ನಾರಾಯಣ ಇ ಟೆಕ್ನೋ ಶಾಲೆ ಅನುಮತಿ ರದ್ದು
ಬಳ್ಳಾರಿ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಳ್ಳಾರಿಯ ಗಾಂಧಿನಗದಲ್ಲಿರುವ ನಾರಾಯಣ ಇ ಟೆಕ್ನೋ ಪ್ರಾಥಮಿಕ ಶಾಲೆಗೆ ನೀಡಲಾದ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯ ತಿಳಿಸಿದ್ದಾರೆ.
ನಾರಾಯಣ ಇ ಟೆಕ್ನೋ ಶಾಲೆಯು ಇಲಾಖಾ ಆದೇಶ ಪಾಲಿಸದೆ ಮತ್ತು ಇಲಾಖಾ ಅನುಮತಿ ಇಲ್ಲದೇ ತರಗತಿಗಳನ್ನು ನಡೆಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸದರಿ ಶಾಲೆಗೆ 2011-12ನೇ ಸಾಲಿನಲ್ಲಿ 1ನೇ ತರಗತಿಯಿಂದ ಅನುಮತಿ ನೀಡಲಾಗಿದ್ದು, ಪ್ರತಿ ವರ್ಷಕ್ಕೊಂದು ಬಾರಿ ಸ್ವಾಭಾವಿಕ ಬೆಳವಣಿಗೆ ಮೇಲೆ ತರಗತಿಯನ್ನು ಮೇಲ್ದರ್ಜೆಗೇರಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಶಾಲೆಯನ್ನು ಮುಚ್ಚಲು ಕ್ರಮ ಕೈಗೊಂಡಿರುವುದರಿಂದ ಪಾಲಕರು ನಾರಾಯಣ ಇ ಟೆಕ್ನೋ ಪ್ರಾಥಮಿಕ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಬಾರದೆಂದು ಮನವಿ ಮಾಡಿದ್ದಾರೆ.