ್ಕೆ ಇಲಾಖೆ ತರಲಾಗಿದೆ.
ಇನ್ಮುಂದೆ ಆರ್ ಆ್ಯಂಡ್ ಆರ್ ಯೋಜನೆ ಪೂರ್ಣಗೊಳಿಸಿದರೂ ಗಣಿಗಾರಿಕೆ ನಡೆಸಲು ಪರವಾನಗಿ ನೀಡದಿರಲು ಹಾಗೂ ಗಣಿ ಪರವಾನಗಿ ನವೀಕರಣ ಮಾಡದಿರುವಂತೆ ಅರಣ್ಯ ಇಲಾಖೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದೆ.
258,86 ಕೋಟಿ ಬಾಕಿ!
ಬಳ್ಳಾರಿ ಜಿಲ್ಲೆಯಲ್ಲಿ 65 ಗಣಿ ಕಂಪನಿಗಳು ಅರಣ್ಯ ಅಭಿವೃದ್ಧಿ ತೆರಿಗೆ ಪಾವತಿಸದಿರುವುದನ್ನು ಗುರುತಿಸಿ ಅರಣ್ಯ ಇಲಾಖೆ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು. 519,07,99,083 ಪಾವತಿಸಬೇಕಾಗಿದ್ದು, ಅದರಲ್ಲಿ ಕೇವಲ 17 ಕಂಪನಿಗಳು ಮಾತ್ರ 149,55,54,231 ತೆರಿಗೆ ಪಾವತಿಸಿವೆ. ಇನ್ನೂ ರು. 258,86,34,113 ಪಾವತಿಸಬೇಕಾಗಿದೆ.
ಲಾಡ್ ಸಹೋದರರು, ರೆಡ್ಡಿ
ಪಾಲುದಾರಿಕೆ ಕಂಪನಿಗಳಿಗೆ ಕಂಟಕ
ಸಿ ಕೆಟಗರಿಯಲ್ಲಿ ಶಾಸಕ ಅನಿಲ್ ಲಾಡ್ ಮತ್ತು ಸಚಿವ ಸಂತೋಷ್ ಲಾಡ್ ಪಾಲುದಾರಿಕೆಯ ವಿ.ಎಸ್. ಲಾಡ್ ಆ್ಯಂಡ್ ಕಂಪನಿ, ಜನಾರ್ದನ ರೆಡ್ಡಿ ಪಾಲುದಾರಿಕೆಯ ಎಎಂಸಿ, ಆನಂದ್ಸಿಂಗ್ ಒಡೆತನದ ಎಸ್ಬಿ ಮಿನರಲ್ಸ್, ಇನ್ನು ಭಾರತ ಮೈನ್ಸ್ ಆ್ಯಂಡ್ ಮಿನರಲ್ಸ್ ಕಂಪನಿ, ಎಚ್.ಜಿ. ರಂಗನಗೌಡ (ಎಂಎಲ್ 2148), ಲಕ್ಷ್ಮೀ ನಾರಾಯಣ ಮೈನಿಂಗ್ ಕಂಪನಿ, ಕನ್ನೇಲಾಲ್ ದುದೇರಿಯಾ, ನಿದಿ ಮೈನಿಂಗ್ ಕಂಪನಿ, ಎಸ್.ಬಿ. ಮಿನರಲ್ಸ್ (ಎಂಎಲ್ ನಂ 2550), ಎಸ್ಬಿ ಮಿನರಲ್ಸ್ (ಎಂಎಲ್ 2393), ಟ್ರೇಡೆಂಟ್ ಮಿನರಲ್ಸ್, ರಾಮಘಡ ಮಿನರಲ್ಸ್ ಆ್ಯಂಡ್ ಮೈನಿಂಗ್ ಪ್ರೈ.ಲಿ., ಹೊತ್ತೂರ್ ಟ್ರೇಡರ್ಸ್, ಮೈಸೂರು ಮಿನರಲ್ಸ್ ಲಿಮಿಟೆಡ್ (ಉಬಳಗಂಡಿ) ಇವುಗಳು ಎಫ್ಡಿಟಿ ಪಾವತಿಸಿಲ್ಲ.