ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಯೋಗ ಮಹೋತ್ಸವ

Srinivasa Murthy VN
Updated On : 22 Mar 2014, 11:54 am

ಹೊಸಪೇಟೆ: ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಪತಂಜಲಿ ಚಿಕಿತ್ಸಾಲಯದ ಯೋಗ ಮಹೋತ್ಸವ ಕಾರ್ಯಕ್ರಮ ನಗರದ ಹಂಪಿ ರಸ್ತೆಯ ಬಾಲಾ ಟಾಕೀಸ್ ಸಮೀಪದ ಪಿಬಿಎಸ್ ಶಾಲಾ ಮೈದಾನದಲ್ಲಿ ಮಾ. 23ರಂದು ನಡೆಯಲಿದೆ ಎಂದು ಪತಂಜಲಿ ಯೋಗ ಸಮಿತಿಯ ಯುವ ಭಾರತ ಉತ್ತರ ಕರ್ನಾಟಕ ರಾಜ್ಯ ಪ್ರಭಾರಿ ಎಂ. ಭಾಸ್ಕರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ 28 ರಾಜ್ಯದ 625 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕೋಟ್ಯಂತರ ಜನರು ಯೋಗ ಮಹೋತ್ಸವದಲ್ಲಿ ಭಾಗವಹಿಸವರು. ದೇಶದಲ್ಲಿ ಸುಮಾರು 10 ಕೋಟಿ ಜನರು ಯೋಗ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲಿದ್ದಾರೆ ಎಂದರು. ಜಿಲ್ಲಾ ಮಟ್ಟದ ಯೋಗ ಮಹೋತ್ಸವದಲ್ಲಿ ಸುಮಾರು 4-5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಯೋಗ ಕಾರ್ಯಕ್ರಮದಲ್ಲಿ ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸುವರು. ಯೋಗ ಸಾಧಕರಿಗೆ, ಯೋಗ ಶಿಕ್ಷಕರಿಗೆ ಅಭಿನಂದನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಪತಂಜಲಿ ಯೋಗ ಸಮಿತಿ ರಾಜ್ಯ ಮುಖಂಡ ಬಾಲಚಂದ್ರ ಶರ್ಮ, ಜಿಲ್ಲಾಧ್ಯಕ್ಷ ಬಿ. ಮಲ್ಲಿಕಾರ್ಜುನ, ಮಹಿಳಾ ಘಟಕಾಧ್ಯಕ್ಷೆ ರೇಣುಕಾ ಪರಗಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ಅಯ್ಯಪ್ಪಸ್ವಾಮಿ, ಸಂವಾದ ಪ್ರಭಾರಿ ಶ್ರೀನಿವಾಸ, ಕಾರ್ಯದರ್ಶಿ ಬಸಂತಿ ಮಹದೇವ, ಜಿಲ್ಲಾ ಯುವ ಪ್ರಭಾರಿ ಕಿರಣ್ ಕುಮಾರ್ ಇದ್ದರು.

ಇಂದು ದತ್ತಿ ಉಪನ್ಯಾಸ
ಬಳ್ಳಾರಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ತಾಲೂಕಿನ ಹಂದ್ಯಾಳ ಗ್ರಾಮದ ಶಿವಶರಣರ ಮಠದಲ್ಲಿ ಮಾ. 22ರಂದು ಶನಿವಾರ 126ನೇ ಮಹಾಮನೆ ದತ್ತಿ ಕಾರ್ಯಕ್ರಮ ಏರ್ಪಡಿಸಿದೆ. ದರೂರು ಶ್ರೀ ಸಂಗನಬಸವೇಶ್ವರ ಮಠದ ಕೊಟ್ಟೂರು ದೇಶಿಕರು ಸಾನ್ನಿಧ್ಯ ವಹಿಸುವರು. ನಿಜಶರಣ ವೀರ ವೈರಾಗಿಣಿ ಅಕ್ಕಮಹಾದೇವಿ ದರ್ಶನ ಪ್ರವಚನ ಎಂಬ ವಿಷಯ ಕುರಿತು ಶಿಕ್ಷಕಿ ಡಾ.ಎ.ಎನ್. ಸಿದ್ದೇಶ್ವರಿ ಉಪನ್ಯಾಸ ನೀಡುವರು. ದತ್ತಿದಾನಿ ಡಾ.ಎಚ್. ಮಲ್ಲಿಕಾರ್ಜುನಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಇಂದಿರಾ ಬಸವರಾಜ್, ಎ.ಎಂ. ಜಯಶ್ರೀ ಪಾಲ್ಗೊಳ್ಳುವರು. ಉಪನ್ಯಾಸಕ ಎಸ್.ಪಿ. ಹೊಂಬಾಳ್ ಅವರಿಂದ ವಚನ ಗಾಯನ ನಡೆಯಲಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು 24ನೇ ಸಮ್ಮೇಳನ
ಹೊಸಪೇಟೆ: ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಚೆನ್ನೈನ ದಕ್ಷಿಣ ಭಾರತೀಯ ನಾಣ್ಯಶಾಸ್ತ್ರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 24ನೇ ವಾರ್ಷಿಕ ಸಮ್ಮೇಳನ ತಾಲೂಕಿನ ಕಮಲಾಪುರದ ಕಮಲ್ ಮಹಲ್ ಬಳಿಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಾ. 22ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ಸಾರಿಗೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆ ಪ್ರಿನ್ಸಿಪಲ್ ಸೆಕ್ರಟರಿ ಪಿ.ಎನ್. ಶ್ರೀನಿವಾಸಾಚಾರಿ ಸಮ್ಮೇಳನ ಉದ್ಘಾಟಿಸುವರು. ಚೆನ್ನೈನ ದಕ್ಷಿಣ ಭಾರತೀಯ ನಾಣ್ಯಶಾಸ್ತ್ರ ಸಂಸ್ಥೆ ಅಧ್ಯಕ್ಷ ಡಾ.ಆರ್. ರಾಮಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ತಿರುಪತಿಯ ಟಿಟಿಡಿ ಜಂಟಿ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಶ್ರೀನಿವಾಸರಾಜು ನಿಯತಕಾಲಿಕೆ ಲೋಕಾರ್ಪಣೆ ಕುರಿತು ಮಾತನಾಡುವರು. ಮುಖ್ಯ ಅತಿಥಿಯಾಗಿ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ, ಅಂಬಾಸಮುದ್ರಂನ ಡಾ.ಡಿ. ಶಂಕರನಾರಾಯಣನ್ ಬಾಗವಹಿಸುವರು ಎಂದು ಇಲಾಖೆಯ ಪ್ರಭಾರಿ ನಿರ್ದೇಶಕ ಟಿ.ಎನ್. ಗಂಗಾಧರ ಹಾಗೂ ದಕ್ಷಿಣ ಭಾರತೀಯ ನಾಣ್ಯಶಾಸ್ತ್ರ ಸಂಸ್ಥೆ ಮಹಾ ಕಾರ್ಯದರ್ಶಿ ಡಾ.ಎ.ವಿ. ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆ ಚುನಾವಣೆ ಮುಂದಕ್ಕೆ
ಸಿರುಗುಪ್ಪ: ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಮಾ. 22ರಂದು ನಡೆಯಬೇಕಿದ್ದ ಆಯ್ಕೆ ಚುನಾವಣೆಯು ಮುಂದೂಡಲ್ಪಟ್ಟಿದೆ. ಪುರಸಭೆಯ 1ನೇ ಮತ್ತು 2ನೇ ವಾರ್ಡಿನ ಸದಸ್ಯರು ಧಾರವಾಡದ ಹೈಕೋರ್ಟ್ ಪೀಠದಿಂದ ಚುನಾವಣೆಗೆ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಸಿರುಗುಪ್ಪ ಪುರಸಭೆ ಮುಖ್ಯಾಧಿಕಾರಿ ಹಾಜಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement