ಜೋಡು ರಥೋತ್ಸವದ ವೈಭವ
ಕೊಟ್ಟೂರು: ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ದಿನವಾದ ಶುಕ್ರವಾರ ಸಂಜೆ ಇಲ್ಲಿನ ವೀರಭದ್ರೇಶ್ವರ ಮತ್ತು ರೇಣುಕಾಚಾರ್ಯ ಸ್ವಾಮಿಯ ಜೋಡಿ ರಥೋತ್ಸವ ಸಡಗರ-ಸಂಭ್ರಮಗಳೊಂದಿಗೆ ನೆರವೇರಿತು. ಪಟ್ಟಣದ ಕೋಟೆಯ ಪೂರ್ವದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಬಳಿ ಜೋಡಿ ರಥೋತ್ಸವಕ್ಕೆ ಸಂಜೆ 6 ಗಂಟೆಗೆ ಚಾಲನೆ ದೊರೆಯಿತು. ಭಕ್ತರು ತೇರಿಗೆ ಬಾಳೆಹಣ್ಣು, ಉತ್ತುತ್ತೆ ತೂರಿ, ನಮಿಸಿದರು. ಇದು 30ನೇ ವರ್ಷದ ಜೋಡಿ ರಥೋತ್ಸವ. ಇದಕ್ಕೂ ಮುನ್ನ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಟಾಕಿ ಸವಾಲಿನ ಹರಾಜು ನಡೆಯಿತು. ಹೋಟೆಲ್ ಉದ್ಯಮಿ, ಸಂಡೂರು ಕೊಟ್ರೇಶ್ ಎಂಬುವರು ರು. 30 ಸಾವಿರಕ್ಕೆ ಸವಾಲು ಕೂಗಿ, ಪಟಾಕಿ ಪಡೆದರು. ಕಳೆದ ವರ್ಷದ ಪಟಾಕಿ ಸವಾಲಿನ ರು. 31 ಸಾವಿರವನ್ನು ದಿವ್ಯಾ ಶಾಮೀಯಾನ ಸಪ್ಲೈಯರ್ಸ್ ಮಾಲೀಕ ಕೂಡ್ಲಿಗಿ ಮಂಜುನಾಥ ದೇವಸ್ಥಾನ ಬಳಗಕ್ಕೆ ಅರ್ಪಿಸಿದರು. ಬೃಹತ್ ಹೂವಿನ ಮಾಲೆಯನ್ನೂ ದೇವರಿಗೆ ತೊಡಿಸಿದರು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹಿರೇಮಠ, ಮಳೆಮಲ್ಲೇಶ್ವರ ದೇವಸ್ಥಾನದ ರಸ್ತೆ ಗುಂಟ ರಥೋತ್ಸವ ಸಾಗಿ, ರಾತ್ರಿ 7.30ಕ್ಕೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಮರಳಿತು. ದೇವಸ್ಥಾನ ಬಳಗದ ಕನ್ನಿಹಳ್ಳಿ ಸಿದ್ದಲಿಂಗನಗೌಡ್ರು, ಆರ್.ಎಂ. ಗುರುಬಸವಸ್ವಾಮಿ, ಕನ್ನಿಹಳ್ಳಿ ಈಶಪ್ಪ, ಮಂಜುನಾಥಗೌಡ, ಕರಿಬಸವನಗೌಡ, ಶಿವಕುಮಾರಗೌಡ ಇದ್ದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ
ಬಳ್ಳಾರಿ: ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದಿಂದ ನಗರದಲ್ಲಿ ಬಳ್ಳಾರಿ ತಾಲೂಕು ಗ್ರಾಮಾಂತರ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಈಚೆಗೆ ಜರುಗಿತು.
ಸಂಘದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಸರ್ಕಾರ ದಿನಕ್ಕೊಂದು ಜನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಮಾನಸಿಕ ಕಿರುಕುಳ ನೀಡುತ್ತಿದೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ತಿಂಗಳ ಮೊದಲ 10 ದಿನಕ್ಕೆ 12 ತಾಸು ಕೆಲಸ ಮಾಡಬೇಕು ಎಂದು ಆದೇಶಿಸುವ ಮೂಲಕ ಮಾನವಹಕ್ಕು ಉಲ್ಲಂಘಿಸುತ್ತಿದೆ. ಅಲ್ಲದೆ, ಸರ್ಕಾರ ರೂಪಿಸುವ ಎಲ್ಲ ನಿಯಮಗಳು ವಿರುದ್ಧವಾಗಿವೆ ಎಂದರು.
ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಮುಂಗಡ ದಾಸ್ತಾನಿಗೆ ಸ್ಥಳಾವಕಾಶದ ಅಗತ್ಯ, 60ಕ್ಕೆ ನಿಗದಿಗೊಳಿಸಿದ ನ್ಯಾಯಬೆಲೆ ಅಂಗಡಿ ಮಾಲೀಕರ ವಯಸ್ಸು, ತಡೆಹಿಡಿಯಲಾದ ಅನುಕಂಪದ ಆಧಾರ, ನ್ಯಾಯಬೆಲೆ ಅಂಗಡಿ ಹೊರತುಪಡಿಸಿ, ಮತ್ತೊಂದು ಅಂಗಡಿ ನಡೆಸಬಾರದು, ಲೆಕ್ಕಪತ್ರ ಬರೆಯಲು ಶಕ್ತರಲ್ಲದಿದ್ದಲ್ಲಿ ಅಂಗಡಿ ನಡೆಸುವಂತಿಲ್ಲ ಸೇರಿದಂತೆ ಇತರೆ ನಿಯಮಗಳ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ರೂಪಿಸಲು ಸಭೆಯಲ್ಲಿ ಕೆಲ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸೋಮಶೇಖರಗೌಡ, ಎಸ್.ಜೆ. ಕೋಟೆ, ಶಾಂತನಗೌಡ, ಕೆ.ವಿ. ಬಸವರಾಜ, ರೂಪನಗುಡಿ ಗಂಗಣ್ಣ, ಮೋಕ ಪ್ರಕಾಶ್, ಜಡೆಮೂರ್ತಿ, ಪೊಂಪಾಪತಿ, ಮಹೇಶ್, ಶ್ರೀಕಾಂತ್, ರಾಮನಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.