ಅಲ್ಪಸಂಖ್ಯಾತ ಭಾಷಿಕರ ಆಯೋಗ ನಿಷ್ಕ್ರಿಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜೂ. 30
ಅಲ್ಪಸಂಖ್ಯಾತ ಭಾಷಿಕರ ಆಯೋಗ ನಿಷ್ಕ್ರಿಯವಾರುವ ಹಿನ್ನೆಲೆಯಲ್ಲಿ ಗಡಿನಾಡಿದರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಆಯೋಗದ ವಿರುದ್ಧ ಕಿಡಿಕಾರಿದರು.
ಆಂಧ್ರಪ್ರದೇಶದ ಡಿ. ಹಿರಾಳ್ ಗ್ರಾಮದಲ್ಲಿ ಕನ್ನಡ ಶಾಲೆಯ ಮಕ್ಕಳಿಗೆ ಸರ್ಕಾರ ನೀಡಿರುವ ಉಚಿತ ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು, ನೆರೆಯ ರಾಜ್ಯದ ಭಾಷೆ ಮಾತನಾಡುವವರನ್ನು ಗುರುತಿಸಿ, ಅವರ ಏಳಿಗೆಯ ಉದ್ದೇಶದಿಂದಾಗಿ 1957ರಲ್ಲಿಯೇ ಕೇಂದ್ರ ಸರ್ಕಾರ ಅಲ್ಪಸಂಖ್ಯಾತ ಭಾಷಿಕರ ಆಯೋಗ ರಚನೆ ಮಾಡಿತ್ತು. ಇದರ ಮುಖ್ಯ ಕಚೇರಿ ಅಲಹಾಬಾದ್‌ನಲ್ಲಿದ್ದು, ಚೆನ್ನೈನಲ್ಲಿ ಉಪಕಚೇರಿ ಇದೆ. ಆದರೆ ಆಯೋಗವು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ, ಆಯಾ ರಾಜ್ಯದ ಅಲ್ಪ ಸಂಖ್ಯಾತರ ಭಾಷಿಗರು ಮೂಲಭೂತ ಸೌಲಭ್ಯಗಳನ್ನು ಎದುರಿಸುವಂತಾಗಿದೆ ಎಂದರು.
ಕನ್ನಡ ಮಾಧ್ಯಮ ಓದುವ ಮಕ್ಕಳು ಯಾವುದೇ ರಾಜ್ಯದಲ್ಲಿದ್ದರೂ ಅವರಿಗೆ ಕರ್ನಾಟಕ ಸರ್ಕಾರ ನಮ್ಮ ರಾಜ್ಯದ ಮಕ್ಕಳಿಗೆ ನೀಡುವ ಸೌಲಭ್ಯವನ್ನು ನೀಡಬೇಕು. ಅಂದಾಗ ಮಾತ್ರ ಗಡಿಯಲ್ಲಿ ಕನ್ನಡ ರಕ್ಷಣೆ ಸಾಧ್ಯವಾಗುತ್ತದೆ. ಮ್ಯಾಂಚಿಸ್ಟರ್‌ನಲ್ಲಿ ನಡೆಯುವ ಕನ್ನಡ ಸಮ್ಮೇಳನಕ್ಕೆ, ಅಕ್ಕ ಸಮ್ಮೇಳನಕ್ಕೆ ಸರ್ಕಾರ ಕೊಟ್ಯಂತರ ರು. ನೀಡುತ್ತದೆ. ಆ ಹಣ ಯಾರಪ್ಪನ ಗಂಟು? ಆಂಧ್ರಪ್ರದೇಶದಲ್ಲಿರುವ ನತದೃಷ್ಟ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅದೇ ಹಣ ವಿನಿಯೋಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಗಡಿನಾಡ ಕನ್ನಡಿಗರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಡಿಇಡಿ ಸೀಟ್ ಪಡೆಯಲು ಅನ್ಯರಾಜ್ಯದವರು ಎಂಬ ಕಾರಣಕ್ಕೆ ದುಪ್ಪಣ್ಣ ಹಣ ವಸೂಲಿ ಮಾಡಲಾಗುತ್ತಿದೆ. ಗಡಿ ಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಬೇಕು. ಗಡಿ ಭಾಗದಲ್ಲಿರುವ ಕನ್ನಡ ಓದುಗರು ಕೆಲಸ ಸಿಗದೆ, ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಮಾಡದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ತಿಳಿಸಿದರು.
ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ 371ಜೆ ತಿದ್ದುಪಡಿ ಮಾಡಲಾಗಿದೆಯ ಆದರೆ ಅದರ ವ್ಯಾಪ್ತಿಯಲ್ಲಿ ಗಡಿನಾಡ ಮಕ್ಕಳಿಗೆ ಬಾರದಿರುವುದು ತೀರಾ ನೋವಿನ ಸಂಗತಿ. ಭಾಷೆ, ಸಾಹಿತ್ಯ, ಸಂಸ್ಕೃತಿ, ಮಾಧ್ಯಮ ಸೇರಿದಂತೆ ಇಡೀ ಬದುಕನ್ನು ಹೈದ್ರಾಬಾದ್ ಕರ್ನಾಟಕ ಸಂಸ್ಕೃತಿ ರೂಢಿಸಿಕೊಂಡಿರುವ ಹೈ.ಕ. ಪ್ರದೇಶದಕ್ಕೆ ಹೊಂದಿಕೊಂಡಿರುವ ಅನಂತಪುರ, ಕರ್ನೂಲ್, ಮಹೆಬೂಬ್ ನಗರ ಸೇರಿದಂತೆ ಇತರ ಜಿಲ್ಲೆಗಳ ಕನ್ನಡಿಗರನ್ನು ತಿದ್ದುಪಡಿಯ ವ್ಯಾಪ್ತಿಯಲ್ಲಿ ತಂದು ಅವರ ಶೈಕ್ಷಣಿಕ, ಸಾಮಾಜಿಕ ಏಳಿಗೆಗೆ ಮುಂದಾಗಬೇಕಾಗಿದೆ. ಆ ತಿದ್ದುಪಡಿಯನ್ನು ರಾಷ್ಟ್ರಪತಿಗಳ ಮಾಡಬೇಕೆಂದು ಹೇಳುತ್ತಾರೆ, ಶಾಸಕರು, ಸಂಸದರು ಹಾಗೂ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು, ರಾಷ್ಟ್ರಪತಿಗಳಿಗೆ ಸಂಬಂಧಪಟ್ಟವರಿಗೆ ಇಲ್ಲಿನ ಪರಿಸ್ಥಿತಿಯನ್ನು ಅರ್ಥೈಯಿಸಬೇಕಾಗಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ದರೂರು ಪುರುಷೋತ್ತಮಗೌಡ, ಡಿ. ಹೀರಾಳ್ ಮಂಡಲ ವಿದ್ಯಾಧಿಕಾರಿ ವೈ. ಭೀಮಪ್ಪ, ಡಿ. ಹೀರಾಳ್ ಶಾಲೆಯ ಮುಖ್ಯ ಶಿಕ್ಷಕಿ ರಮಾದೇವಿ, ಗಡಿನಾಡ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶೆಟ್ರು ಸುರೇಶಪ್ಪ, ಎಂ. ಗಿರಿಜಾಪತಿ, ದೇವರಾಜ್, ಪತ್ರಕರ್ತ ಶಶಿಧರ ಮೇಟಿ, ಜಯಪ್ರಕಾಶ್, ಛಾಯಾಗ್ರಾಹಕ ಹಂದ್ಯಾಳ್ ಪುರುಷೋತ್ತಮ ಮತ್ತಿತರರು ಇದ್ದರು.