ಮೊರಾರ್ಜಿ ಶಾಲೆ ಪುಸ್ತಕ ಮುದ್ರಣವೇ ಆಗಿಲ್ಲವಂತೆ!
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 15
ರಾಜ್ಯಾದ್ಯಂತ ಮೊರಾರ್ಜಿ ವಸತಿ ಶಾಲೆಯಲ್ಲಿರುವ ಸುಮಾರು 1.30 ಲಕ್ಷ ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾಗಿ ಒಂದೂವರೆ ತಿಂಗಳಾದರೂ ನೋಟ್ಬುಕ್ ವಿತರಣೆಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೀವ್ರ ಅನಾನುಕೂಲವಾಗಿದ್ದು, ಶಾಲಾ ಶಿಕ್ಷಕರು ಒತ್ತಾಯ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇತ್ತ ಮನೆಯಲ್ಲಿಯೂ ಕೇಳುವಂತೆ ಇಲ್ಲ, ಅತ್ತ ವಸತಿ ನಿಲಯದಲ್ಲಿಯೂ ಇನ್ನು ವಿತರಣೆಯಾಗಿಲ್ಲ. ಮೊದಲ ಕಿರುಪರೀಕ್ಷೆ ಮುಗಿದರೂ ನೋಟ್ಬುಕ್ ಬಾರದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡುವ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಹಾಗಂತ ವಸತಿ ನಿಲಯದ ಮೇಲ್ವಿಚಾರಕರನ್ನು ಪ್ರಶ್ನೆ ಮಾಡಿದರೆ, ನಾವೇನು ಮಾಡೋಣ? ಸರ್ಕಾರ ಇನ್ನೂ ಪೂರೈಕೆ ಮಾಡಿಲ್ಲ. ನಾವು ಸ್ಥಳೀಯವಾಗಿ ಖರೀದಿ ಮಾಡಿ ಕೊಡುವಂತೆಯೂ ಇಲ್ಲ ಎಂದು ಕೈಚೆಲ್ಲಿದ್ದಾರೆ. ಇನ್ನು ಇದೆ ವಿಷಯವನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಮೇಲಧಿಕಾರಿಗಳನ್ನು ಸಂಪರ್ಕ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.
ಸರ್ಕಾರ ಅಸಹಾಯಕವಾಗಿಯೇ?: ಸಾಮಾನ್ಯವಾಗಿ ವಸತಿ ಶಾಲೆಯ ವಿದ್ಯಾರ್ಥಿಗಳು ಬಡವರೇ ಇರುತ್ತಾರೆ. ಇವರಿಗೆ ಸ್ವಂತ ದುಡ್ಡು ಖರ್ಚು ಮಾಡಿ ಕೊಂಡುಕೊಳ್ಳಲು ಆಗುವುದಿಲ್ಲ ಎಂದೇ ವಸತಿ ನಿಲಯಕ್ಕೆ ಸೇರಿರುತ್ತಾರೆ. ಹೀಗಿರುವಾಗ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಕೊಡಿಸಲಾದಷ್ಟು ಸರ್ಕಾರ ಅಸಹಾಯಕವಾಗಿಯೇ ಎನ್ನುವುದು ಮಾತ್ರ ಪ್ರಶ್ನಾರ್ಥಕವಾಗಿದೆ.
ರಾಜ್ಯಾದ್ಯಂತ ಇರುವ ಸುಮಾರು 534 ಮೊರಾರ್ಜಿ ವಸತಿ ನಿಲಯದ ವಿದ್ಯಾರ್ಥಿಗಳು ಸೇರಿದಂತೆ ನಾನಾ ವಸತಿ ನಿಲಯದ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲ ವಸತಿ ನಿಲಯಗಳ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಅಧಿಕವಾಗಲಿದೆ ಎಂದೇ ಹೇಳಲಾಗುತ್ತದೆ.
ಮುದ್ರಣವಿಲ್ಲ: ಪ್ರತಿ ವರ್ಷ ಮೊರಾರ್ಜಿ ವಸತಿ ನಿಲಯ ಸೇರಿದಂತೆ ಸರ್ಕಾರದ ಅಧೀನದ ವಸತಿ ಶಾಲೆಗಳಿಗೆ ಸರ್ಕಾರದ ಅಧೀನದ ಎಂಪಿಎಂ (ಮೈಸೂರು ಪ್ರಿಂಟರ್ ಮಿಲ್ಸ್) ಮುದ್ರಣ ಸಂಸ್ಥೆ ನೋಟ್ಬುಕ್ ಪೂರೈಕೆಯ ಹೊಣೆಗಾರಿಕೆ ಹೊಂದಿದೆ. ಆದರೆ, ಇದುವರೆಗೂ ಅದು ಮುದ್ರಣವನ್ನೇ ಪ್ರಾರಂಭಿಸಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ನಿಖರ ಕಾರಣ ಗೊತ್ತಾಗಿಲ್ಲವಾದರೂ ಹಣಕಾಸಿನ ಕೊರತೆಯೂ ಕಾರಣ ಇರಬಹುದು. ಆದರೆ, ಮುದ್ರಣವಾಗದೆ ಪೂರೈಕೆಯೂ ಆಗಿಲ್ಲ ಎನ್ನುವುದು ಮಾತ್ರ ಖಚಿತ.
ಈ ಸಮಸ್ಯೆಯಿಂದ ಇಡೀ ರಾಜ್ಯದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತೆ ಆಗಿದೆ. ಸರ್ಕಾರ ಗಮನ ಹರಿಸಿ, ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಉಳಿದೆಲ್ಲ ವಸತಿ ಶಾಲೆಗಳಿಗೂ ಕೂಡಲೇ ನೋಟ್ಬುಕ್ ನೀಡುವಂತಾಗಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.
ಇನ್ನೂ ಬಂದಿಲ್ಲ
ಮೊರಾರ್ಜಿ ವಸತಿ ಶಾಲೆಗಳಿಗೆ ಇದುವರೆಗೂ ನೋಟ್ಬುಕ್ ಬಾರದೆ ಇರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಶೀಘ್ರದಲ್ಲಿಯೇ ಬರುವ ವಿಶ್ವಾಸ ಇದ್ದು, ಬಂದ ತಕ್ಷಣ ಪೂರೈಕೆ ಮಾಡಲಾಗುವುದು.
ಬಿಸಿಎಂ ಇಲಾಖೆ, ಕೊಪ್ಪಳ
ಶಾಲೆ ಪ್ರಾರಂಭವಾಗಿ ತಿಂಗಳಾಗಿದ್ದರೂ ನೋಟ್ಬುಕ್ ಬಂದಿಲ್ಲ. ಶಾಲೆಯಲ್ಲಿ ಶಿಕ್ಷಕರು ಏನು ಹೇಳಿದರೂ ಬರೆದುಕೊಳ್ಳುವುದಕ್ಕೆ ವಿದ್ಯಾರ್ಥಿಗಳ ಬಳಿ ನೋಟ್ಬುಕ್ಗಳೇ ಇಲ್ಲ. ಇದರಿಂದ ಸಮಸ್ಯೆಯಾಗಿದೆ.