ವಿಜೃಂಭಣೆಯ ಮಾರಮ್ಮ ಜಾತ್ರೆ
ನಾಯಕನಹಟ್ಟಿ: ಐತಿಹಾಸಿಕ ಗೌರಸಮುದ್ರ ಮಾರಮ್ಮದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಭಾದ್ರಪದ ಶುದ್ಧ ಮೊದಲ ದಿನ ದೇವಿಯ ಜಾತ್ರೆ ಜರುಗಿದ್ದು, ಲಕ್ಷಾಂತರ ಭಕ್ತ ಸಮೂಹ ದೇವಿಯ ದರ್ಶನ ಪಡೆದರು. ಬೆಳಗ್ಗೆ 10 ಗಂಟೆ ಸಮಯದಲ್ಲಿ ವೈಭವದ ಆಭರಣಗಳಿಂದ ಅಲಂಕರಿಸಿದ್ದ ದೇವಿಯನ್ನು ಗರ್ಭಗುಡಿಯಿಂದ ಹೊರಗಡೆ ತಂದು ಮೆರವಣಿಗೆ ಮುಖಾಂತರ ಮಧ್ಯಾಹ್ನ 12 ಗಂಟೆಗೆ ತುಮ್ಮಲ ಪ್ರದೇಶವನ್ನು ತಲುಪಿತು.
ದೇವಿಯ ಮೆರವಣಿಗೆಯಲ್ಲಿ ಭಕ್ತರು ತಮ್ಮ ಹೊಲಗಳಲ್ಲಿ ಉತ್ತಮ ಬೆಳೆಗಳು ಬರಲೆಂದು ಹರಕೆ ಹೊತ್ತಂತಹ ಭಕ್ತಾದಿಗಳು ದೇವಿಯು ದೇವಸ್ಥಾನದಿಂದ ತುಮ್ಮಲಿನ ಪ್ರದೇಶಕ್ಕೆ ಬರುವ ಸಮಯದಲ್ಲಿ ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಮತ್ತು ಸಾಕುಪ್ರಾಣಿಗಳಾದ ಕುರಿಮರಿ, ಕೋಳಿಮರಿಗಳನ್ನು ದೇವಿಗೆ ಸಮರ್ಪಿಸಿದರು.
ಪ್ರತಿ ಬೀದಿಯಲ್ಲಿ ಮೆರವಣಿಗೆ: ನಂತರ ತುಮ್ಮಲಿನಲ್ಲಿ ದೇವಿಗೆ ಬೇವಿನ ಹರಕೆ ತೀರಿಸಿದರು. ಲಕ್ಷಾಂತರ ಸುತ್ತಮುತ್ತಲಿನ ಭಕ್ತರು ನೆರೆಯ ಆಂಧ್ರಪ್ರದೇಶದಿಂದಲೂ ಸಮರೋಪಾದಿಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು.
ನಂತರ ದೇವಿಯ ಜ್ಯೋತಿ ಕಂಡ ಭಕ್ತರು ಸಂಜೆ ಸಮಯದಲ್ಲಿ ದೇವಿಯು ತುಮ್ಮಲಿನಿಂದ ಹೊರಟು ಗೌರಸಮುದ್ರದ ಪ್ರತಿಯೊಂದು ಬೀದಿ ಬೀದಿಯಲ್ಲಿಯೂ ಸಂಚರಿಸಿ ಗ್ರಾಮದ ಭಕ್ತರ ಕೃಪೆಗೆ ಪಾತ್ರಳಾಗಿ ರಾತ್ರಿ ಗರ್ಭ ಗುಡಿಯನ್ನು ಪ್ರವೇಶಿಸುವುದು. ಜಾತ್ರೆಯಲ್ಲಿ ಕೃಷಿ ವಸ್ತುಪ್ರದರ್ಶನ, ವಿವಿಧ ಇಲಾಖೆಯ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಬಾರಿ ಜಾತ್ರೆಯಲ್ಲಿ ಬಿಸಿಲು ಕಡಿಮೆ ಇದುದ್ದರಿಂದ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬಸ್ಸು, ಎತ್ತಿನಗಾಡಿ, ದ್ವಿಚಕ್ರ ವಾಹನಗಳಲ್ಲಿ ಆಗಮಿಸುತ್ತಿದ್ದರು.
ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ತೊಂದರೆಯಾಗದಂತೆ ಆರೋಗ್ಯ ಇಲಾಖೆಯಿಂದ ತಾತ್ಕಾಲಿಕ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆದಿದ್ದರು. ಪೊಲೀಸ್ ಇಲಾಖೆ ಸಹ 1 ಡಿ.ಎಸ್.ಪಿ., 5 ಸಿ.ಪಿ.ಐ., 15 ಎಸ್.ಐ., 22 ಎ.ಎಸ್.ಐಗಳನ್ನೊಳಗೊಂಡ 6 ಡಿ.ಆರ್. ವ್ಯಾನ್ ಮತ್ತು 1 ಕೆ.ಎಸ್.ಆರ್.ಪಿ. ತುಕಡಿ ನಿಯೋಜಿಸಿತ್ತು.