ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಕೂಡ್ಲಿಗಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು. ಮಳೆ ಕೊರತೆಯಿಂದ ಬೆಳೆ ನಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು ಅಸಮರ್ಪಕ ವಿದ್ಯುತ್ ಪೂರೈಸುವ ಮೂಲಕ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಕ್ಕುಪ್ಪಿ ಬಸವರಾಜ ಮಾತನಾಡಿ, ಆರು ತಾಸು ನಿರಂತರ ವಿದ್ಯುತ್ ಪೂರೈಸುತ್ತೇನೆ ಎಂದು ಹೇಳಿ ಸರಿಯಾಗಿ ಒಂದು ತಾಸು ವಿದ್ಯುತ್ ಪೂರೈಸುತ್ತಿಲ್ಲ. ರೈತರಿಗೆ ಒಂದೆಡೆ ವರುಣನ ಅವಕೃಪೆ, ಇನ್ನೊಂದೆಡೆ ಜೆಸ್ಕಾಂ ಅಧಿಕಾರಿಗಳು ಶಾಪ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾ ಸ್ಥಳಕ್ಕೆ ಕೂಡ್ಲಿಗಿ ಪಿಎಸ್ಐ ಕೃಷ್ಣನಾಯ್ಕ್ ನೇತೃತ್ವದಲ್ಲಿ ಜೆಸ್ಕಾಂ ಇಲಾಖೆ ಅಧಿಕಾರಿಗಳು ಇನ್ನು ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ರಜನಿಕಾಂತ, ರೈತ ಸಂಘದ ಮುಖಂಡ ಎಂ. ಬಸವರಾಜ, ವಿ. ನಾಗರಾಜ, ಕೆ. ಕೃಷ್ಣ, ಕಕ್ಕುಪ್ಪಿ, ಹನುಮಂತಪ್ಪ, ಕೊಟ್ರೇಶಪ್ಪ, ಹೊನ್ನುರ್ ಸಾಬ್, ಕೆ. ರಾಘವೇಂದ್ರ ವಿರೂಪಾಪುರ, ನಾಗರಾಜ ಕಕ್ಕುಪ್ಪಿ, ಚಿನ್ನಾಪ್ರಪ್ಪ, ಮಹದೇವಪ್ಪ ಭಾಗವಹಿಸಿದ್ದರು.