ಪಡಿತರ ವಿತರಿಸಿ: ಸೂಚನೆ
ಕೊಟ್ಟೂರು: ಸರ್ಕಾರ ನಿಗದಿಗೊಳಿಸಿದ ಸಮಯಕ್ಕನುಗುಣವಾಗಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಯವರು ವಿತರಣೆ ಮಾಡಬೇಕು. ನ್ಯಾಯಬೆಲೆ ಅಂಗಡಿಗಳನ್ನು ನಡೆಸುವವರು ಸ್ಟಾಕ್ಬೋರ್ಡ್, ವಿತರಣೆ ಕ್ರಮ, ದಾಸ್ತಾನುಗಳ ಸಮಗ್ರ ವಿವರಗಳನ್ನು ಸದಾ ನೀಡಬೇಕು ಎಂದು ಕೂಡ್ಲಿಗಿ ತಹಸೀಲ್ದಾರ್ ನಿತೀಶ್ ಪಾಟೀಲ್ ಹೇಳಿದರು. ಅವರು ಶನಿವಾರ ಪಟ್ಟಣದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸರ್ಕಾರ ಜಾರಿಗೊಳಿಸಿದ ಪಡಿತರ ಖಾತರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಫೆ. 1 ರಿಂದ ಜಾರಿಯಾದ ಆಹಾರ ಇಲಾಖೆಯ ಪಡಿತರ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದರು. ಕೆ.ಡಿ. ವಡ್ಡರ್, ಮಂಜುನಾಥ, ವಿಜಯಕುಮಾರ್ ಇದ್ದರು.
ಹೊಡೆದಾಟ: ಓರ್ವ ಸಾವು
ಬಳ್ಳಾರಿ: ಕ್ಷುಲ್ಲಕ ಕಾರಣಕ್ಕಾಗಿ ಕಲ್ಲಿನಿಂದ ತಲೆಗೆ ಹೊಡೆದ ಪರಿಣಾಮ ವ್ಯಕ್ತಿ ಮೃತ ಪಟ್ಟಿರುವ ಘಟನೆ ನಗರದ ದತ್ತಸಾಯಿ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು ದಾವಣಗೆರೆಯ ಸಂಗಪ್ಪ(45) ಎಂದು ಗುರುತಿಸಲಾಗಿದೆ. ದತ್ತಸಾಯಿನಗರದಲ್ಲಿ ಸ್ವಪ್ನ ಎನ್ನುವವರು ಮನೆ ಕಟ್ಟಿಸುತ್ತಿದ್ದು, ಮನೆಗೆ ಟೈಲ್ಸ್ಗಳನ್ನು ಫಿಟ್ ಮಾಡಲು ದಾವಣಗೆರೆಯಿಂದ ಸಂಗಪ್ಪ ಹಾಗೂ ಕಾರವಾರದಿಂದ ಸಂತೋಷ್ ಎನ್ನುವವರು ಬಂದಿದ್ದರು. ಇಬ್ಬರು ಒಮ್ಮೊಮ್ಮೆ ಜಗಳವಾಡುತ್ತಿದ್ದರು. ಶನಿವಾರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಸಂತೋಷ ಸಂಗಪ್ಪನಿಗೆ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ. ಗಾಯಗೊಂಡಿದ್ದ ಆತನನ್ನು ವಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಗಪ್ಪ ಮೃತ ಪಟ್ಟಿದ್ದಾನೆ. ಈ ಕುರಿತಾಗಿ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಪಡಿತರ ದಾಸ್ತಾನು ಪತ್ತೆ
ಬಳ್ಳಾರಿ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಮನೆಯ ಮೇಲೆ ದಾಳಿ ಮಾಡಿ ರು. 14500 ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಎಮ್ಮಿಗನೂರಿನಲ್ಲಿ ನಡೆದಿದೆ. ಎಮ್ಮಿಗನೂರು ಗ್ರಾಮದ ದಸ್ತಗಿರಿಯಮ್ಮ ಮನೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುರುಗೋಡು ಸಿಪಿಐ ಲಕ್ಷ್ಮೀ ಕಾಂತಯ್ಯ, ಪಿಎಸ್ಐ ಸೋಮಶೇಖರ್ ನೇತೃತ್ವದಲ್ಲಿ ಆಹಾರ ಇಲಾಖೆಯ ನಿರೀಕ್ಷಕ ಶರಣಬಸಯ್ಯ ಜಂಟಿಯಾಗಿ ದಾಳಿ ಮಾಡಿದರು. 36 ಚೀಲದಲ್ಲಿ ಸಂಗ್ರಹಿಸಿದ್ದ ರು. 14500 ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾದಾಪೀರ್ ಎನ್ನುವರ ಮೇಲೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.