ವಿರೋಧಿಗಳ ವೈಫಲ್ಯವೇ ಪ್ರಚಾರದ ಅಸ್ತ್ರ
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 16
ಲೋಕಸಭೆ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಪ್ರತಿ ಪಕ್ಷವೂ ತನ್ನ ವಿರೋಧಿ ಪಕ್ಷ, ಅಭ್ಯರ್ಥಿಗಳ ರಾಜಕೀಯ ವೈಫಲ್ಯಗಳನ್ನೇ ಪ್ರಚಾರದ ಅಸ್ತ್ರಗಳಾಗಿ ಬಳಸಲು ಮುಂದಾಗಿದೆ.
ರೆಡ್ಡಿ ಸಹೋದರರು ಹಾಗೂ ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕಾಂಗ್ರೆಸ್ಗೆ ಅಸ್ತ್ರಗಳು. ಕೇಂದ್ರ, ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಸಾಧನೆಯೂ ಅವರ ಮುಂದಿದೆ.
ಬಿಜೆಪಿ ನರೇಂದ್ರ ಮೋದಿ ಅಲೆ, ರಾಜ್ಯ ಸರ್ಕಾರದ ವಿಫಲ ಯೋಜನೆಗಳು, ಜಿಲ್ಲಾ ಕಾಂಗ್ರೆಸ್ ಆಂತರಿಕ ಭಿನ್ನಮತಗಳನ್ನು ಬಳಸಿಕೊಂಡು ಮತದಾರರ ಮುಂದೆ ಹೋಗಲು ನಿರ್ಧರಿಸಿದೆ.
ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಯಾಗಿ ಎನ್.ವೈ. ಹನುಮಂತಪ್ಪ ಅವರನ್ನು ಘೋಷಿಸಿದ್ದರೆ, ಬಿಜೆಪಿ ಬಿ. ಶ್ರೀರಾಮುಲು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರ ಸ್ಪರ್ಧೆ ಖಚಿತವಾಗಿದ್ದರೂ, ಅಧಿಕೃತವಾಗಿ ಇನ್ನಷ್ಟೇ ಘೋಷಿಸಬೇಕಿದೆ.
ಜೆಡಿಎಸ್ ಮಾತ್ರ ತನ್ನ ಸುಳಿವು ಬಿಟ್ಟುಕೊಡುತ್ತಿಲ್ಲ. ಯಾರನ್ನು ಕಣಕ್ಕಿಳಿಸುತ್ತದೆ ಎಂಬುದೂ ಇನ್ನೂ ನಿಗೂಢ.
ಕಾಂಗ್ರೆಸ್ ಪ್ರಚಾರದ ಅಸ್ತ್ರಗಳು: ಕಾಂಗ್ರೆಸ್ ಈಗಾಗಲೇ ಚುನಾವಣೆಯ ಪ್ರಚಾರ ಆರಂಭಿಸಿದೆ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆ ಆರೋಪ, ಬಿಜೆಪಿಗೆ ಮತ್ತೆ ಶ್ರೀರಾಮುಲು ಸೇರ್ಪಡೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿಯ ಜನರ ಸ್ಥಿತಿ-ಗತಿ ಇತ್ಯಾದಿಗಳನ್ನು ಜನರಿಗೆ ವಿವರಿಸುತ್ತಿದೆ. ಜತೆಗೆ, ಕೇಂದ್ರ ಯುಪಿಎ ಸರ್ಕಾರದ ಹಲವು ಯೋಜನೆಗಳ ನೆರವನ್ನೂ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಪ್ರಸ್ತಾಪಿಸಿ, ಮತದಾರರ ಮನ ಗೆಲ್ಲಲು ಮುಂದಾಗಿದೆ.
ಬಿಜೆಪಿ ಬತ್ತಳಿಕೆಯಲ್ಲಿ: ಬಿಜೆಪಿ ಅಭ್ಯರ್ಥಿ ಪ್ರಮುಖವಾಗಿ ನರೇಂದ್ರ ಮೋದಿ ಅಲೆ, ಗುಜರಾತ್ನಲ್ಲಿ ಆದ ಸಾಧನೆ, ಯುಪಿಎ ಸರ್ಕಾರದ ವೈಫಲ್ಯ, ಮೋದಿ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಸಾಧ್ಯ, ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲವೇ ಸಮುದಾಯಗಳ ಓಲೈಕೆಗೆ ಜಾರಿ ಮಾಡಿರುವ ಯೋಜನೆಗಳು ಇತ್ಯಾದಿಗಳನ್ನು ತಮ್ಮ ಪ್ರಚಾರದ ವಸ್ತುವಾಗಿ ಬಳಸುವ ನಿರೀಕ್ಷೆ ಇದೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರ ಆಂತರಿಕ ಭಿನ್ನಮತವೇ ಪ್ರಮುಖ ಅಸ್ತ್ರವಾಗಿ, ಮತಬೇಟೆಗೆ ಬಿಜೆಪಿ ಹೊರಟಿದೆ ಎನ್ನಲಡ್ಡಿ ಇಲ್ಲ.
ವಿರೋಧದ ಅಲೆ: ಶ್ರೀರಾಮುಲು ಬಗ್ಗೆ ಕ್ಷೇತ್ರದಲ್ಲಿರುವ ಅಸಮಾಧಾನಗಳನ್ನು ತನಗೆ ಅನುಕೂಲಕರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾದರೆ ಅಚ್ಚರಿ ಏನಿಲ್ಲ. ಶ್ರೀರಾಮುಲು ಬಿಜೆಪಿಗೆ ಮರಳಿದರೂ ಅವರ ವಿರುದ್ಧ ಕ್ಷೇತ್ರದಲ್ಲಿ ಅಲೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.
ಇಂಥ ವಿರೋಧದ ಅಲೆಯನ್ನು ಮೋದಿ ಅಲೆಯೇ ಮರೆ ಮಾಚಬೇಕಷ್ಟೇ. ಇಲ್ಲದಿದ್ದರೆ, ಪ್ರಭಾವಿ ನಾಯಕರಾಗಿದ್ದರೂ ಶ್ರೀರಾಮುಲು ಗೆಲುವಿಗೆ ತಿಣುಕಾಡಬೇಕಾದೀತು.
ಕಾಂಗ್ರೆಸ್ಗೂ ಜಿಲ್ಲೆಯಲ್ಲಿ ವಿರೋಧಿ ಅಲೆ ಇದೆ. ಅವರಿಗೆ ಶತ್ರುಗಳು ಮನೆಯೊಳಗೇ ಇದ್ದಾರೆ. ಮುಖಂಡರು ಒಟ್ಟಾದರೆ ಮಾತ್ರ ಕಾಂಗ್ರೆಸ್ಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದು. ಗೆಲುವು ತಮಗೇ ಎಂದುಕೊಂಡು ಯಾರೇ ಬೀಗಿದರೂ, ಆಮೆ-ಮೊಲದ ಓಟದ ಸ್ಪರ್ಧೆಯ ಕತೆಯಂತಾದೀತು.