ಸೋಮಶೇಖರ ರೆಡ್ಡಿ ಮತ ಯಾಚನೆ
ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಕೆಎಂಎಫ್ ರಾಜ್ಯಾಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ನಗರದ ವಿವಿಧ ವಾರ್ಡ್‌ಗಳಿಗೆ ತೆರಳಿ ಬಿಜೆಪಿ ಕರಪತ್ರ ಹಂಚುವ ಮೂಲಕ ಸೋಮವಾರ ಮತಯಾಚನೆ ಮಾಡಿದರು.
ಸೋಮವಾರ ಬೆಳಗ್ಗೆ 6 ಗಂಟೆಗೆ ಒಂದನೇ ವಾರ್ಡಿನ ಶ್ರೀನಗರದಲ್ಲಿ ವೀರಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಮನೆ ಮನೆಗೆ ತೆರಳಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಹಾಗೂ ದೇಶದ ಅಭಿವೃದ್ಧಿಯ ಕನಸು ಕಾಣುತ್ತಿರುವ ಜನತೆಯ ಕನಸನ್ನು ನನಸು ಮಾಡಲು ಈ ಬಾರಿ ಬಿ. ಶ್ರೀರಾಮುಲು ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಮಂಗಳವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುತ್ತದೆ, ನಾಮಪತ್ರ ಸಲ್ಲಿಸಿದ ಬಳಿಕ ಎಲ್ಲಾ ವಾರ್ಡ್‌ಗಳಲ್ಲಿ ಶ್ರೀರಾಮುಲು ಪರ ಮತಯಾಚನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ 1ನೇ ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಮುಖಂಡರಾದ ಉಮೇಶ್, ಎರ್ರಿಸ್ವಾಮಿ ಇದ್ದರು.
ಹಡಗಲಿಯಿಂದ ಶ್ರೀರಾಮುಲು ಪ್ರಚಾರ ಶುರು
ಬಳ್ಳಾರಿ: ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಪ್ರತಿ ಚುನಾವಣೆಯ ಪ್ರಚಾರವನ್ನು ಜಿಲ್ಲೆಯ ಆರಾಧ್ಯ ದೈವ ಚೇಳ್ಳಗುರ್ಕಿ ಶ್ರೀ ಎರ್ರಿತಾತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿಯೇ ಆ ಗ್ರಾಮದಿಂದಲೇ ಪ್ರಚಾರ ಕಾರ್ಯ ಆರಂಭಿಸುತ್ತಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರವನ್ನು ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಹೂವಿನ ಹಡಗಲಿಯಿಂದ ಆರಂಭಿಸಿದ್ದಾರೆ.
ಆದರೂ ಶುಕ್ರವಾರ ಬೆಳಗ್ಗೆಯೇ ಚೇಳ್ಳಗುರ್ಕಿ ಶ್ರೀ ಎರ್ರಿತಾತ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ಹೂವಿನ ಹಡಗಲಿಗೆ ಹೋಗಿ, ಅಲ್ಲಿಂದ ತಮ್ಮ ಪ್ರಚಾರದ ಕಾರ್ಯವನ್ನು ಶ್ರೀರಾಮುಲು ಶನಿವಾರ ಆರಂಭಿಸಿದ್ದಾರೆ. ಪ್ರತಿ ಚುನಾವಣೆ ಪ್ರಚಾರವನ್ನು ಆರಂಭಿಸುವ ದಿನ ಸಾವಿರಾರು ಕಾರ್ಯಕರ್ತರನ್ನು ಚೇಳ್ಳಗುರ್ಕಿಯಲ್ಲಿ ಸೇರಿಸಿ, ದೊಡ್ಡ ವೇದಿಕೆ ಅಥವಾ ತೆರೆದ ವಾಹನದಲ್ಲಿಯೇ ಪ್ರಚಾರ ಆರಂಭಿಸುತ್ತಿದ್ದರು. ಆದರೆ ಈ ಬಾರಿ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಅನುಪಸ್ಥಿತಿಯಲ್ಲಿಯೇ ಶ್ರೀರಾಮುಲು ಅವರು ಎರ್ರಿತಾತ ದೇವಸ್ಥಾನಕ್ಕೆ ತೆರಳಿ ಕೇವಲ ಪೂಜೆ ಮಾತ್ರ ಸಲ್ಲಿಸಿದರು. ನಂತರ ಅಲ್ಲಿಂದ ಹೂವಿನ ಹಡಗಲಿಗೆ ಹೋಗಿ ಅಲ್ಲಿಂದ ಪ್ರಚಾರ ಆರಂಭಿಸಿದರು.
ಚೇಳ್ಳಗುರ್ಕಿಗೆ ಹೋಗಿದ್ದ ಸಂದರ್ಭದಲ್ಲಿ ಸಂಸದ ಸಣ್ಣ ಫಕ್ಕೀರಪ್ಪ, ಜೆ. ಶಾಂತಾ, ಬಿಜೆಪಿ ಮುಖಂಡರು ಗೋನಾಳ್ ರಾಜಶೇಖರ್ ಗೌಡ, ಗುರುಲಿಂಗನಗೌಡ ಸೇರಿದಂತೆ ಇತರರು ಇದ್ದರು.