ಆಮ್ ಆದ್ಮಿಗೆ ಉತ್ತಮ ಬೆಂಬಲ: ಮಾಳಗಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 23
ಬಿಜೆಪಿಯ ಅಕ್ರಮ ಗಣಿಗಾರಿಕೆ (ಭ್ರಷ್ಟಾಚಾರ) ಮತ್ತು ಕುಟುಂಬ ರಾಜಕಾರಣ ಹಾಗೂ ಕಾಂಗ್ರೆಸ್ನ ನಿಷ್ಕ್ರಿಯತೆ ಮತ್ತು ಪಲಾಯನವಾದಗಳನ್ನು ಗಮನಿಸಿರುವ ಬಳ್ಳಾರಿಯ ಜನತೆ ಪರ್ಯಾಯ ವ್ಯವಸ್ಥೆಗಾಗಿ ಚಿಂತನೆ ನಡೆಸಿದ್ದು, ಆಮ್ ಆದ್ಮಿಗೆ ಉತ್ತಮ ಬೆಂಬಲ ಲಭಿಸಲಿದೆ. ಇತರೆ ಪಕ್ಷಗಳನ್ನು ಸೋಲಿಸುವುದಕ್ಕಿಂತ ಗೆಲ್ಲುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಆಮ್ ಆದ್ಮಿಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಪತ್ರಕರ್ತ ಶಿವಕುಮಾರ ಮಾಳಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಬಳ್ಳಾರಿಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕಿಸುವುದೇ ಪಕ್ಷದ ಮುಖ್ಯ ಧ್ಯೇಯವಾಗಿದೆ. 2014ರ ಲೋಕಸಭೆ ಚುನಾವಣೆ ಬಳ್ಳಾರಿಯಲ್ಲಿ ಮಾತ್ರ ದುಷ್ಟಶಕ್ತಿ ಮತ್ತು ತಾತ್ವಿಕ ಶಕ್ತಿ ಮಧ್ಯೆ ನಡೆಯುವ ಚುನಾವಣೆಯಾಗಲಿದೆ ಎಂದರು. ನನಗೆ ಬಾಲ್ಯದಿಂದಲೂ ರಾಜಕೀಯಕ್ಕೆ ಬರಬೇಕೆಂಬ ಆಸೆಯಿತ್ತು. ಅದಕ್ಕೆ ಸೂಕ್ತ ಕಾಲ ಕೂಡಿ ಬಂದಿರಲಿಲ್ಲ. ಆದರೆ, ಸ್ನೇಹಿತರ ಸಹಕಾರ, ಸೂಚನೆಯನ್ವಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ನನ್ನ ಬಾಲ್ಯದ ಕನಸಿಗೆ ಸ್ಪಷ್ಟ ನಿರ್ಧಾರ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಜೆ. ಶಾಂತಾ ಪ್ರಥಮ: ಐದು ವರ್ಷ ಬಳ್ಳಾರಿಯ ಸಂಸದೆಯಾಗಿದ್ದ ಜೆ. ಶಾಂತಾ, ತಮ್ಮ ಅನುದಾನವನ್ನೇ ಸಮರ್ಪಕವಾಗಿ ಬಳಕೆ ಮಾಡದ ದೇಶದ 543 ಸಂಸದರ ಪೈಕಿ ಇವರೇ ಮೊದಲಿಗರಾಗಿದ್ದಾರೆ. ಈ ಕುರಿತು ಹಲವು ಪತ್ರಿಕೆಗಳು ಬಿತ್ತರಿಸಿದ್ದು, ಇದರಿಂದ ಅವರಲ್ಲಿರುವ ಜನಪರ ಅಭಿವೃದ್ಧಿ ಕಾಳಜಿ ಎಷ್ಟೆಂಬುದು ಸ್ಪಷ್ಟವಾಗಲಿದೆ. ಈ ನಿಟ್ಟಿನಲ್ಲಿ ಜನರು ಎಎಪಿ ಪರ ಒಲವು ತೋರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಷ್ಟ ಭರಿಸಲಿ: ಸ್ವಾಭಿಮಾನದ ಹೆಸರಿನಲ್ಲಿ ಬಿಜೆಪಿಗೆ ರಾಜಿನಾಮೆ ನೀಡಿ ಬಿಎಸ್ಆರ್ ಸ್ಥಾಪಿಸಿದ್ದ ಶ್ರೀರಾಮುಲು, ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಬಿಜೆಪಿಗೆ ಮರಳಿದ್ದಾರೆ. ಇವರ ರಾಜಿನಾಮೆಯಿಂದ ತೆರವಾಗಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಲಿದೆ. ಅದರಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟವನ್ನು ಅವರೇ ಭರಿಸಬೇಕು ಎಂದು ಒತ್ತಾಯಿಸಿದರು. ಸದ್ಯ ಬಳ್ಳಾರಿಯಲ್ಲಿ 6000 ಸದಸ್ಯರು ಸದಸ್ಯತ್ವ ಪಡೆದಿದ್ದು, ನಗರದಲ್ಲಿ 1650 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಕಂಪ್ಲಿ ತಾಲೂಕುಗಳಲ್ಲಿ ಘಟಕಗಳನ್ನು ನಿರ್ಮಿಸಲಾಗಿದೆ ಎಂದರು.
ಮಾ. 26ರಂದು ಎಎಪಿ ಬಳ್ಳಾರಿ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ್ ಹಾಗೂ ಜನಸಂಗ್ರಾಮ ಪರಿಷತ್ನ ಮುಖಂಡ ರಾಘವೇಂದ್ರ ಕುಷ್ಟಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಎಎಪಿ ಜಿಲ್ಲಾ ಸಂಚಾಲಕ ವಿಜಯಕುಮಾರ್ ಪತ್ತಿ ಮಾತನಾಡಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶ್ರೀನಿವಾಸ್, ಹನುಮೇಶ್, ಸುರೇಂದ್ರ ಛೋಪ್ರ, ಹರಿಶಂಕರ್ ಅಗರ್ವಾಲ್ ಇದ್ದರು.