ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಲ್ಲಯ್ಯಜ್ಜಗೆ ತುಲಾಭಾರ ಸೇವೆ

Srinivasa Murthy VN
Updated On : 25 Mar 2014, 10:49 am

ಕುರುಗೋಡು: ಪಟ್ಟಣಕ್ಕೆ ಸಮೀಪದ ಗೆಣಿಕಿಹಾಳ್ ಗ್ರಾಮದ ಶ್ರೀ ಶಾಂತೇಶ್ವರ ಮಠದ ಆವರಣದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರಿಗೆ ಗ್ರಾಮದ ಭಕ್ತಾಧಿಗಳಿಂದ ತುಲಾಭಾರ ಸೇವೆ ಜರುಗಿತು.
ನಂತರ ಮಾತನಾಡಿದ ಕಲ್ಲಯ್ಯಜ್ಜನವರು, ಗುರು ಪುಟ್ಟರಾಜ ಗವಾಯಿಗಳು ಹಾಕಿಕೊಟ್ಟ ಹಾದಿಯಲ್ಲಿ ತಾವುಗಳ ಸಾಗುತ್ತ, ಯಾವುದೇ ಪ್ರತಿಫಲ ಅಪೇಕ್ಷಿಸದೆ ಯಾವುದೆ ರೀತಿಯಲ್ಲಾದರೂ ಸಹಾಯ ಮಾಡುವುದೆ ಪರೋಪಕಾರ ಎಂದು ತಿಳಿಸಿದರು. ಗದುಗಿನ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ್ ಹಿಡಿಕಿಮಠ್ ಮಾತನಾಡಿದರು. ಹೇಮರಾಜ ಶಾಸ್ತ್ರಿ ಹಾಗೂ ಸುರೇಶ್‌ಕುಮಾರ್ ಗವಾಯಿ 19 ದಿನದವರೆಗೆ ಪುರಾಣ ಪ್ರವಚನ ನಡೆಸಿದರು. ನರಸಲಗಿ ಚನ್ನಬಸವರಾಜ್ ತಬಲ ಸಾಥ್ ನೀಡಿದರು. ಈ ವೇಳೆ ಗೆಣಿಕಿಹಾಳ್ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು. ಜಯಂತ್ ನಿರ್ವಹಿಸಿದರು. ಅನ್ನ ಸಂತರ್ಪಣೆ ನಡೆಯಿತು.

ಶಾಸಕ ರಾಮಚಂದ್ರ ರೆಡ್ಡಿಗೆ ಜಾಮೀನು
ಬಳ್ಳಾರಿ:  ಇತ್ತೀಚೆಗೆ ಆಂಧ್ರಪ್ರದೇಶದ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ಠಾಣಾ ಜಾಮೀನು ಪಡೆದಿದ್ದಾರೆ. ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿರುವ ರಾಮಚಂದ್ರ ರೆಡ್ಡಿ ಮನೆ ಮೇಲೆ ಎಡಿಸಿ ವೆಂಕಟೇಶ್, ತಹಸೀಲ್ದಾರ್ ಶರಣಪ್ಪ ಹಾಗೂ ಡಿವೈಎಸ್ಪಿ ರುದ್ರಮುನಿ ನೇತೃತ್ವದ ತಂಡ ದಾಳಿ ಮಾಡಿ, ಮತದಾರರಿಗೆ ಆಮಿಷವೊಡ್ಡಲು ಇಟ್ಟಿದ್ದಾರೆ ಎನ್ನಲಾದ ರು. 43 ಲಕ್ಷ ಮೌಲ್ಯದ 3 ಬ್ಲಾಂಕ್ ಚೆಕ್, ಸಾವಿರ ಸೀರೆ, 25 ಕ್ರಿಕೆಟ್ ಬ್ಯಾಟ್, 100 ವಿಕೆಟ್‌ಗಳು, 13 ಕುಕ್ಕರ್ ವಶಪಡಿಸಿಕೊಂಡು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಠಾಣಾ ಜಾಮೀನು ಪಡೆದರು.

ಲಾರಿ ಡಿಕ್ಕಿ:  ಪಾದಚಾರಿ ಸಾವು
ಬಳ್ಳಾರಿ: ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೃತನನ್ನು ಟಪಾಲ್ ಕುಮಾರಸ್ವಾಮಿ (32) ಎಂದು ಗುರುತಿಸಲಾಗಿದೆ. ಈತನು ಎಸ್‌ಡಬ್ಲೂಎಂಎಲ್ ಕ್ರಷರ್ ಯಾರ್ಡ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮೈನ್ಸ್‌ನ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಮಹಾನಗರ ಪಾಲಿಕೆ ವತಿಯಿಂದ ಸ್ಥಳೀಯ ಬಂಡಿಹಟ್ಟಿ ಪ್ರದೇಶದಲ್ಲಿ ರಸ್ತೆ ಅಗಲೀಕರಣದ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ. 25ರಂದು ಬಂಡಿಹಟ್ಟಿ ರಾಮನಗರ, ರೆಡ್ಡಿ ಕ್ಯಾಂಪ್, ಅಜಾದ್ ನಗರ, ಎಕ್ಸ್‌ಸರ್ವಿಸ್ ಮೆನ್ ಕಾಲೋನಿ, ಮೋರ್‌ಗಲ್ಲಿ, ಐಶ್ವರ್ಯ ಕಾಲೋನಿ, ಜಾಗೃತಿ ನಗರ, ಕವಾಡಿ ಬೀದಿ, ದಾನಪ್ಪ ಬೀದಿ, ಬೀಡಿ ಕಾಲೋನಿ, ಈದ್ಗಾ ಮೈದಾನ, ನಲ್ಲಚೆರುವು, ಬಟ್ಟಿ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಜೆಸ್ಕಾಂ ನಗರ ಉಪ ವಿಭಾಗದ ಎಇಇ ವೀರಾಂಜನೇಯ ರಾವ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬಿಎಸ್ಸೆನ್ನೆಲ್ ಸಂವಾದ ರದ್ದು
ಬಳ್ಳಾರಿ: ಭಾರತ ಸಂಚಾರ ನಿಗಮ ನಿಯಮಿತದಿಂದ ಮಾ. 26ರಂದು ಮಧ್ಯಾಹ್ನ 3 ಗಂಟೆಗೆ ಹೊಸಪೇಟೆಯ ಬಿಡಿಸಿಸಿ ಬ್ಯಾಂಕಿನ ಮುಖ್ಯ ಕಚೇರಿಯ ಫಂಕ್ಷನ್ ಹಾಲ್‌ನಲ್ಲಿ ನಡೆಯಬೇಕಿದ್ದ ಮುಕ್ತ ಸಂವಾದ ಕಾರ್ಯಕ್ರಮವನ್ನು ಆಡಳಿತಾತ್ಮಕ ಕಾರಣಾಂತರಗಳಿಂದ ರದ್ದುಪಡಿಸಲಾಗಿದ್ದು ಗ್ರಾಹಕರು ಸಹಕರಿಸಬೇಕೆಂದು ಟೆಲಿಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿವೈಡರ್‌ಗೆ ಡಿಕ್ಕಿ: ಸಾವು
ಬಳ್ಳಾರಿ: ಬೈಕ್ ಸವಾರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಬಳ್ಳಾರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೃತನನ್ನು ಈಶ್ವರಯ್ಯ (40) ಎಂದು ಗುರುತಿಸಲಾಗಿದೆ. ಈತನು ನಗರದ ಮೋತಿ ವೃತ್ತದ ಸಮೀಪ ಅತಿವೇಗ ಹಾಗೂ ಅಜಾಗರುಕತೆಯಿಂದ ಬೈಕ್ ಚಲಾಯಿಸಿ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕೆಳಗೆ ಬಿದ್ದು  ಗಾಯಗಳಾಗಿದ್ದವು. ವಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜತೆಗೆ ಬೈಕ್‌ನ ಹಿಂಬದಿ ಕುಳಿತಿದ್ದ ರಮೇಶ್ ಎಂಬಾತನಿಗೆ ಗಾಯಗಳಾಗಿವೆ. ಈ ಬಗ್ಗೆ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ: 7 ಬಂಧನ
ಬಳ್ಳಾರಿ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕೌಲ್‌ಬಜಾರ್ ಠಾಣೆ ಪಿಐ,  ಸಿಬ್ಬಂದಿ ದಾಳಿ ಮಾಡಿ, ಕೃಷ್ಣ, ಮಲ್ಲಿಕಾರ್ಜುನ, ಕುಮಾರ್, ದುರುಗ, ಗೋವಿಂದ, ಸುರೇಂದ್ರ, ಹನುಮಂತ ಎಂಬುವವರನ್ನು ಬಂಧಿಸಿ, ಅವರಿಂದ ರು. 5,600 ಜಪ್ತು ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ್‌ಬಾಹರ್: ನಗದು ವಶ
ಬಳ್ಳಾರಿ: ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ನಗದು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ತಾಳೂರು ರಸ್ತೆ ಬಾಲಾಜಿನಗರ ಕ್ಯಾಂಪಿನ ಶ್ರೀ ಬಾಲಾಜಿಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಸ್ಪೀಟ್ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಎಂ. ಸತೀಶ್ ಸೇರಿದಂತೆ 11 ಜನರನ್ನು ಬಂಧಿಸಿ, ರು. 67,235 ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮಶೇಖರ ರೆಡ್ಡಿ ಮತ ಯಾಚನೆ
ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ನಗರದ ವಿವಿಧ ವಾರ್ಡ್‌ಗಳಿಗೆ ತೆರಳಿ ಬಿಜೆಪಿ ಕರಪತ್ರ ಹಂಚುವ ಮೂಲಕ ಸೋಮವಾರ ಮತಯಾಚನೆ ಮಾಡಿದರು.
ಸೋಮವಾರ ಬೆಳಗ್ಗೆ 6 ಗಂಟೆಗೆ ಒಂದನೇ ವಾರ್ಡಿನ ಶ್ರೀನಗರದಲ್ಲಿ ವೀರಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಮನೆ ಮನೆಗೆ ತೆರಳಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಹಾಗೂ ದೇಶದ ಅಭಿವೃದ್ಧಿಯ ಕನಸು ಕಾಣುತ್ತಿರುವ ಜನತೆಯ ಕನಸನ್ನು ನನಸು ಮಾಡಲು ಈ ಬಾರಿ ಬಿ. ಶ್ರೀರಾಮುಲು ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮಂಗಳವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತದೆ, ನಾಮಪತ್ರ ಸಲ್ಲಿಸಿದ ಬಳಿಕ ಎಲ್ಲಾ ವಾರ್ಡ್‌ಗಳಲ್ಲಿ ಶ್ರೀರಾಮುಲು ಪರ ಮತಯಾಚನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 1ನೇ ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಮುಖಂಡರಾದ ಉಮೇಶ್, ಎರ್ರಿಸ್ವಾಮಿ ಇದ್ದರು.

ಮತದಾನ ಜಾಗೃತಿ ಜಾಥಾ
ಬಳ್ಳಾರಿ: ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಹಾಗೂ ಕಾಲೇಜು ವಿದ್ಯಾರ್ಥಿಗಳು ಬಳ್ಳಾರಿಯ ರಾಯಲ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು. ಸರ್ಕಾರಿ ನೌಕರರು, ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಮತದಾರರು ಯಾವುದೆ ಆಮಿಷಗಳಿಗೆ ಒಳಗಾಗದೆ ಮುಕ್ತವಾಗಿ ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಯುವಕ, ಯುವತಿ ಸಂಘಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳಾ ಸಂಘಗಳ ಪದಾಧಿಕಾರಿಗಳು ಮತದಾನ ಮಾಡುವಂತೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿಗೆ ನೇಮಕ
ಬಳ್ಳಾರಿ: ಭಾರತೀಯ ಜನತಾ ಪಕ್ಷದ ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾಗಿ ಯು. ಉರಕುಂದ ನೇಮಕವಾಗಿದ್ದಾರೆ. ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್. ಹನುಮಂತಪ್ಪ ನೇತೃತ್ವದಲ್ಲಿ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ದತ್ತಾತ್ರೇಯರೆಡ್ಡಿ ಮೋರ್ಚಾದ ಉಪಾಧ್ಯಕ್ಷರನ್ನಾಗಿ ಯು. ಉರುಕುಂದ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement