ನಿರಂತರತೆಯೆ ರಂಗಭೂಮಿ ಜೀವಾಳ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 24
ರಂಗಭೂಮಿಯಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ರಂಗಭೂಮಿಯನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ ಎಂದು ಹಿರಿಯ ರಂಗಕಲಾವಿದೆ ಎಸ್. ರೇಣುಕಾ ಹೇಳಿದರು.
ಅವರು ತಾಲೂಕಿನ ಮರಿಯಮ್ಮನಹಳ್ಳಿಯ ದುರ್ಗಾದಾಸ್ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ನಡೆಸಿದ ಮಹಿಳೆಯರಿಗಾಗಿ ವೃತ್ತಿರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮರಿಯಮ್ಮನಹಳ್ಳಿಯಲ್ಲಿ ನಿರಂತರವಾಗಿ ರಂಗಕಲೆಗಳು ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ಇಂದು ರಂಗಭೂಮಿ ಕಲೆಯನ್ನು ಉಳಿಸಿಕೊಳ್ಳಲು ಯುವಕರು ಹೆಚ್ಚಾಗಿ ತೊಡಗಿಕೊಳ್ಳುವ ಮೂಲಕ ಅದನ್ನು ಹೆಮ್ಮರವಾಗಿ ಬೆಳೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅವರು ಹೇಳಿದರು.
ರಂಗ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಸರ್ಕಾರ ಅನೇಕ ರೀತಿಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕಾಗಿದೆ. ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ನಡೆಯಬೇಕು. ಪ್ರತಿಯೊಬ್ಬ ಕಲಾವಿದರಿಗೂ ಮಾಸಾಶನವನ್ನು ಸಕಾಲಕ್ಕೆ ಒದಗಿಸುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು. ಕಲಾವಿದರು ಮಾಸಾಶನಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುವುದನ್ನು ತಪ್ಪಿಸಿ ಸಕಾಲದಲ್ಲಿ ಕಲಾವಿದರಿಗೆ ಮಾಸಾಶನ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಆಸಕ್ತಿ ಕೊರತೆ: ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಅಧ್ಯಕ್ಷೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತೆ ನಾಡೋಜ ಕೆ. ನಾಗರತ್ನಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳಲ್ಲಿ ಯುವ ಪೀಳಿಗೆ, ಮಹಿಳೆಯರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ರಂಗಭೂಮಿ ಇತ್ತೀಚಿನ ದಿನಗಳಲ್ಲಿ ಮಹಿಳಾ ರಂಗಕಲಾವಿದೆಯರ ಕೊರತೆ ಎದುರಿಸುತ್ತಿರುವುದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ನಾಟಕ ಪ್ರದರ್ಶನ ಕಡಿಮೆಯಾಗುತ್ತಿರುವುದಕ್ಕೆ ಅವರು ಆತಂಕ ವ್ಯಕ್ತಪಡಿಸಿದರು.
ಹಿರಿಯ ರಂಗ ಕಲಾವಿದೆ ಇಲಕಳ್ ಉಮಾದೇವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕಲಾವಿದೆ ಮಾತಾ ಮಂಜಮ್ಮ ಜೋಗತಿ ಮಾತನಾಡಿದರು. ಸ್ಥಳೀಯ ವೈದ್ಯ ಡಾ.ಬಿ. ಅಂಬಣ್ಣ, ಮುಖಂಡ ಡ್ರೈವರ್ ಹನುಮಂತಪ್ಪ, ಬಸವರಾಜಪ್ಪ, ವೆಂಕೋಬಪ್ಪ, ಸರ್ಧಾರ್, ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.