ಚೇಳ್ಳಗುರ್ಕಿ: ಇಂದು ಬಯಲಾಟ
ಬಳ್ಳಾರಿ: ಶ್ರೀ ಎರ್ರಿತಾತ ಕಲಾ ಸಂಘದಿಂದ ಊರದೇವರ ಹರಕೆ ಕಾರ್ಯಕ್ರಮದ ನಿಮಿತ್ತ 'ರಾಮಾಯಣ' ಬಯಲಾಟ ಪ್ರದರ್ಶನ ಫೆ. 5ರಂದು ಬುಧವಾರ ರಾತ್ರಿ 8.30ಕ್ಕೆ ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿತಾತ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದೆ. ಬಯಲಾಟವು ರಾಮಾಯಣ ಕಥಾ ಪ್ರಸಂಗ ಆಧರಿಸಿದ್ದು, ನುರಿತ ಕಲಾವಿದರು, ವಿವಿಧ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಮನ ಪಾತ್ರದಲ್ಲಿ ಕೆ. ಪಂಪಣ್ಣ, ಲಕ್ಷ್ಮಣ ಪಾತ್ರದಲ್ಲಿ ಎ. ಭೀಮಪ್ಪ, ರಾವಣ ಪಾತ್ರದಲ್ಲಿ ಅಂಜಿನಪ್ಪ, ಆಂಜನೇಯ ಪಾತ್ರದಲ್ಲಿ ಗುಮ್ಮನೂರು ಎರ್ರೆಪ್ಪ ಸೇರಿದಂತೆ ಒಟ್ಟು 12 ಕಲಾವಿದರ ಪಾತ್ರಗಳನ್ನೊಳಗೊಂಡು ಬಯಲಾಟ ಪ್ರದರ್ಶನ ಇದೆ. ಸುತ್ತನ ಗ್ರಾಮಸ್ಥರು ಬಯಲಾಟ ವೀಕ್ಷಿಸಲು ಜನತೆ ಆಗಮಿಸುವರು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನಸಿಕ ಅಸ್ವಸ್ಥ ನೇಣಿಗೆ ಶರಣು
ಬಳ್ಳಾರಿ: ಇಲ್ಲಿನ ಬ್ರಾಹ್ಮಣ ಬೀದಿಯ ನಿವಾಸಿ, ಮಾನಸಿಕ ಅಸ್ವಸ್ಥ ಆನಂದ್ (25) ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದ ಈತನಿಗೆ ಈಗಾಗಲೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕಾಯಿಲೆ ವಾಸಿಯಾಗದೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಟ್ಟೂರೇಶ್ವರ ತೇರುಗಡ್ಡೆ ಹೊರಕ್ಕೆ
ಕೊಟ್ಟೂರು: ಬೃಹತ್ ಗಾಲಿಗಳುಳ್ಳ ತೇರುಗಡ್ಡೆಯನ್ನು ಭಕ್ತರು ಶ್ರದ್ಧಾ, ಭಕ್ತಿಯಿಂದ ಹೊರ ಹಾಕುವ ಮೂಲಕ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳಿಗೆ ವಸಂತ ಪಂಚಮಿಯ ದಿನವಾದ ಮಂಗಳವಾರ ಗೋಧೂಳಿ ಸಮಯದಲ್ಲಿ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು. ಸ್ವಾಮಿಯ ರಥೋತ್ಸವ ಫೆ. 24ರ ಸೋಮವಾರ ಸಂಜೆ ಜರುಗಲಿದ್ದು, ಇದಕ್ಕೆ ಪೂರಕವಾಗಿ ಪೂರ್ಣ ಪ್ರಮಾಣದ ರಥ ನಿರ್ಮಾಣ ಕಾರ್ಯ ಕೈಗೊಳ್ಳಲು ತೇರುಗಡ್ಡೆಯನ್ನು ಹೊರ ಹಾಕಲಾಯಿತು. 100 ಅಡಿಗೂ ಹೆಚ್ಚು ಎತ್ತರದ ರಥ ನಿರ್ಮಾಣ ಕಾರ್ಯ ಭಾರತ ಹುಣ್ಣಿಮೆಯ ನಂತರ ಆರಂಭಗೊಳ್ಳಲಿದೆ.
ಬಿಜೆಪಿಗೆ ನೇಮಕ
ಬಳ್ಳಾರಿ: ಬಿಜೆಪಿಯ ಎಸ್ಟಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿ ವಿ. ಬಾಲರಾಜು ಆಯ್ಕೆಯಾಗಿದ್ದಾರೆ. ಪಕ್ಷದ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯರನ್ನಾಗಿ ವಿ. ಬಾಲರಾಜು ನೇಮಕ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.