ಬಾಬುಲಾಲ್ ವಿರುದ್ಧ ಪ್ರಕರಣ ದಾಖಲು
ಬಳ್ಳಾರಿ: ನಗರದ ಬಾಬುಲಾಲ್ ಪರಶುರಾಮ್ ಪುರಿ ಮನೆ ಮೇಲೆ ದಾಳಿಯ ವೇಳೆ ದೊರೆತ 8.77 ಕೋಟಿ ನಗದು, ಕೋಟ್ಯಂತರ ಮೌಲ್ಯದ ಕಿಸಾನ್ ವಿಕಾಸ್ ಪತ್ರ, ಚೆಕ್ಗಳ ಕುರಿತು ಭಾನುವಾರ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಬಾಬುಲಾಲ್ ವಿರುದ್ಧ ವಿವಿಧ ಕಾಯ್ದೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ದೂರು ನೀಡಿದ್ದಾರೆ. ಏ. 11, 14ರಂದು ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ಅವರು ಬಾಬುಲಾಲ್ ಮನೆ ಪರಿಶೀಲನೆಗೆ ಸರ್ಚ್ ವಾರಂಟ್ ಹೊರಡಿಸಿ, ಗಾಂಧಿನಗರ ಇನ್ಸ್ಪೆಕ್ಟರ್ಗೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಾಬುಲಾಲ್ ಮನೆ ಮೇಲೆ ದಾಳಿ ಮಾಡಿ ನಗದು, ಕಿಸಾನ್ ವಿಕಾಸ ಪತ್ರ, ಹಲವು ಬ್ಯಾಂಕುಗಳ ಚೆಕ್ಗಳು, 100ಕ್ಕೂ ಹೆಚ್ಚು ಬ್ಯಾಂಕ್ ಖಾತೆ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳ ಪರಿಶೀಲನೆ ಕಾರ್ಯ ಮುಗಿದಿದ್ದರಿಂದ ಬಳ್ಳಾರಿ ಉಪವಿಭಾಗಾಧಿಕಾರಿ ಅನಿರುದ್ಧ ಶ್ರವಣ್ ದೂರು ನೀಡಿದ್ದಾರೆ. ಬಾಬುಲಾಲ್ ಪರಶುರಾಮ್ ಪುರಿ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಭೂ ಸುಧಾರಣೆ ಕಾಯ್ದೆ, ಚುನಾವಣೆಯಲ್ಲಿ ಹಂಚಲು ಹಣ ಸಾಗಾಟ, ಹಣದ ಆಮಿಷ ಒಡ್ಡುವ ಶಂಕೆ (ಐಪಿಸಿ 171 ಇ), ಸರ್ಕಾರಿ ಆದೇಶ ಉಲ್ಲಂಘನೆ (ಐಪಿಸಿ 188), ಮೋಸ (420), ಖೋಟಾ ನೋಟು ಚಲಾವಣೆ (489), ಕರ್ನಾಟಕ ಅಧಿಕ ಬಡ್ಡಿ ವಸೂಲಿ ನಿಷೇಧ ಇತ್ಯಾದಿ ಪ್ರಕರಣಗಳಲ್ಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಬಾಬುಲಾಲ್ ಮೇಲೆ ಮನಿ ಲ್ಯಾಂಡರಿಂಗ್, ಭೂ ಸುಧಾರಣೆ ಕಾಯ್ದೆ ಮುಂತಾದ ಕಾಯ್ದೆಗಳಡಿ ಭಾನುವಾರ ಪ್ರಕರಣದಾಖಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ-ಆಂಧ್ರ ಗಡಿ: ಮುಂದುರಿದ ಸರ್ವೆ ಕಾರ್ಯ
ಬಳ್ಳಾರಿ,: ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿ ಸರ್ವೆ ಆಫ್ ಇಂಡಿಯಾದ ಸರ್ವೇಯರ್ ಜನರಲ್ ಸ್ವರ್ಣ ಸುಬ್ಬರಾವ್ ನೇತೃತ್ವದಲ್ಲಿ ಭಾನುವಾರವೂ ಸರ್ವೆ ಕಾರ್ಯ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳಿಂದ ಭಾನುವಾರ ಸರ್ವೆ ಚುರುಕಾಗಿದೆ. ಅಧಿಕಾರಿಗಳು ಗ್ರಾಮಗಳ ನಕ್ಷೆಗಳ ಮೂಲಕ ಗಡಿ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶನಿವಾರ ಗಡಿ ಗುರುತನ್ನು ಪತ್ತೆ ಹಚ್ಚಿದ ಅಧಿಕಾರಿಗಳ ತಂಡ, ಗ್ರಾಮಗಳ ಸರಹದ್ದುಗಳನ್ನೂ ಗುರುತಿಸಿದೆ. ಭಾನುವಾರ ಆಂಧ್ರಪ್ರದೇಶ-ಕರ್ನಾಟಕ ಗಡಿ ಭಾಗದ ಓಬಳಾಪುರಂ, ಸಿದ್ಧಾಪುರ, ವಿಠ್ಠಲಾಪುರ, ತುಮಟಿ ಮುಂತಾದ ಆರು ಗ್ರಾಮಗಳಿಗೆ ಹೊಂದಿಕೊಂಡಿರುವ ಸರಹದ್ದುಗಳನ್ನು ಅಧಿಕಾರಿಗಳು ಗುರುತಿಸಿದರು. ಗಡಿ ಗುರುತುಗಳನ್ನು ಧ್ವಂಸ ಮಾಡಿದ ಪ್ರದೇಶಗಳಿಗೆ ಸರ್ವೆ ಅಧಿಕಾರಿಗಳು ತೆರಳಿ, ಪರಿಶೀಲನೆ ಮಾಡಿದರು. ಧ್ವಂಸವಾದ ಸ್ಥಳದಿಂದಲೇ ಜಿಪಿಆರ್ಎಸ್ ದತ್ತಾಂಶಗಳನ್ನು ಅಧಿಕಾರಿಗಳು ಸಂಗ್ರಹಿಸಿದರು. ಗ್ರಾಮಗಳ ಸರಹದ್ದುಗಳನ್ನು ಪತ್ತೆ ಹಚ್ಚುವುದರಿಂದ ಗಡಿ ಗುರುತುಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅಧಿಕಾರಿಗಳು ಸರ್ವೆ ಮುಗಿಸಿ, ಗಡಿ ಗುರುತುಗಳನ್ನು ನಿಗದಿ ಮಾಡಿ ಮೇ ಅಂತ್ಯದೊಳಗೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ.
ಕಚೇರಿ ನವೀಕರಣ ನನ್ನ ಪಾತ್ರವಿಲ್ಲ: ಆಂಜನೇಯ
ಹರಪನಹಳ್ಳಿ: 'ವಿಧಾನಸೌಧದಲ್ಲಿರುವ ನನ್ನ ಕಚೇರಿ ನವೀಕರಣ ಅಧಿಕಾರಿಗಳಿಗೆ ಬಿಟ್ಟದ್ದು, ಅದರಲ್ಲಿ ನನ್ನ ಪಾತ್ರವೇನೂ ಇಲ್ಲ' ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸ್ಪಷ್ಟಪಡಿಸಿದ್ದಾರೆ. ತಾಲೂಕಿನ ಕುಂಚೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಚುನಾವಣಾ ನೀತಿ ಸಂಹಿತೆ ಇರುವ ಕಾರಣ ನಾನು ವಿಧಾನಸೌಧದ ಕಚೇರಿಗೆ ಹೋಗಿಲ್ಲ. ಕಚೇರಿಯಲ್ಲಿ ಟೈಲ್ಸ್ ಹಾಕಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ನವೀಕರಣ ಮಾಡುವ ಸಂಬಂಧ ಫೋಟೊಗಳನ್ನು ಒಂದು ಕಡೆ ಇಟ್ಟಿದ್ದಾರೆ ಅಷ್ಟೆ. ಕಾಲಕಾಲಕ್ಕೆ ಕಚೇರಿ ನವೀಕರಣ ಏನು ಮಾಡಬೇಕೊ, ಅದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಡುತ್ತಾರೆ. ಆದ್ದರಿಂದ ಅದಕ್ಕೂ ನನಗೂ ಸಂಬಂಧವಿಲ್ಲ' ಎಂದರು.
ಸಾಲ ಬಾಧೆ: ರೈತ ಆತ್ಮಹತ್ಯೆ
ಭೇರ್ಯ: ಸಾಲಬಾಧೆ ತಾಳಲಾರದೆ ಮನನೊಂದು ರೈತರೊಬ್ಬರು ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಗಾಂಧಿ ವೃತ್ತದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಾಟನಹಳ್ಳಿಯ ರಂಗಸ್ವಾಮಿಗೌಡ ಎಂಬುವರ ಮಗ ರಾಘವೇಂದ್ರ (35) ಆತ್ಮಹತ್ಯೆಗೆ ಶರಣಾದವರು. ಇವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ. ರಾಘವೇಂದ್ರ ಪರಿಚಯಸ್ಥರು ಮತ್ತು ಕೆಲವು ಲೇವಾದೇವಿಗಾರರ ಹತ್ತಿರ ಕೈ ಸಾಲ ಮಾಡಿಕೊಂಡಿದ್ದು ದಿನೇ ದಿನೇ ಸಾಲಗಾರರ ಕಾಟ ಹೆಚ್ಚಾದಾಗ ಸ್ವಗ್ರಾಮದಿಂದ ಕಳೆದ ರಾತ್ರಿ ಶನಿವಾರ ಭೇರ್ಯ ಗ್ರಾಮಕ್ಕೆ ಬಂದು ಮಧ್ಯರಾತ್ರಿ ಗಾಂಧಿವೃತ್ತದಲ್ಲಿ ಕ್ರಿಮಿನಾಶಕ ಔಷಧ ಸೇವಿಸಿ, ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಪಕ್ಕದಲ್ಲಿರುವವರು ಭೇರ್ಯ ಉಪಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಬಂಧಪಟ್ಟವರಿಗೆ ವಿಷಯ ತಿಳಿಸಿದರು. ಭೇರ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ವಾರಸುದಾರರಿಗೆ ಶವ ಒಪ್ಪಿಸಲಾಯಿತು. ಸಾಲಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿದ ಮಲೇರಿಯಾ
ನಾಲತವಾಡ: ಕಳೆದೊಂದು ವಾರದಿಂದ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಾಲತವಾಡ ಗ್ರಾಮ ಸೇರಿದಂತೆ ಲೋಟಗೇರಿ, ಖಾನಾಪುರ ಹಾಗೂ ಅರಸನಾಳದಲ್ಲಿ ಒಟ್ಟು 8 ಮಂದಿಗೆ ಮಲೇರಿಯಾ ಕಾಣಿಸಿಕೊಂಡಿದ್ದು, ರಕ್ತ ತಪಾಸಣೆಯಿಂದ ಕಂಡು ಬಂದಿದೆ.
ಕಾಂಗ್ರೆಸ್ಗೆ ಮತ ನೀಡಿ ಎಂದಿದ್ದು ಸಾಹಿತಿಗಳಿಗೆ ಭೂಷಣವಲ್ಲ: ಕುಂ.ವೀ
ಮುಂಡರಗಿ: ಭ್ರಷ್ಟಾಚಾರ ಮಾಡದೇ ಇರುವ, ಬಡವರ ಹಾಗೂ ಹಿಂದುಳಿದವರ ಪರವಾಗಿರುವ, ಶುದ್ಧ ಹಸ್ತರಾಗಿ ಉತ್ತಮ ಆಡಳಿತ ನಡೆಸಬಲ್ಲ ಯಾವುದೇ ಪಕ್ಷಕ್ಕಾದರೂ ಮತ ಕೊಡಿ ಎಂದು ಹೇಳುವುದನ್ನು ಬಿಟ್ಟು ಕೆಲವು ಸಾಹಿತಿಗಳು ತಮ್ಮ ಹೀನ ಚಪಲ ತೀರಿಸಿಕೊಳ್ಳಲು ಚುನಾವಣೆಯಲ್ಲಿ ಇಂತಹ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದು ಸಾಹಿತಿಗಳಿಗೆ ಭೂಷಣವಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ಅವರು ಭಾನುವಾರ ಮುಂಡರಗಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಇತ್ತೀಚೆಗೆ ಜರುಗಿದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೆಲವು ಸಾಹಿತಿಗಳು ಕಾಂಗ್ರೆಸ್ಗೆ ಮತನೀಡಿ ಎಂದು ಹೇಳಿದ್ದನ್ನು ಟೀಕಿಸಿ ಮಾತನಾಡಿದರು. ಅವರು ಹೇಳಿದ ಪಕ್ಷಕ್ಕೆ ಮತದಾರರು ಮತ ಹಾಕಿದರೆ ಮುಂದೆ ಆ ಸರ್ಕಾರ ಬಂದಾಗ ತಮಗೆ ಅನೇಕ ಪ್ರಶಸ್ತಿಗಳು ಹಾಗೂ ವಿವಿಧ ಹುದ್ದೆಗಳು ಸಿಗಬಹುದು ಎಂಬ ಹೀನ ಚಪಲ ಸಾಹಿತಿಗಳಿಗೆ ಭೂಷಣವಲ್ಲ. ಜನತೆಗೆ ನೀವು ದ್ರೋಹ ಮಾಡಿದಂತಾಗುತ್ತದೆ ಎಂದರು.