ಧಾರ್ಮಿಕ ಮೆರವಣಿಗೆಯಲ್ಲಿ ಘರ್ಷಣೆ, ಐವರಿಗೆ ಗಾಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 21
ಧಾರ್ಮಿಕ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡ ಘಟನೆ ಪಟ್ಟಣದಲ್ಲಿ ಗುರುವಾರ ತಡರಾತ್ರಿ ಸಂಭವಿದೆ.
ಮಾ. 20ರಿಂದ 23ರ ವರೆಗೆ ಹೂವಿನಹಡಗಲಿ ಪಟ್ಟಣದಲ್ಲಿ ರಾಜಾಬಾಗ್ ಸವಾರ್ ಉರೂಸ್ ಆಯೋಜಿಸಲಾಗಿದೆ. ಗುರುವಾರ ತಡರಾತ್ರಿ ಗಂಧ ಮಹೋತ್ಸವ ಮೆರವಣಿಗೆ ವೇಳೆ ಒಂದು ಕೋಮಿನ ಯುವಕರ ಅನುಚಿತ ವರ್ತನೆಯೇ ಗಲಭೆಗೆ ಕಾರಣವಾಯಿತು. ಈ ಘರ್ಷಣೆಯಲ್ಲಿ ಮಹಾಂತೇಶ್, ಮಂಜುನಾಥ, ಸೋಮು, ರಾಜು ಅಲಿಯಾಸ್ ರಾಜೇಶ್ ಮತ್ತು ಮೆಹಬೂಬ್ ಬಾಷಾ ಇವರಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.
ಗುಂಪು ಘರ್ಷಣೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಬೆಳಗ್ಗೆ ನೂರಾರು ಯುವಕರು ಪೊಲೀಸ್ ಠಾಣೆಗೆ ಆಗಮಿಸಿ ಒತ್ತಾಯಿಸಿದರು. ತಹಸೀಲ್ದಾರ್ ಎ.ಬಿ. ವಿಜಯಕುಮಾರ ಮತ್ತು ಡಿವೈಎಸ್ಪಿ ಆರ್.ಎಸ್. ಪಾಟೀಲ್ ನೇತೃತ್ವದಲ್ಲಿ ಎರಡು ಕೋಮಿಗಳ ಮುಖಂಡರ ಪ್ರತ್ಯೇಕ ಸಭೆ ನಡೆಸಿ, ಪಟ್ಟಣದಲ್ಲಿ ಶಾಂತಿ-ಸೌಹಾರ್ದಕ್ಕೆ ಧಕ್ಕೆ ಬಾರದಂತೆ ವಾತಾವರಣ ತಿಳಿಗೊಳಿಸಬೇಕೆಂದು ಸೂಚಿಸಿದರು.
ಇದಕ್ಕೂ ಮುನ್ನ ಪ್ರಾರ್ಥನಾ ಮಂದಿರಗಳ ಮುಂದೆ ಕಿಡಿಗೇಡಿಗಳ ಗುಂಪು ಕಲ್ಲು, ಚಪ್ಪಲಿ ತೂರಾಟ ನಡೆಸಿತ್ತು. ಡಿವೈಎಸ್ಪಿ ಆರ್.ಎಸ್. ಪಾಟೀಲ್, ಪಿಎಸ್ಐ ಆಂಜನೇಯ ಮತ್ತು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರಕ್ಕೆ ಮುಂದಾದರು. ಡಿಆರ್ ಪೊಲೀಸ್ ವಾಹನಕ್ಕೆ ಕಲ್ಲೇಟು ಬಿದ್ದವು. ಪೊಲೀಸರು ಕಿಡಿಗೇಡಿ ಯುವಕರ ಗುಂಪುಗಳನ್ನು ಚದುರಿಸಿ, ಪರಿಸ್ಥಿತಿ ನಿಯಂತ್ರಿಸಿದರು. ಎರಡು ಕೋಮುಗಳ ನಡುವೆ ಪರಿಸ್ಥಿತಿ ಕೈಮೀರುವ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಬ್ಯಾಂಕ್, ಕಿರಾಣಿ, ತರಕಾರಿ, ಹಣ್ಣು ಹಂಪಲು ಅಂಗಡಿಗಳು ಮುಚ್ಚಿಕೊಂಡವು.
ಪುರಸಭೆ ಅನುಮತಿ ಇಲ್ಲದೆ ಕಟ್ಟಿರುವ ಬ್ಯಾನರ್, ಬಂಟಿಂಗ್ಸ್ಗಳನ್ನು ಶುಕ್ರವಾರ ಸಂಜೆಯೊಳಗೆ ತೆರವು ಮಾಡುವಂತೆ ತಹಸೀಲ್ದಾರ್ ಎ.ಬಿ. ವಿಜಯಕುಮಾರ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದಾರೆ.