ಸಚಿವ ಪಿಟಿಪಿ ಜತೆ ಭಿನ್ನಾಭಿಪ್ರಾಯ ಇಲ್ಲ: ರವೀಂದ್ರ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕರ ಜತೆ ಯಾವುದೇ ರೀತಿಯ ಭಿನ್ನಾಭಿಪ್ರಾಯ. ಅಸಮಧಾನಗಳಿಲ್ಲ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಹಂಪಿ ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಯಾವುದೇ ರೀತಿಯ ಅಸಮಾಧಾನಗಳಾಗಲಿ, ವ್ಯತ್ಯಾಸಗಳಿಲ್ಲ. ಜಿಲ್ಲಾ ಸಚಿವರ ಹಾಗೂ ಜಿಲ್ಲಾಡಳಿತದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದು ಇಲ್ಲ ಎಂದರು.
ಹಂಪಿ ಉತ್ಸವಕ್ಕಾಗಿ ಜನರಿಂದ ಗೋಲ್ಡ್, ಪ್ಲಾಟಿನಂ ಪಾಸ್‌ಗಳ ಹೆಸರಿನಲ್ಲಿ ಹಣ ಸಂಗ್ರಹಿಸಿದ ಬಗ್ಗೆ ತಮಗೆ ಬೇಸರವಿದೆ. ಈ ವರ್ಷ ನಡೆದ ಹಂಪಿ ಉತ್ಸವದಲ್ಲಿ ನಾನು ಪಾಲ್ಗೊಳ್ಳದಿರುವುದೇ ಒಳ್ಳೆಯದಾಯಿತು ಎಂದು ಹೇಳಿದರು.
ಬಿಎಸ್ಸಾರ್ ಶಾಸಕ ಬಿ. ಶ್ರೀರಾಮುಲು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವೀಂದ್ರ, ಬೇರೆ ಯಾವುದೇ ಪಕ್ಷಗಳ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮುನ್ನ ಆಯಾ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಭಿಪ್ರಾಯ ಪಡೆಯುತ್ತಾರೆ. ಜಿಲ್ಲೆಯ ಎಲ್ಲ ಮುಖಂಡರು ಒಪ್ಪಿಗೆ ನೀಡಿದಾಗ ಮಾತ್ರ ಸೇರಿಸಿಕೊಳ್ಳುತ್ತಾರೆ ಎಂದ ಅವರು, ವೈಯಕ್ತಿಕವಾಗಿ ಶ್ರೀರಾಮುಲು ಅವರ ಸೇರ್ಪಡೆಯಿಂದ ಪಕ್ಷಕ್ಕೆ ಒಳಿತಾಗಲ್ಲ.
ಈ ಹಿಂದೆ ಅಕ್ರಮ ಗಣಿಗಾರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಬೆಂಗಳೂರಿನಿಂದ ಬಳ್ಳಾರಿವರೆಗೆ ನಡೆಸಿದ ಪಾದಯಾತ್ರೆ ಹಾಗೂ ಪಕ್ಷದ ಇಲ್ಲಿನ ಕಾರ್ಯಕರ್ತರು ಪಟ್ಟ ಶ್ರಮ ಶ್ರೀರಾಮುಲು ಸೇರ್ಪಡೆಯಿಂದ ವ್ಯರ್ಥವಾಗುತ್ತದೆ. ಅವರ ಸೇರ್ಪಡೆಯನ್ನು ವೈಯಕ್ತಿಕವಾಗಿ ನಾನು ಒಪ್ಪುವುದಿಲ್ಲ ಎಂದರು. ಜಿಪಂ ಅಧ್ಯಕ್ಷರು, ಸದಸ್ಯರು ಮತ್ತಿತರರು ಸಿಇಒ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರಿಂದ ಅವರನ್ನು ವರ್ಗಾಯಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದರು. ಗೋಷ್ಠಿಯಲ್ಲಿ ಕಮಲಾ ಮರಿಸ್ವಾಮಿ, ಕಲ್ಲುಕಂಬ ಪಂಪಾಪತಿ ಇತರರಿದ್ದರು.
8ರಂದು ದಿ. ಎಂಪಿಪಿ ಪುಣ್ಯಸ್ಮರಣೆ
ಬಳ್ಳಾರಿ: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮ ಫೆ.8ರಂದು ಶನಿವಾರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಹಮ್ಮಿಕೊಂಡಿದೆ.
ನಗರದಲ್ಲಿ ಬುಧವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಭಾರತಿಯ ಗೌರವಾಧ್ಯಕ್ಷ, ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ಎಂ.ಪಿ. ಪ್ರಕಾಶ್‌ರ ತೃತೀಯ ಪುಣ್ಯಸ್ಮರಣೆಯ ಜತೆಗೆ ಅಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತನಮನ ಹಾಗೂ ಎಂ.ಪಿ. ಪ್ರಕಾಶ್ ಕಲಾನಿಕೇತನ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಅಂದು ಬೆಳಗ್ಗೆ 10ಕ್ಕೆ ಎಂ.ಪಿ. ಪ್ರಕಾಶ್‌ರ 3ನೇ ಪುಣ್ಯಸ್ಮರಣೆ ನಿಮಿತ್ತ ಎಂಪಿಪಿ ಸಮಾಧಿಗೆ ಪೂಜಾ ಕಾರ್ಯಕ್ರಮ ಜರುಗಲಿದೆ. ನಂತರ ಸಂಜೆ 4.30ಕ್ಕೆ ಹೂವಿನಹಡಗಲಿ ತಾಲೂಕಿನ ಹಂಪಸಾಗರ ರಸ್ತೆಯ ರಂಗಭಾರತಿ ಕಾರ್ಯಾಲಯದಲ್ಲಿ ಎಂ.ಪಿ. ಪ್ರಕಾಶ್ ಕಲಾನಿಕೇತನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಹಿರಿಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರಿಂದ ಎಸ್. ನಿಂಗರಾಜು ಅವರ 'ಅಸ್ತಂಗತ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ ಎಂದರು.
ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್, ಜಯಂತಿ ಮರುಳಸಿದ್ದಪ್ಪ, ಅಧ್ಯಕ್ಷ ಶ್ರೀನಿವಾಸ ಜಿ. ಚಿಕ್ಕಣ್ಣ, ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ, ಕೆ.ಕೆ. ಮಕಾಳಿ ಹಾಗೂ ಎಂ.ಪಿ. ಪ್ರಕಾಶ್ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸೊಪ್ಪಿನ ಬಾಳಪ್ಪ ಪಾಲ್ಗೊಳ್ಳಲಿದ್ದಾರೆ.
ನಂತರ ಹೂವಿನಹಡಗಲಿ ರಂಗಭಾರತಿ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಪ್ರಕಾಶ್ ಜೈನ್ ಸಂಗಡಿಗರಿಂದ ರಂಗಗೀತೆ ಗಾಯನ, ನೃತ್ಯ ಕಾರ್ಯಕ್ರಮ ಹಾಗೂ ಬೆಂಗಳೂರಿನ ಅರ್ಚನಾ ಉಡುಪ ತಂಡದಿಂದ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತನಮನ ಕಾರ್ಯಕ್ರಮ ಮತ್ತು ವಾರ್ಡ್ ನಂ.6-ಕತ್ತಲೆ ದಾರಿ ದೂರ ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.