ವಿಶೇಷ ಪ್ರಚಾರಾಂದೋಲನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 2
ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗಾಗಿ ರೂಪಿಸಿರುವ ಹತ್ತು-ಹಲವು ಯೋಜನೆಗಳ ಬಗ್ಗೆ ಹಾಗೂ ಸಾಧಿಸಿರುವ ಪ್ರಗತಿ ಕುರಿತು ಜನಜಾಗೃತಿಗೊಳಿಸುವ ಉದ್ದೇಶದಿಂದ ವಾರ್ತಾ ಇಲಾಖೆ ಹಮ್ಮಿಕೊಂಡಿರುವ ನಮ್ಮ ನಾಡು, ಪ್ರಗತಿ ದರ್ಶನ ಕುರಿತ ವಿಶೇಷ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಆವರಣದಲ್ಲಿ ಶನಿವಾರ ಜಿಪಂ ಸಿಇಒ ಮಂಜುನಾಥ ನಾಯಕ್ ಮತ್ತು ಸಹಾಯಕ ಆಯುಕ್ತ ಅನಿರುದ್ಧ ಶ್ರವಣ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಹಿಂದುಳಿದ ಅದರಲ್ಲೂ ವಿಶೇಷವಾಗಿ ಹೈದರಾಬಾದ್-ಕರ್ನಾಟಕಕ್ಕೆ ಸೇರಿದ ಬೀದರ್, ಕೊಪ್ಪಳ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಸೇರಿದಂತೆ ಧಾರವಾಡ ಜಿಲ್ಲೆಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ವಾರ್ತಾ ಇಲಾಖೆಯು ಈ ಜಿಲ್ಲೆಗಳಿಗೆ ಸೇರಿದ ಆಯ್ದ 1300 ಹಳ್ಳಿಗಳಲ್ಲಿ ವಿಶಾಲ ಎಲ್ಇಡಿ ಪರದೆ ಹಾಗೂ ಅತ್ಯುತ್ತಮ ಧ್ವನಿವರ್ಧಕ ವ್ಯವಸ್ಥೆ ಹೊಂದಿರುವ ವಾಹನಗಳನ್ನು ಉಪಯೋಗಿಸಿಕೊಂಡು ಆಂದೋಲನ ಹಮ್ಮಿಕೊಂಡಿದೆ. ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು. ದಿನವೊಂದಕ್ಕೆ 6 ಗ್ರಾಮಗಳಲ್ಲಿ ನಡೆಯುವ ಪ್ರಚಾರಾಂದೋಲನ ಕಾರ್ಯವನ್ನು 30 ದಿನಗಳವರೆಗೆ ನಿರಂತರವಾಗಿ ಕೈಗೊಂಡು ಜನ ಜಾಗೃತಿಗೊಳಿಸಲಾಗುವುದು ಎಂದರು.
ಬೀದಿ ನಾಟಕಗಳು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಡೆಯಲಾಗುವುದು. ಪ್ರಸಕ್ತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಹೈದರಾಬಾದ್-ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನ, ಕೃಷಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಅಭ್ಯುದಯ, ಗ್ರಾಮೀಣಾಭಿವೃದ್ಧಿ ಇವೆ ಮುಂತಾದ ಯೋಜನೆಗಳ ಬಗ್ಗೆ ಜನರಿಗೆ ಈ ಆಂದೋಲನದ ಮೂಲಕ ಮಾಹಿತಿ ನೀಡಲಾಗುವುದು.
ಸರ್ಕಾರದ ಅಭಿವೃದ್ಧಿ ಯೋಜನೆಗಳ ಆಧಾರಿತ ಕಥಾಚಿತ್ರ, ಸಾಕ್ಷ್ಯಚಿತ್ರ ಹಾಗೂ ಕನ್ನಡ ನಾಡು-ನುಡಿ ಕುರಿತು ಅಭಿಮಾನ ಮೂಡಿಸುವ ಕಥಾಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸರ್ಕಾರದ ಯೋಜನೆ, ಸಾಧನೆಗಳ ಕುರಿತಂತೆ ಇಲಾಖೆ ಹೊರ ತಂದಿರುವ ಕಿರು ಪ್ರಕಟಣೆಗಳನ್ನು ಜನರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ, ಡಿಡಿಪಿಐ ವೀರಣ್ಣ ಎಸ್. ಜತ್ತಿ, ವಾರ್ತಾಧಿಕಾರಿ ಎಚ್. ಶ್ರೀನಿವಾಸ, ಈವೆಂಟ್ ಮ್ಯಾನೇಜರ್ ಶಿವು ಇದ್ದರು.