ಅಹಿಂದ ಸಮುದಾಯ ಒಂದಾಗಲಿ
ಹೊಸಪೇಟೆ: ಹಿಂದುಳಿದ ಎಲ್ಲ ಸಮುದಾಯಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಎಲ್. ಸಿದ್ದನಗೌಡ ಹೇಳಿದರು.
ನಗರದಲ್ಲಿ ಭಾನುವಾರ ಅಹಿಂದ ಯುವ ವೇದಿಕೆ ಉದ್ಘಾಟಿಸಿ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಹಕ್ಕುಗಳಿಗೆ ಶೋಷಿತ ಸಮುದಾಯಗಳು ಒಗ್ಗಟ್ಟಾಗುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ವಿದ್ಯಾವಂತರಾಗುವ ಮೂಲಕ ಜಾಗೃತಿ ಹೊಂದಬೇಕಾಗಿದೆ. ಅಹಿಂದ ಸಮುದಾಯಗಳಲ್ಲಿರುವ ಶ್ರೀಮಂತರು ಇದೇ ಸಮುದಾಯದ ಬಡವರು ಮತ್ತು ದುರ್ಬಲರ ಅಭಿವೃದ್ಧಿಗೆ ಸಹಕಾರ ನೀಡಲು ಮುಂದಾಗಬೇಕು ಎಂದು ಹೇಳಿದರು.
ಶೇಖರ್ ಹೊರಪೇಟಿ ಮಾತನಾಡಿ, ದೇಶದಲ್ಲಿ ಶೇ.92ರಷ್ಟು ಅನಕ್ಷರಸ್ಥರು ಹಿಂದುಳಿದ ಅಹಿಂದ ಸಮುದಾಯಕ್ಕೆ ಸೇರಿದವರು. ರಾಜ್ಯದಲ್ಲಿ ಶೇ. 52ರಷ್ಟು ಅಹಿಂದ ಸಮುದಾಯವಿದ್ದರೂ ಯಾವುದೇ ರಾಜಕೀಯ ಪಕ್ಷಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಎಲ್ಲ ಶೋಷಿತ ಸಮುದಾಯಗಳು ಒಂದಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಅಹಿಂದ ಯುವ ವೇದಿಕೆ ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಕೊಟ್ರೇಶ್, ಕಾಂಗ್ರೆಸ್ ಮುಖಂಡರಾದ ಡಿ. ಅಯ್ಯಾಳಿ ಮೂರ್ತಿ, ಅಬೀದ್ ಹುಸೇನ್, ಎಂ.ಕೆ. ಹನುಮಂತಪ್ಪ, ಬಿ. ಸುದರ್ಶನ, ಕುಮಾರಸ್ವಾಮಿ, ಜಿ. ಗೋಣಿಬಸಪ್ಪ ಇದ್ದರು. ಜಿಲ್ಲಾ ಕುರಬರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಲ್. ಸಿದ್ದನಗೌಡ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಕಾಕುಬಾಳು ಸ್ವಾಗತಿಸಿದರು. ವಿಶ್ವನಾಥ ನಿರೂಪಿಸಿದರು.