ಕಿಡಿಗೇಡಿ ವರ್ತನೆ: ದೊಡ್ಡಬಸವೇಶ್ವರ ರಥೋತ್ಸವ ವಿಳಂಬ
ಕನ್ನಡಪ್ರಭ ವಾರ್ತೆ, ಕುರುಗೋಡು, ಮಾ. 16
ಕಿಡಿಗೇಡಿ ಯುವಕನೋರ್ವ ಜಾತ್ರೆಯಲ್ಲಿ ತೆಂಗಿನಕಾಯಿ ತೂರಿದ್ದರಿಂದ ಹಾಗೂ ರಾಹುಕಾಲ ಹಿನ್ನೆಲೆಯಲ್ಲಿ ಭಾನುವಾರ ನಡೆದ ಐತಿಹಾಸಿಕ ಕುರುಗೋಡು ದೊಡ್ಡಬಸವೇಶ್ವರ ರಥೋತ್ಸವ ಒಂದೂವರೆ ಗಂಟೆ ತಡವಾಗಿ ಆರಂಭವಾಯಿತು.
4.15ಕ್ಕೆ ಎಳೆಯಬೇಕಾದ ರಥೋತ್ಸವವು, ಗಲಭೆ ಹಿನ್ನೆಲೆಯಲ್ಲಿ 6 ಗಂಟೆಗೆ ಎಳೆಯಬೇಕಾಯಿತು.
ನಿರೀಕ್ಷೆಗೂ ಮೀರಿ ಭಾರಿ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡಿತ್ತು. ರಥದ ಮುಂದೆ ನೆರೆದಿದ್ದ ಜನಸ್ತೋಮಗಳಲ್ಲಿ ಕಿಡಿಗೇಡಿ ಯುವಕ ತೆಂಗಿನ ಕಾಯಿ ತೂರಿದ್ದರಿಂದ ಆ ಕಾಯಿ ಇನ್ನೊಬ್ಬ ಯುವಕನ ಎದೆಗೆ ತಾಗಿ ತೀವ್ರ ಪೆಟ್ಟಾಗಿದೆ. ಇದರಿಂದಾಗಿ ಗಲಭೆ ಹೆಚ್ಚಾಗಲು ಕಾರಣವಾಗಿ, ಎರಡು ಗುಂಪುಗಳ ಮಧ್ಯೆ ಘರ್ಷಣೆಗೆ ಕಾರಣವಾಯಿತು. ಇದರಿಂದಾಗಿ ಭಕ್ತಾದಿಗಳು ಒಬ್ಬರ ಮೇಲೊಬ್ಬರು ಬಿದ್ದು ಕೈಕೈ ಮಿಲಾಯಿಸುವ ಮಟ್ಟ ತಲುಪಿತು.
ಕುರುಗೋಡಿನ ಕೆಲ ಮುಖಂಡರು ಗಲಭೆ ತಡೆಯಲು ಪ್ರಯತ್ನಿಸಿದ್ದು, ಜಗಳ ನಿಯಂತ್ರಣಗೊಳ್ಳದ ಕಾರಣ ಪೊಲೀಸರು ಗುಂಪು ನಿಯಂತ್ರಣಕ್ಕೆ ಲಾಠಿ ಕೈಗೆತ್ತಿಕೊಳ್ಳಬೇಕಾಯಿತು. ಮುಷ್ಟಗಟ್ಟಿ ಹಾಗೂ ಸೋಮಲಾಪುರದ ಎರಡು ಗುಂಪುಗಳು ವೈಯಕ್ತಿಕ ಕಾರಣವೇ ರಥೋತ್ಸವದಲ್ಲಿ ಕೈಕೈ ಮಿಸಲಾಯಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಗಲಭೆ ಬಿರುಸು ಗೊಂಡಿದ್ದರಿಂದ ಯುವಕರು ಕಲ್ಲು ಹಾಗೂ ಬಡಿಗೆ ತೂರಾಟ ಮಾಡಿದರು. ಇದರಿಂದಾಗಿ ರಥೋತ್ಸವಕ್ಕೆ ಹಾಗೂ ದೇವಸ್ಥಾನಕ್ಕೆ ಆಗಮಿಸಿದ್ದರಿಂದ ನೂಕು ನುಗ್ಗಲು ಕಾರಣವಾಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಸ್ವತಃ ಡಿವೈಎಸ್ಪಿ ರುದ್ರಮುನಿ ಮುಂದಾದರು. ಇದರಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು, ನೂಕುನುಗ್ಗಲು ಏರ್ಪಟ್ಟಿದ್ದರಿಂದ ಕೆಲ ಜನರಿಗೆ ಸಣ್ಣಪುಟ್ಟ ಗಾಯವಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಯಾರು ದೂರು ನೀಡಿಲ್ಲ.
ವಿಜೃಂಭಣೆಯ ರಥೋತ್ಸವ: ಭಾನುವಾರ ನಡೆದ ಐತಿಹಾಸಿಕ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ಬಳ್ಳಾರಿ, ರಾಯಚೂರು, ಗದಗ, ಕೊಪ್ಪಳ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಲಕ್ಷಾಂತರ ಜನೋತ್ಸವದ ಮಧ್ಯೆ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು.
ರಥೋತ್ಸಕ್ಕೆ ಮುನ್ನ ಮುಷ್ಟಗಟ್ಟೆ, ಕೆರೆಕೆರೆ ಮತ್ತು ಸೋಮಲಾಪುರ ಗ್ರಾಮದಿಂದ ನಾಯಕ ಸಮುದಾಯ ನಾನಾ ಮಂಗಳ ವಾದ್ಯಗೋಷ್ಠಿಯೊಂದಿಗೆ ಹೊತ್ತು ತಂದ ಕುಂಭವನ್ನು ದೊಡ್ಡ ಬಸವೇಶ್ವರ ದೇವರಿಗೆ ಅರ್ಪಿಸಲಾಯಿತು.
ಅಲ್ಲದೆ, ಅಲಂಕೃತಗೊಂಡ ದೇವರ ಗೂಳಿ ಹಾಗೂ ಮುತ್ತೈದೆಯರ ಕಳಸದ ಮೆರವಣಿಗೆಯೊಂದಿಗೆ ಶಿವ ಶರಣೆ ನೀಲಮ್ಮನ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಮಠದ ಸ್ವಾಮಿಗೆ ಸ್ವಾಗತ ಕೋರಲಾಯಿತು.
ದೊಡ್ಡ ಬಸವೇಶ್ವರ ಹಾಗೂ ನೀಲಮ್ಮ ಮೂರ್ತಿ ಹೊತ್ತ 60 ಅಡಿ ಎತ್ತರದ ರಥ ಸಾಗುತ್ತಿದ್ದಂತೆ ಭಕ್ತರು ಹೂವು ಹಣ್ಣು ಅರ್ಪಿಸಿ ಹರಕೆ ತೀರಿಸಿದರು. ಡೊಳ್ಳು, ಕೋಲಾಟ ಮತ್ತಿತರೆ ಮಂಗಳವಾದ್ಯದೊಂದಿಗೆ ರಥೋತ್ಸವವು ನಡೆಯಿತು.