ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮೋದಿ ಪ್ರಧಾನಿ ಮಾಡಲು ಜನ ಉತ್ಸುಕ

Srinivasa Murthy VN
Updated On : 24 Mar 2014, 11:05 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 23
ಕೇಂದ್ರದಲ್ಲಿ ಯುಪಿಎ ಸರ್ಕಾರ ರೈತರಿಗೆ, ಬಡವರಿಗೆ ಮತ್ತು ದಲಿತರಿಗೆ ಸೇರಿದಂತೆ ಶ್ರೀಸಾಮಾನ್ಯರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಆಡಳಿತ ನೀಡದೇ ಜನವಿರೋಧಿ ನೀತಿಯನ್ನು ಅನುಸರಿಸಿದೆ. ಹೀಗಾಗಿ, ಈಗ ದೇಶ ಪ್ರೇಮಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಜನ ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಡೀ ದೇಶಕ್ಕೆ ಗುಜರಾತ್ ಅನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ ಕೀರ್ತಿ ಮೋದಿ ಅವರದ್ದಾಗಿದೆ. ಅವರೇ ಈಗ ಪ್ರಧಾನಿಯಾದರೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಜನಪರ ಕೆಲಸಗಳನ್ನು ಕೈಗೊಂಡಿಲ್ಲ. ಕೃಷ್ಣಾ ಕಡೆಗೆ ಕಾಂಗ್ರೆಸ್ ನಡಿಗೆ ಎಂದು ಹೊಸಪೇಟೆಯಿಂದ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬಜೆಟ್‌ನಲ್ಲಿ ಕೃಷ್ಣಾ ನದಿಗೆ ಹೆಚ್ಚಿನ ಹಣ ಮೀಸಲಿಟ್ಟಿಲ್ಲ ಎಂದು ಆರೋಪಿಸಿದರು. 30 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದು, ನನ್ನ ಮೇಲೆ ಕಪ್ಪು ಚುಕ್ಕಿ ಇಡಲು ಅಕ್ರಮ ಗಣಿಗಾರಿಕೆಯಲ್ಲಿ ಲೋಕಾಯುಕ್ತರ ಪಟ್ಟಿಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿದೆ. ಇದು ನನಗೆ ಮುಜುಗುರ ಉಂಟು ಮಾಡಿದ್ದು, ಆಗ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯಕ್ಕೆ ಹೋಗಿ ಜನಾದೇಶ ಪಡೆದೆ. ಬಿಎಸ್‌ಆರ್ ಹುಟ್ಟುಹಾಕಿದ್ದು, ಅವತ್ತಿಗೆ ಅದು ಸರಿಯಾಗಿಯೇ ಇತ್ತು ಎಂದು ಸಮರ್ಥಿಸಿಕೊಂಡರು. ಇದೇ ವೇಳೆ, ಮಾ. 26ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಸಂಸದರಾದ ಜೆ. ಶಾಂತಾ, ಸಣ್ಣ ಫಕೀರಪ್ಪ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ಕೆ. ನೇಮಿರಾಜ ನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ಬಿಜೆಪಿ ಮುಖಂಡರಾದ ಧಮೇಂದ್ರ ಸಿಂಗ್, ಸಂದೀಪ್ ಸಿಂಗ್, ವಿನಾಯಕ ಸ್ವಾಮಿ, ಆರ್. ಕೊಟ್ರೇಶ್, ವಿಜಯಕುಮಾರ ಹಿರೇಮಠ, ಗೋವಿಂದರಾಜ, ಚಂದ್ರಶೇಖರ್, ಜಿಪಂ ಸದಸ್ಯೆ ಅನಿತಾ ಆನಂದ್, ನಗರಸಭಾ ಸದಸ್ಯ ಚಂದ್ರಕಾಂತ್ ಕಾಮತ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement