ವೆಂಕಟೇಶ್ವರ ಜಾತ್ರೆ: ಕುಸ್ತಿ ಅಖಾಡ ಸಿದ್ಧ
ಹಗರಿಬೊಮ್ಮನಹಳ್ಳಿ: ರಾಮನಗರದ ವೆಂಕಟೇಶ್ವರ ಸ್ವಾಮಿ ರಥೋತ್ಸವದ ನಿಮಿತ್ತ ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಫೆ. 5, 6ರಂದು ಜರುಗುವ ಬಯಲು ಕುಸ್ತಿ ಪಂದ್ಯಾವಳಿಗೆ ಕುಸ್ತಿ ಅಖಾಡ ಸಿದ್ಧಗೊಂಡಿದೆ. ಇಲ್ಲಿ ಕುಸ್ತಿ ಪಂದ್ಯಾವಳಿಗಾಗಿ ಬೃಹತ್ ಗಾತ್ರದ ಆಖಾಡವನ್ನು ನಿರ್ಮಿಸಲಾಗಿದೆ.
ಏಕಕಾಲಕ್ಕೆ ಎಂಟು ಜತೆ ಪೈಲ್ವಾನರು (16 ಪೈಲ್ವಾನರು) ಸೆಣಸಾಡುವಷ್ಟು ಅಖಾಡವನ್ನು ನಿಮಿಸಲಾಗಿದೆ. ಮೂನ್ನೂರಕ್ಕೂ ಹೆಚ್ಚು ಚೀಲದಲ್ಲಿ ಮರಳನ್ನು ತುಂಬಿ ಆಖಾಡದ ಸುತ್ತಲು ತಡೆ ನಿರ್ಮಿಸಲಾಗಿದೆ. ನಾಲ್ಕು ದಿಕ್ಕಿನಿಂದಲೂ ಪೈಲ್ವಾನರು ಅಖಾಡದೊಳಕ್ಕೆ ಪ್ರವೇಶಿಸಲು ಮೆಟ್ಟಿಲು ವ್ಯವಸ್ಥೆ ಮಾಡಲಾಗಿದೆ. ಈ ಭಾಗದಲ್ಲಿ ಇಂತಹ ಬೃಹತ್ ಗಾತ್ರದ ಅಖಾಡ ಎಲ್ಲೂ ಇಲ್ಲ ಎನ್ನುವುದು ಜನತೆ ಮಾತು. ಪ್ರತಿವರ್ಷ ರಥೋತ್ಸವದ ಸಮಯದಲ್ಲಿ ಎರಡು ದಿನಗಳ ಕಾಲ ಇಲ್ಲಿ ಭರ್ಜರಿ ಕುಸ್ತಿ ಪಂದ್ಯಾವಳಿಗಳು ಜರುಗುತ್ತವೆ. ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿ ಕುಸ್ತಿ ಆಡುತ್ತಾರೆ.