ಎಲ್ಎಲ್ ಕಾಲುವೆ ಬಿರುಕು: 200 ಎಕರೆ ಬತ್ತಕ್ಕೆ ಹಾನಿ
ಕ.ಪ್ರ.ವಾರ್ತೆ ಬಳ್ಳಾರಿ ಅ. 24
ತುಂಗಭದ್ರಾ ಜಲಾಶಯದಿಂದ ಆಂಧ್ರಪ್ರದೇಶಕ್ಕೆ ಹರಿದು ಹೋಗುವ ಎಲ್ಎಲ್ (ಕೆಳಮಟ್ಟದ) ಕಾಲುವೆ 10 ಮೀಟರ್ನಷ್ಟು ಒಡೆದಿದೆ. ಕಾಲುವೆಯ ನೀರನ್ನು ಹಳ್ಳಕ್ಕೆ ಬಿಡುತ್ತಿರುವ ಹಿನ್ನೆಲೆಯಲ್ಲಿ ಸುಮಾರು 200 ಎಕರೆಗೂ ಅಧಿಕ ಪ್ರದೇಶದ ಬತ್ತ ನೀರಿಗೆ ಆಹುತಿಯಾಗಿದ್ದು, ಲಕ್ಷಾಂತರ ರುಪಾಯಿ ಬೆಳೆ ಹಾನಿಯಾಗಿದೆ.
2 ದಿನಗಳಿಂದ ಮಳೆ ಸುರಿಯುತ್ತಿರುವುದು, ಕಾಲುವೆಯ ಬಲ ಭಾಗದ ಗೋಡೆ ಶಿಥಿಲಾವಸ್ಥೆ ತಲುಪತ್ತಿದ್ದರೂ ಅಧಿಕಾರಿಗಳು ಪರಿಶೀಲಿಸದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕಾಲುವೆಯ 120.50 ಕಿ.ಮೀ.ನಲ್ಲಿ ಬಲ ಭಾಗದಲ್ಲಿ ಸಣ್ಣದೊಂದು ಬಿರುಕು ಬಿಟ್ಟಿದೆ. ನಂತರ 10 ಮೀಟರ್ನಷ್ಟು ಕಾಲುವೆ ಒಡೆದು ಹೋಗಿದೆ. ಪಕ್ಕದಲ್ಲೇ 150 ಎಕರೆ ಪ್ರದೇಶದ ಪಾಮ್ ಆಯಿಲ್ ಗಿಡಗಳಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಅಲ್ಲಿರುವ ಕೆಲವು ಎಕರೆ ಪ್ರದೇಶದ ಬತ್ತಕ್ಕೆ ಹಾನಿಯಾಗಿದೆ.
ಭಾರಿ ಹಾನಿ: ನೀರು ಹರಿದು ಹೊಲ ಗದ್ದೆಗಳಿಗೆ ಹೋಗಿ ಭಾರಿ ಹಾನಿಯಾಗದಂತೆ ತಡೆಯಲು ಹಾಗೂ ಕಾಲುವೆ ದುರಸ್ತಿಗೆ ಅನುಕೂಲವಾಗಲು ಎಲ್ಎಲ್ ಕಾಲುವೆಯ 103 ಕಿ.ಮೀ. ಹಾಗೂ 115 ಕಿ.ಮೀ. ವ್ಯಾಪ್ತಿಯಲ್ಲಿ ಎಸ್ಕೇಪ್ಗಳನ್ನು ತೆಗೆದು ಹಳ್ಳಕ್ಕೆ ನೀರು ಬಿಡಲಾಗುತ್ತಿದೆ. ಇದರ ಪರಿಣಾಮ ಅಲ್ಲಿನ ಸುಮಾರು 250ರಿಂದ 300 ಎಕರೆ ಪ್ರದೇಶದ ಬತ್ತ ಹಾನಿಯಾಗಿದೆ. ಇದರಿಂದಾಗಿ ಲಕ್ಷಾಂತರ ರುಪಾಯಿ ವೆಚ್ಚದ ಬತ್ತದ ಬೆಳೆ ನಾಶವಾಗುವ ಆತಂಕ ಶುರುವಾಗಿದೆ. ನೀರನ್ನು ಹಳ್ಳಕ್ಕೆ ಬಿಡುವುದರಿಂದ ಕಾಲುವೆ ದುರಸ್ತಿಯಾಗುವವರೆಗೆ ಕರ್ನಾಟಕದ ಇತರೆ ಪ್ರದೇಶ ಹಾಗೂ ಆಂಧ್ರಪ್ರದೇಶಕ್ಕೆ ಎಲ್ಎಲ್ ಕಾಲುವೆ ಮೂಲಕ ನೀರು ಹರಿಯುವುದು ಸ್ಥಗಿತವಾದಂತಾಗಿದೆ. ಇದು ಕಾಲುವೆಯ ಮುಂದಿನ ಭಾಗದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಬೇಗನೆ ಕಾಲುವೆ ದುರಸ್ತಿಯಾದರೆ ಮಾತ್ರ ನಿಟ್ಟುಸಿರು ಬಿಡಲು ಸಾಧ್ಯ.
ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ?: ಬೇಸಿಗೆಯಲ್ಲಿ ಕಾಲುವೆಗಳ ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯವರು ಕೈಗೆತ್ತಿಕೊಂಡು ಕಾಲುವೆಗಳು ಶಿಥಿಲಾವಸ್ಥೆ ಅಥವಾ ಇನ್ನಿತರ ಸಮಸ್ಯೆಗಳಿದ್ದರೆ ಕಾಮಗಾರಿ ಕೈಗೆತ್ತುಕೊಳ್ಳುತ್ತಾರೆ. ಆದರೆ ಅಧಿಕಾರಿಗಳು ಸರಿಯಾಗಿ ಪರಿಶೀಲಿಸದ ಕಾರಣ ಕಾಲುವೆ ಒಡೆದಿದೆ. ಇಂಥ ಸಮಸ್ಯೆಗೆ ಅಧಿಕಾರಿಗಳು ಕಾರಣರಾಗಿದ್ದು ವರ್ಷದ ಬೆಳೆ ನಾಶಕ್ಕೆ ನಾಂದಿಹಾಡಿದ್ದಾರೆ ಎಂಬುದು ರೈತರ ಆರೋಪ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಒಡೆದಿದೆ. ಏಕಾಏಕಿ ಎಸ್ಕೇಪ್ಗಳನ್ನು ತೆಗೆದು ನೀರು ಬಿಡುವುದರಿಂದ ಬತ್ತದ ಗದ್ದೆಗಳು ನಾಶವಾಗುತ್ತವೆ.
-ಗೋವಿಂದ, ರೈತ