ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕನ್ನಡ ಶಾಲೆಗೆ ಭೂಮಿ ಕೊಟ್ಟ ತೆಲುಗ!

Srinivasa Murthy VN
Updated On : 25 Mar 2014, 10:47 am

ಕನ್ನಡಪ್ರಭ ವಾರ್ತೆ ಬಳ್ಳಾರಿ ಮಾ. 24
ಕರ್ನಾಟಕದಲ್ಲೇ ಕನ್ನಡದ ರಕ್ಷಣೆಯ ಕೂಗು ಮುಗಿಲು ಮುಟ್ಟಿರುವಾಗ, ಗಡಿನಾಡಿನಲ್ಲಿ ಅದರ ಸ್ಥಿತಿ ಊಹಿಸಲೂ ಅಸಾಧ್ಯ. ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಕನ್ನಡ ಶಾಲೆ ತೆರೆಯಲು 3 ಎಕರೆ ಜಮೀನು ನೀಡಿದ್ದಲ್ಲದೆ, ಅದನ್ನು ಆರಂಭಿಸಲು ಸರ್ಕಾರಿ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದು, ತೆಲುಗು ಮಾತೃಭಾಷೆಯ ವೃದ್ಧ ದಂಪತಿ ಎಂದರೆ ಅಚ್ಚರಿಆದೀತು.
ಅಷ್ಟಕ್ಕೂ ಈ ಶಾಲೆ ಆರಂಭವಾಗಿದ್ದು, ಕರ್ನಾಟಕದಲ್ಲಿ ಅಲ್ಲ, ಆಂಧ್ರ ಪ್ರದೇಶದಲ್ಲಿ!
ಆಂಧ್ರ ಪ್ರದೇಶದ 74ರ ಹರೆಯದ ರೈತ ಬಿ. ಸಿದ್ದಾರೆಡ್ಡಿ ಹಾಗೂ ಅವರ ಪತ್ನಿ ಮನೋರಮಾ ಕನ್ನಡ ನುಡಿಗಾಗಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ರು. 20 ಲಕ್ಷ ಮೌಲ್ಯದ ಮೂರು ಎಕರೆ ಜಮೀನನ್ನು ಕನ್ನಡ ಶಾಲೆಗೆ ದಾನ ಮಾಡಿದ್ದಾರೆ. ಕಚೇರಿಗಳನ್ನು ಅಲೆದಾಡಿ, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಬಾಪುರ ಗ್ರಾಮದಲ್ಲಿ ಸರ್ಕಾರಿ ಕನ್ನಡ ಪ್ರೌಢಶಾಲೆ ಆರಂಭಿಸಿದ್ದಾರೆ.
ಕೇಳಿದೊಡನೆ ಕೊಟ್ಟರು!: ತಮ್ಮ ಊರಿನ (ಬಾಪುರ) ಕನ್ನಡ ಮಕ್ಕಳು ದಿನಕ್ಕೆ ಏಳೆಂಟು ಕಿ.ಮೀ. ದೂರ ಶಾಲೆ ಕಲಿಯುವುದಕ್ಕೆ ತೊಂದರೆಯಾಗುತ್ತದೆ ಎಂದು ಪ್ರೌಢಶಾಲೆಗಾಗಿ ಪರವಾನಗಿ ಕೇಳಲು ಹೋದರೆ ಶಾಲೆಗೆ ಭೂಮಿ ಕೊಡಿ, ಶಾಲೆ ಆರಂಭಕ್ಕೆ ಪರವಾನಗಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದರು. ತಕ್ಷಣವೇ ತಮ್ಮ ಮೂರು ಎಕರೆ ಭೂಮಿಯನ್ನು ಸಿದ್ದಾರೆಡ್ಡಿ ಬರೆದುಕೊಟ್ಟರು. ಕರ್ನೂಲು ಸಂಸದ ಸೂರ್ಯಪ್ರಕಾಶ್ ರೆಡ್ಡಿ ಅವರನ್ನು ಸಂಪರ್ಕಿಸಿ, ಕಚೇರಿಗಳ ಮೆಟ್ಟಿಲೇರಿ ಇಳಿದು, ಶಾಲೆ ಆರಂಭಿಸಿದ್ದಾರೆ.
ತಾಯಿಯೂ ಭೂಮಿ ನೀಡಿದ್ದರು: ಕರ್ನೂಲು ಜಿಲ್ಲೆಯ ಆದೋನಿ ವ್ಯಾಪ್ತಿಯ ಬಾಪುರ ಒಂದು ಚಿಕ್ಕ ಗ್ರಾಮ. ಈ ಹಿಂದೆ ಕನ್ನಡ ಪ್ರಾಥಮಿಕ ಶಾಲೆ ಆರಂಭಿಸುವಾಗ ಸಿದ್ದಾರೆಡ್ಡಿ ತಾಯಿ ನಾಗಮ್ಮ 2 ಎಕರೆ ಜಮೀನು ಕೊಟ್ಟಿದ್ದರು. ಅಲ್ಲಿ 7ನೇ ತರಗತಿ ವರೆಗೆ ಕಲಿಯುವ ಮಕ್ಕಳು, ಪ್ರೌಢಶಾಲೆಗೆ ದೂರದ ಕೌತಾಳಂಗೆ ಹೋಗಬೇಕಿತ್ತು. ಬಸ್ ಸೌಲಭ್ಯವೂ ಇಲ್ಲದ ಕಾರಣ ಕನ್ನಡ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು. ಈಗ ಸಿದ್ದಾರೆಡ್ಡಿ ಊರಲ್ಲೇ ಕನ್ನಡ ಪ್ರೌಢಶಾಲೆ ಆರಂಭಿಸಿ, ಮಕ್ಕಳ ಕಷ್ಟ ನೀಗಿಸಿದ್ದಾರೆ.
ರು. 20 ಸಾವಿರ ಮೌಲ್ಯದ ಪರಿಕರ: ಮನೆಯಲ್ಲಿ ಬಡತನವಿದ್ದು, ಜೀವನೋಪಾಯಕ್ಕಾಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಕನ್ನಡಪರ ಹೋರಾಟಗಾರ ಶ್ರೀಧರಗಡ್ಡೆ ಸಿದ್ದಬಸಪ್ಪ, ಬಾಪುರ ಶಾಲೆಗಾಗಿ ತಮ್ಮ ದುಡಿಮೆಯಲ್ಲಿ ರು. 20 ಸಾವಿರ ಮೌಲ್ಯದ ಶೈಕ್ಷಣಿಕ ಪರಿಕರಗಳನ್ನು ಒದಗಿಸಿದ್ದಾರೆ. ಅವರೂ ಸಿದ್ದಾರೆಡ್ಡಿ ಅವರ ಶ್ರಮ, ತ್ಯಾಗವನ್ನು ಶ್ಲಾಘಿಸುತ್ತಾರೆ. ಇಂತಹ ಕನ್ನಡಪರ ಕಾಳಜಿ ಉಳ್ಳವರು ನಿಜಕ್ಕೂ ವಿರಳ. ಸಿದ್ದಾರೆಡ್ಡಿ ಅವರಂಥವರಿಂದಲೇ ಗಡಿನಾಡಿನಲ್ಲಿ ಕನ್ನಡ ರಕ್ಷಣೆ ಸಾಧ್ಯ ಎನ್ನುತ್ತಾರೆ.
ಸಿದ್ದಾರೆಡ್ಡಿ ಅವರ ಕನ್ನಡಪರ ಕಾಳಜಿಯಿಂದಾಗಿ ಬಾಪುರ ಗ್ರಾಮದ 200ಕ್ಕೂ ಹೆಚ್ಚು ಕನ್ನಡ ಮಕ್ಕಳು ಪ್ರೌಢಶಾಲಾ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪಡೆಯುವಂತಾಗಿದೆ. ಸಿದ್ದಾರೆಡ್ಡಿ-ಮನೋರಮಾ ದಂಪತಿಯ ಕನ್ನಡ ಕಾಳಜಿಗೆ ಧನ್ಯವಾದ ಹೇಳಬೇಕೇ?, ಕರೆ ಮಾಡಿ: ಮೊ. 09490436055, ದೂ. 08512- 258209.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement