ಬಳ್ಳಾರಿಯಲ್ಲಿ ಮಟ್ಕಾ ಅಡ್ಡೆ ಮೇಲೆ ದಾಳಿ: ನಗದು ವಶ
ಬಳ್ಳಾರಿ: ಮಟ್ಕಾ ಜೂಜಾಟದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ, ಆರೋಪಿ ಸಮೇತ ನಗದು ಹಣ ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಪಟ್ಟಣದ 2ನೇ ವಾರ್ಡ್‌ನ ಪಿಂಜಾರ್ ಮಸೀದಿ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಯ ಮೇಲೆ ದಾಳಿ ಮಾಡಿ ಆರೋಪಿ ದುರುಗಪ್ಪ ಎಂಬುವವನನ್ನು ಬಂಧಿಸಿ ಅವನಿಂದ ರು. 7,010 ನಗದು ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ರಮೇಶ್, ಮಂಜುನಾಥ ಎಂಬ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಬಳ್ಳಾರಿಯಲ್ಲಿ ಡಿವಿಜಿ ಸ್ಮರಣೆ
ಬಳ್ಳಾರಿ: ಇಲ್ಲಿನ ಗಾಂಧಿನಗರದಲ್ಲಿರುವ ಲಯನ್ಸ್ ಸೇವಾ ಸದನದಲ್ಲಿ ಮಾ.17ರಂದು ಸೋಮವಾರ ಸಂಜೆ 6ಕ್ಕೆ ಡಿವಿಜಿ ಸ್ಮರಣೆ ಕಾರ್ಯಕ್ರಮ ಜರುಗಲಿದೆ. ಬಳ್ಳಾರಿಯ ಹರಿಹರ-ರಾಘವಾಂಕ ಕನ್ನಡ ಸಂಘ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ವಕೀಲ ವೈ. ರಂಗನಾಥರಾವ್ ಉದ್ಘಾಟಿಸುವರು. ಖ್ಯಾತ ವೈದ್ಯ ಡಾ.ಅರವಿಂದ ಪಟೇಲ ಅಧ್ಯಕ್ಷತೆ ವಹಿಸುವರು. ನಂತರ ಡಿ.ವಿ.ಜಿ. ಸಾಹಿತ್ಯ ಸಮಾಲೋಚನೆ ಕಾರ್ಯಕ್ರಮ ನಡೆಯಲಿದ್ದು, ಉಪನ್ಯಾಸಕ ಡಾ.ಎನ್.ಎಸ್. ವೇಣುಗೋಪಾಲ ಮರುಳ ಮುನಿಯನ ಕಗ್ಗ ಎಂಬ ವಿಷಯ ಕುರಿತು, ತಿಮ್ಮಣ್ಣ ಭಟ್ಟ ಡಿವಿಜಿ ಜೀವನ ದರ್ಶನ, ಉಪನ್ಯಾಸಕಿ ಎ.ಎಂ. ಜಯಶ್ರೀ ಮಂಕು ತಿಮ್ಮನ ಕಗ್ಗ ಕುರಿತು ಮಾತನಾಡಲಿದ್ದಾರೆ. ಉಜ್ಜಿನಿ ಪ.ಪೂ ಕಾಲೇಜಿನ ಉಪನ್ಯಾಸಕ ಶಿವಾನಂದ ಪಿ. ಹೊಂಬಳ ಕಗ್ಗದ ಗಾಯನ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.