ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪುನರಾಯ್ಕೆಗೇ ಮಹತ್ವ ಕೊಟ್ಟ ಬಳ್ಳಾರಿ

Srinivasa Murthy VN
Updated On : 24 Mar 2014, 11:05 am

-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 23
ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಮಾತ್ರ ಆಗಿರಲಿಲ್ಲ, ಲೋಕಸಭೆ ಚುನಾವಣೆಯ ಇತಿಹಾಸದಲ್ಲಿ ಇಲ್ಲಿ ಇಬ್ಬರು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಹುತೇಕ ಅಭ್ಯರ್ಥಿಗಳು ಕನಿಷ್ಠ ಎರಡು ಬಾರಿ ಗೆದ್ದಿದ್ದಾರೆ. 1952ರಿಂದ 2009ರ ವರೆಗೆ ನಡೆದ 16 ಚುನಾವಣೆಗಳ ಕಥೆಯಿದು. 1952ರಲ್ಲಿ ಹರಪನಹಳ್ಳಿ ಒಳಗೊಂಡು ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ 3,58,727 ಇತ್ತು. ಈಗ, ಹರಪನಹಳ್ಳಿ, ಸಿರುಗುಪ್ಪ ಹೊರತುಪಡಿಸಿ, ಬಳ್ಳಾರಿ ಲೋಕಸಭೆ ಕ್ಷೇತ್ರದ ಮತದಾರರ ಸಂಖ್ಯೆ 14,50,986 ಆಗಿದೆ.
ಹ್ಯಾಟ್ರಿಕ್ ಸಾಧಕ ಟಿ. ಸುಬ್ರಹ್ಮಣ್ಯಂ: 1952ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರ ಮದ್ರಾಸ್ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟಿತ್ತು. ಬಳ್ಳಾರಿ, ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. 1952ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ. ಸುಬ್ರಹ್ಮಣ್ಯಂ ಪಕ್ಷೇತರ ಅಭ್ಯರ್ಥಿ ವೈ. ಮಹಾಬಳೇಶ್ವರಪ್ಪ ಅವರನ್ನು ಸೋಲಿಸಿದ್ದರು. 1957ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಟಿ. ಸುಬ್ರಹ್ಮಣ್ಯಂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜಯಿಸಿದರು. ಪಕ್ಷೇತರ ವೈ. ಮಹಾಬಳೇಶ್ವರಪ್ಪ ಮತ್ತೆ ಸೋಲುಂಡರು. 1962ರಲ್ಲೂ ಗೆದ್ದ ಟಿ. ಸುಬ್ರಹ್ಮಣ್ಯಂ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಬಾರಿ ಸೋಲುಂಡವರು ಸ್ವತಂತ್ರ ಪಾರ್ಟಿ (ಎಸ್‌ಡಬ್ಲ್ಯೂಎ) ಅಭ್ಯರ್ಥಿ ಜೆ. ಮಹ್ಮದ್ ಇಮಾಮ್.
ಹ್ಯಾಟ್ರಿಕ್ ಸಾಧಕಿ: ಬಳ್ಳಾರಿ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಸತತ ಮೂರು ಬಾರಿ ಗೆದ್ದು ವಿಶೇಷ ದಾಖಲೆ ಬರೆದಿದ್ದಾರೆ. ಬಸವರಾಜೇಶ್ವರಿ ಅವರು 1984ರಲ್ಲಿ ಎಂ.ಪಿ. ಪ್ರಕಾಶ್ ವಿರುದ್ಧ ಗೆಲವು ಸಾಧಿಸಿದರೆ, 1989ರಲ್ಲಿ ಎನ್. ತಿಪ್ಪಣ್ಣನವರ ವಿರುದ್ಧ, 1991ರಲ್ಲಿ ವೈ. ನೆಟ್ಟೆಕಲ್ಲಪ್ಪ ವಿರುದ್ಧ ಗೆದ್ದು, ಸಂಸತ್ ಪ್ರವೇಶಿಸಿದರು. ಕೊನೆಯ ಅವಧಿಯಲ್ಲಿ ಸಚಿವ ಸ್ಥಾನವನ್ನೂ ಪಡೆದರು.
ಪುನರಾಯ್ಕೆಯಾದವರು: 1967ರಲ್ಲಿ ಕಾಂಗ್ರೆಸ್‌ನಿಂದ ಡಾ೤ ವಿ.ಕೆ.ಆರ್.ವಿ. ರಾವ್ ಸ್ಪರ್ಧಿಸಿ, ಎಸ್‌ಡಬ್ಲ್ಯುಎ ಅಭ್ಯರ್ಥಿ ವೈ. ಮಹಾಬಳೇಶ್ವರಪ್ಪ ಅವರನ್ನು ಸೋಲಿಸಿದ್ದರು. 1971ರಲ್ಲಿ ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಜಗಜೀವನರಾಂ ಕಾಂಗ್ರೆಸ್ ಆರ್) ಪಕ್ಷದಿಂದ ಗೆದ್ದರು. ಆಗಲೂ ಸೋಲಿನ ರುಚಿ ಉಂಡಿದ್ದು ವೈ. ಮಹಾಬಳೇಶ್ವರಪ್ಪ. ರಾವ್ ಕೇಂದ್ರದಲ್ಲಿ ಹಣಕಾಸು ಸಚಿವರೂ ಆದರು. 1996ರಲ್ಲಿ ನಡೆದ 11ನೇ ಲೋಕಸಭಾ ಚುನಾವಣೆಯಲ್ಲಿ ಕೆ.ಸಿ ಕೊಂಡಯ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜನತಾದಳದ ಎನ್. ತಿಪ್ಪಣ್ಣ ವಿರುದ್ಧ 4,519 ಮತಗಳಿಂದ ಗೆಲವು ಸಾಧಿಸಿದರು. 1998ರಲ್ಲೂ ಫಲಿತಾಂಶ ಪುನರಾವರ್ತನೆಯಾಯಿತು.
ಒಂದು ಬಾರಿ ಗೆದ್ದವರು: 1977ರಲ್ಲಿ ನಡೆದ 6ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಎಸ್. ವೀರಭದ್ರಪ್ಪ, ಭಾರತೀಯ ಲೋಕದಳ (ಬಿಎಲ್‌ಡಿ) ಅಭ್ಯರ್ಥಿ ಎನ್. ತಿಪ್ಪಣ್ಣ ವಿರುದ್ಧ ಗೆದ್ದರು. 1980ರ ಚುನಾವಣೆಯಲ್ಲಿ ಆರ್.ವೈ. ಘೋರ್ಪಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಕಾಂಗ್ರೆಸ್ (ಯು) ನಿಂದ ಕಣಕ್ಕಿಳಿದಿದ್ದ ಎಂ.ವೈ. ಘೋರ್ಪಡೆ ಅವರನ್ನು ಸೋಲಿಸಿದರು. 1999ರಲ್ಲಿ ನಡೆದ ಐತಿಹಾಸಿಕ 13ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಬಿಜೆಪಿಯ ಸುಷ್ಮಾ ಸ್ವರಾಜ್ ಅವರನ್ನು ಮಣಿಸಿದರು. ಸೋನಿಯಾ ರಾಜಿನಾಮೆ ತರುವಾಯ 2000ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೆ. ಬಸವನಗೌಡ ಬಿಜೆಪಿಯ ಕೆ.ಎಸ್. ವೀರಭದ್ರಪ್ಪ ವಿರುದ್ಧ ಗೆದ್ದರು.
2004ರಲ್ಲಿ ಬಿಜೆಪಿಯ ಜಿ. ಕರುಣಾಕರ ರೆಡ್ಡಿ, ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ ವಿರುದ್ಧ ಗೆಲವು ಸಾಧಿಸಿದರು. 2009ರಲ್ಲಿ ಬಿಜೆಪಿಯ ಜೆ. ಶಾಂತಾ, ಕಾಂಗ್ರೆಸ್‌ನ ಎನ್.ವೈ. ಹನುಮಂತಪ್ಪ ವಿರುದ್ಧ ಜಯ ಗಳಿಸಿದರು. ಕಳೆದ ಬಾರಿ ಜೆ. ಶಾಂತಾ ವಿರುದ್ಧ ಸೋತಿದ್ದ ಎನ್.ವೈ. ಹನುಮಂತಪ್ಪ ಈ ಬಾರಿ ಹಾಲಿ ಸಂಸದೆಯ ಅಣ್ಣನ ವಿರುದ್ಧ ಕಣಕ್ಕಿಳಿದಿದ್ದಾರೆ. ಈ ಬಾರಿ ಮತದಾರ ಯಾರನ್ನು ಗೆಲ್ಲಿಸುತ್ತಾನೋ ಎಂಬ ಕುತೂಹಲ ಮನೆ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement