ಗ್ರಾಮೀಣ ಪ್ರತಿಭೆಗೆ ಪೈಕಾ ಸಹಕಾರಿ: ಪರಮೇಶ್ವರ ನಾಯ್ಕ
ಬಳ್ಳಾರಿ: ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಫೈಕಾ ಯೋಜನೆ ಹೆಚ್ಚು ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅಭಿಪ್ರಾಯಪಟ್ಟರು.
ಬಳ್ಳಾರಿಯಲ್ಲಿ ಭಾನುವಾರ ಮಧ್ಯಾಹ್ನ ಆರಂಭವಾದ 6ನೇ ರಾಷ್ಟ್ರೀಯ ಗ್ರಾಮೀಣ ಪೈಕಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪಟ ಗ್ರಾಮೀಣ ಕ್ರೀಡಾಪ್ರತಿಭೆಗಳು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ತೋರುತ್ತಿದ್ದಾರೆ. ಇಂತಹ ಕ್ರೀಡಾ ಪ್ರತಿಭೆಗಳಿಗೋಸ್ಕರವೆ ಕೇಂದ್ರ ಸರ್ಕಾರ 2008ನೇ ಸಾಲಿನಲ್ಲಿ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನದ ಮಹಾತ್ವಾಕಾಂಕ್ಷಿ ಯೋಜನೆಯನ್ನು ಪ್ರಥಮ ಬಾರಿಗೆ ಅನುಷ್ಠಾನಕ್ಕೆ ತಂದಿದೆ. ಇಡೀ ದೇಶದ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಈ ಪೈಕಾ ಯೋಜನೆಯು ಸಹಕಾರಿಯಾಗಿದೆ ಎಂದರು.
ಮಹತ್ತರ ಸಾಧನೆ: ಗ್ರಾಮೀಣ ಯುವ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಪೈಕಾ ಗ್ರಾಮೀಣ ಕ್ರೀಡಾಕೂಟಗಳನ್ನು ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಂಘಟಿಸಲಾಗುತ್ತಿದ್ದು, ಈ ಕ್ರೀಡೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಉತ್ತೇಜನಕಾರಿ ವಾತಾವರಣ ನಿರ್ಮಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯ ಯುವ ನೀತಿ ಮತ್ತು ಕ್ರೀಡಾ ನೀತಿಯನ್ನು ರೂಪಿಸಿ, ರಾಜ್ಯದ ಕ್ರೀಡಾಪಟುಗಳ ಮಹತ್ತರ ಸಾಧನೆಗೆ ದಾರಿದೀಪವಾಗಿದೆ ಎಂದು ತಿಳಿಸಿದರು.
ಆರೋಗ್ಯಕರ, ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕಾದರೆ, ಇಂದಿನ ಯುವ ಪೀಳಿಗೆಯು ಸದೃಢ ಆರೋಗ್ಯ ಹೊಂದಬೇಕು. ಸದೃಢ ಶರೀರದಿಂದ ಮಾತ್ರ ಸದೃಢ ಮನಸ್ಸು ಇರಲು ಸಾಧ್ಯ ಎನ್ನುವಂತೆ ವಿದ್ಯಾರ್ಥಿ ದಿಸೆಯಲ್ಲಿಯೆ ಮಕ್ಕಳು ಓದಿನ ಜತೆಗೆ ಕ್ರೀಡೆಗಳ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈಜುಕೊಳ ನಿರ್ಮಾಣ: ರಾಜ್ಯದ ಪ್ರಪ್ರಥಮ ಮತ್ತು ದೇಶದ ಎರಡನೇ ಅಂತಾರಾಷ್ಟ್ರೀಯ ಒಲಿಂಪಿಕ್ ಗುಣಮಟ್ಟದ 50 ಮೀಟರ್ ಅಳತೆ ಒಳಾಂಗಣ ಈಜುಕೋಳ ನಿರ್ಮಿಸಲಾಗುತ್ತಿದೆ. ದೇಶದ ರಾಜಧಾನಿ ನವದೆಹಲಿ ಹೊರತು ಪಡಿಸಿದರೆ ದೇಶದಲ್ಲಿ ಎಲ್ಲಿಯೂ ಇದಂತ ಈಜುಕೋಳ ಇಲ್ಲ. ಆದರೆ ಇಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಪಂ ಸಿಇಒ ಮಂಜುನಾಥ್ ನಾಯಕ್, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಸಹಾಯಕ ಆಯುಕ್ತ ಅನಿರುದ್ಧ ಶ್ರವಣ್, ಪಾಲಿಕೆ ಸದಸ್ಯರಾದ ಬೆಣಕಲ್ಲು ಬಸವರಾಜಗೌಡ, ಅಕ್ಬರ್ ಹಾಗೂ ರಾಂಪ್ರಸಾದ್ ಸೇರಿದಂತೆ ಇತರರು ಇದ್ದರು.
ಬೆಂಗಳೂರಿನ ಪೈಕಾ ಕ್ರೀಡಾಲಯದ ಉಪ ನಿರ್ದೇಶಕ ರಮೇಶ್ ಸ್ವಾಗತಿಸಿ, ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ವಂದಿಸಿದರು. ಕ್ರೀಡಾ ಪ್ರಶಸ್ತಿ ಪುರಸ್ಕೃತ ದಯಾನಂದ ಕಿಚಡಿ ಅವರು ಕ್ರೀಡಾ ಜ್ಯೋತಿ ತಂದರು. ಕ್ರೀಡಾಪಟುಗಳಿಗೆ ಬ್ರುಣಾನಿಧಿ ಕ್ರೀಡಾ ಪ್ರಮಾಣ ಬೋಧಿಸಿದರು.
ದೇಶದ 13 ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು. ತ್ರಿಪುರ, ಕರ್ನಾಟಕ, ಉತ್ತರಾಖಂಡ, ಮಣಿಪುರ, ಹರಿಯಾಣ, ಆಂಧ್ರ, ತಮಿಳುನಾಡು, ಜಾರ್ಖಂಡ್, ಹಿಮಾಚಾಲಪ್ರದೇಶ, ಮಿಜೋರಾಂ, ಮಧ್ಯಪ್ರದೇಶ, ಕೇರಳ, ಪಂಜಾಬ್ ರಾಜ್ಯಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು. ಆದರೆ ಭಾನುವಾರ ಯಾವುದೇ ಸ್ಪರ್ಧೆಗಳು ನಡೆಯಲಿಲ್ಲ.