ಮಾನವ ಹಕ್ಕು ಉಲ್ಲಂಘನೆಯ ಅವಲೋಕನ ಅಗತ್ಯ: ಬಾಲಸುಬ್ರಹ್ಮಣ್ಯ
ಹೊಸಪೇಟೆ: ಲೈಂಗಿಕ ವೃತ್ತಿನಿರತ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ದೈಹಿಕ ಹಿಂಸೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ವಿಮರ್ಶಾತ್ಮಕ ಪ್ರಜ್ಞೆಯಿಂದ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಂವೇದನಾ ಯೋಜನೆ ಹಿರಿಯ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯ ಹೇಳಿದರು.
ನಗರದ ಸೈನೋಸರ್ ಸಭಾಂಗಣದಲ್ಲಿ ಬಳ್ಳಾರಿಯ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯಿಂದ ಬುಧವಾರ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಾಂತೀಯ ವ್ಯವಸ್ಥಾಪಕ ಪೀರ್ ಮಹಮ್ಮದ್ ಮಾತನಾಡಿ, ರಾಜ್ಯದಲ್ಲಿರುವ ಸುಮಾರು 30 ಸಾವಿರ ಲೈಂಗಿಕ ಕಾರ್ಯಕರ್ತೆಯರಲ್ಲಿ ವಿಮರ್ಶಾತ್ಮಕ ಪ್ರಜ್ಞೆ ಮೂಡಿಸಿ ದೌರ್ಜನ್ಯ ತಡೆಯುವುದಕ್ಕಾಗಿ ಸ್ಥಳೀಯ ಪೊಲೀಸರ ಮತ್ತು ನ್ಯಾಯಾಂಗ ವ್ಯವಸ್ಥೆಯಿಂದ ಸಕರಾತ್ಮಕ ಸಹಾಯ ದೊರೆಯಬೇಕಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಇರುವ 1 ಲಕ್ಷಕ್ಕೂ ಹೆಚ್ಚು ಲೈಂಗಿಕ ವೃತ್ತಿಪರ ಮಹಿಳೆಯರನ್ನು ಕಾಡುವ ಎಚ್‌ಐವಿ ನಿಯಂತ್ರಣಕ್ಕೆ ಹಲವಾರು ಯೋಜನೆಗಳನ್ನು ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನವು ಹಮ್ಮಿಕೊಂಡಿದೆ ಎಂದರು. ಪರಶುರಾಮ್ ಕಲಾಲ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಲಕ್ಷ್ಮೀ ನರಸಮ್ಮನವರು ಮಾತನಾಡಿದರು. ಗೀತಾ, ರಾಧಾ ಮತ್ತು ಪ್ರಿಯಾ ಅನುಭವ ಹಂಚಿಕೊಂಡರು. ಗೌರಮ್ಮ ಮತ್ತು ತಂಡ ಪ್ರಾರ್ಥಿಸಿದರು. ಸುಮಿತ್ರಾ ಸ್ವಾಗತಿಸಿದರು. ವ್ಯವಸ್ಥಾಪಕ ಮಂಜುನಾಥ ನಿರೂಪಿಸಿದರು.