ನಿಖರ ಮಾಹಿತಿಯಿಂದ ವಾರೆಂಟ್ ಜಾರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 21
ನ್ಯಾಯಾಲಯಗಳಿಗೆ ನಿಖರ ಮಾಹಿತಿ ನೀಡಿದರೆ ಸಮನ್ಸ್ ಹಾಗೂ ವಾರೆಂಟ್ಗಳನ್ನು ಸುಲಲಿತವಾಗಿ ಜಾರಿಗೊಳಿಸಲು ಸಹಕಾರಿಯಾಗುತ್ತದೆ ಎಂದು ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಹಯೋಗದಲ್ಲಿ ನಗರದ ವಕೀಲರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರೊಸೆಸ್ ಸರ್ವಿಂಗ್ ಮತ್ತು ವಾರೆಂಟ್ ಎಕ್ಸಿಕ್ಯೂಶನ್ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಸರು, ವಿಳಾಸ, ವಯಸ್ಸು ಸೇರಿದಂತೆ ಅಗತ್ಯ ಮಾಹಿತಿಯನ್ನು ನಿಖರವಾಗಿ ನೀಡಿದರೆ ಕೋರ್ಟ್ ವಾರೆಂಟ್ ಜಾರಿಗೊಳಿಸಲು ಅನುಕೂಲವಾಗುತ್ತದೆ. ವಕೀಲರ ಸಹಕಾರವಿದ್ದರೆ ಕೂಡಲೆ ಸಮನ್ಸ್ ಜಾರಿಗೊಳಿಸಹುದು. ಈ ಪ್ರಕರಣಗಳಲ್ಲಿ ವಕೀಲರು, ನ್ಯಾಯಾಂಗ ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಪಾತ್ರ ಪ್ರಮುಖವಾದುದು. ಎಲ್ಲ ವಿಧವಾದ ಮಾದರಿ ಮೂಲಕವೂ ಜಾರಿಗೊಳಿಸಬಹುದಾಗಿದೆ. ಸಮನ್ಸ್ ಜಾರಿಗೊಳಿಸಲು ಇರುವ ಮಾದರಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬಹುದು. ಸಮನ್ಸ್ ಹಾಗೂ ವಾರೆಂಟ್ಗಳನ್ನು ಜಾರಿಗೊಳಿಸದಂತೆ ಯಾವುದೆ ವ್ಯಾಜ್ಯಗಳನ್ನು ಹೂಡದಿದ್ದರೆ ಶೀಘ್ರ ಜಾರಿಗೊಳಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು ಎಂದು ತಿಳಿಸಿದರು.
ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸುವುದು ಪೊಲೀಸರ ಕರ್ತವ್ಯ. ಈ ಕುರಿತು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಎಚ್. ಶಾಂತಾ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ದಾರೆಡ್ಡಿ ಮಾತನಾಡಿ, ವಾರೆಂಟ್ ಜಾರಿಗೊಳಿಸಲು ಆಧುನಿಕ ಮಾದರಿಗಳನ್ನು ಬಳಕೆ ಮಾಡಿಕೊಳ್ಳಬೇಕು. ಎಸ್ಎಂಎಸ್, ಇಮೇಲ್, ಅಂಚೆ ಹಾಗೂ ತಂತ್ರಜ್ಞಾನದ ಮೂಲಕ ಜಾರಿಗೊಳಿಸಬೇಕು. ವಿಳಾಸ ಸರಿಯಲ್ಲವೆಂಬ ನೆಪವೊಡ್ಡಿ ಜಾರಿಗೊಳಿಸದೆ ಹಿಂದಿರುಗಿಸಬಾರದು. ಶೀಘ್ರ ವಾರೆಂಟ್ ಜಾರಿಯಾದರೆ ಪ್ರಕರಣಗಳೂ ಶೀಘ್ರ ವಿಲೇವಾರಿಯಾಗುತ್ತವೆ. ಸುಪ್ರೀಂ ಕೋರ್ಟ್ ಈ ಕುರಿತು ನಿರ್ದೇಶನವನ್ನೂ ನೀಡಿದೆ. ವಾರೆಂಟ್ ಜಾರಿ ಪ್ರಕರಣದ ಪ್ರಥಮ ಹಂತ ಹಾಗೂ ಪ್ರಮುಖವಾಗಿರುವುದರಿಂದ ಶೀಘ್ರ ಜಾರಿಯಾದರೆ ಉತ್ತಮ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ನ್ಯಾಯಾಧೀಶರು, ವಕೀಲರ ಸಂಘದ ಖಜಾಂಚಿ ಎಲ್.ಟಿ. ಶೇಖರ್ ಉಪಸ್ಥಿತರಿದ್ದರು.