ರೋಗ ಮುಕ್ತ ಜೀವನಕ್ಕೆ ಯೋಗ
ಬಳ್ಳಾರಿ: ರೋಗ ಮುಕ್ತ ಜೀವನ ನಡೆಸಲು ಪ್ರತಿಯೊಬ್ಬರೂ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಯೋಗ ಸಾಧಕ ಕೋರಿ ವಿರೂಪಾಕ್ಷಪ್ಪ ತಿಳಿಸಿದರು.
ನಗರದ ಶೆಟ್ರ ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾ ಶಾಖೆಯಿಂದ ಯೋಗ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಯೋಗ ವಿಜ್ಞಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿರುವ ವೃತ್ತಿ ಉದ್ವಿಗ್ನತೆ, ಗೊಂದಲಗಳು ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಲು ಯೋಗ ಹಾಗೂ ಧ್ಯಾನ ಅತ್ಯಂತ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಯೋಗ, ಧ್ಯಾನವನ್ನು ನಿರಂತರವಾಗಿ ಮಾಡಬೇಕು ಎಂದರು. ಪಿ.ಎಂ. ಸಿದ್ದರಾಮಯ್ಯ ಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಹಣವನ್ನು ಎಷ್ಟು ಬೇಕಾದರೂ ಸಂಪಾದಿಸಬಹುದು ಆದರೆ ಆರೋಗ್ಯ ಹಾಗಲ್ಲ, ಉತ್ತಮ ಆರೋಗ್ಯ ಹೊಂದಿದಲ್ಲಿ ಏನು ಬೇಕಾದರೂ ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಜೀವನದಲ್ಲಿ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಯೋಗ ಗುರು ಭವರ್ಲಾಲ್ ಆರ್ಯ ಯೋಗ ಶಿಬಿರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗಾರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹೀರಾಲಾಲ್ ಚೌಧರಿ, ಮಾರಾಟ ತೆರಿಗೆ ಇಲಾಖೆ ಮುಖ್ಯಸ್ಥ ಲಕ್ಷ್ಮಿಪತಿ ನಾಯ್ಕ, ಪತ್ರಕರ್ತ ಗುರುಶಾಂತಪ್ಪ, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ವಿ. ದೇವೇಂದ್ರಪ್ಪ, ಪದಾಧಿಕಾರಿಗಳಾದ ಎಸ್.ಸಿ. ಪುರಾಣಿಕ್, ಇಸ್ವಿ ಪಂಪಾಪತಿ, ಎಂ. ಸಂಗಪ್ಪ, ಪಿ.ಎಂ. ನಟರಾಜ್, ಭಾರತ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಕಣೇಕಲ್ ಎರ್ರಿಸ್ವಾಮಿ, ಪಿ.ಎಂ. ದೊಡ್ಡಬಸಯ್ಯ ಸೇರಿದಂತೆ ಇತರರು ಇದ್ದರು. ಲಕಿಡ್ಡೀ ಪವನ್ಕುಮಾರ್ ಪ್ರಾರ್ಥಿಸಿದರು. ಜಂಬನಗೌಡ ನಿರೂಪಿಸಿದರು.