ಕೈನಲ್ಲಿ ಗೊಂದಲಗಳಿಲ್ಲ, ಒಗ್ಗಟ್ಟಿದೆ
ಬಳ್ಳಾರಿ: ಜಿಲ್ಲಾ ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ನನ್ನ ಜತೆಗಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಸ್ಪಷ್ಟಪಡಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ಕಾಂಗ್ರೆಸ್ ಪರ ಇದ್ದಾರೆ. ಕೆ.ಸಿ. ಕೊಂಡಯ್ಯ, ದಿವಾಕರ ಬಾಬು ಅನ್ಯ ಕಾರಣದಿಂದ ಬಂದಿಲ್ಲ. ನಾನು ಯಾರನ್ನೂ ಬೆಳೆಸಿಲ್ಲ. ಜನರಿಗೆ ಯಾರ ಮೇಲೆ ಪ್ರೀತಿ ಇದೆ ಅವರನ್ನು ಗೆಲ್ಲಿಸುತ್ತಾರೆ ಎಂದರು.
ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವನಾಯ್ಕ್, ಕಾಂಗ್ರೆಸ್ ಜಾತಿ ಆಧಾರಿತ ಪಕ್ಷವಲ್ಲ. ಜಿಲ್ಲೆ ಕಾಂಗ್ರೆಸ್ನಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ. ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ. ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತೇವೆ. ಈ ಬಾರಿ ಜನರು ಕಾಂಗ್ರೆಸ್ಗೆ ಆಶೀರ್ವದಿಸುತ್ತಾರೆ. ಅನವಶ್ಯಕ ಬಿ. ಶ್ರೀರಾಮುಲು ಜನರ ಮೇಲೆ ಪದೇ ಪದೇ ಚುನಾವಣೆ ಹೇರುವ ಮೂಲಕ ತಮ್ಮ ಪ್ರತಿಷ್ಠೆ ಪ್ರಯೋಗಿಸುವ ದುಸ್ಸಾಹಸ ಮಾಡುತ್ತಿರುವುದು ಖಂಡನೀಯ. ಜನ ಆಶೀರ್ವದಿಸಿ ಶಾಸಕನನ್ನಾಗಿ ಮಾಡಿದರೆ ಜನರ ತೀರ್ಮಾನ ಧಿಕ್ಕರಿಸಿರುವುದಕ್ಕೆ ಜನ ತಕ್ಕಪಾಠ ಕಲಿಸಲಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವಂತೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಪಕ್ಷದ ಆದೇಶದಂತೆ ಕಾರ್ಯ ನಿರ್ವಹಿಸಲು ಸಿದ್ಧ ಎಂದರು.
ಶಾಸಕ ಅನಿಲ್ ಲಾಡ್ ಮಾತನಾಡಿ, ಕಾಂಗ್ರೆಸ್ ಯಾರನ್ನೂ ಖರೀದಿಸಿ ಅಭ್ಯರ್ಥಿಯನ್ನಾಗಿಸಿಲ್ಲ. ಈ ಭಾರಿ ಜೆ. ಶಾಂತಾರನ್ನೇಕೆ ಕಣಕ್ಕಿಳಿಸಲಿಲ್ಲ ಎಂಬುದನ್ನು ಬಿ. ಶ್ರೀರಾಮುಲು ಉತ್ತರಿಸಬೇಕು. ಅಷ್ಟೊಂದು ಪ್ರಬಲ ನಾಯಕರಾದವರು ರಾಯಚೂರಿನಿಂದ ಏಕೆ ತಮ್ಮ ಅಭ್ಯರ್ಥಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದ ಅವರು, ಕೇವಲ ಒಂದೇ ಟಿಕೆಟ್ ಏಕೆ ಪಡೆದರು ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಂಜಿನೇಯಲು ಮಾತನಾಡಿದರು.
ಬೃಹತ್ ಮೆರವಣಿಗೆ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆ ದಿನವಾದ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರ ಜತೆ ಪಕ್ಷದ ಬಾವುಟಹಿಡಿದು, ಘೋಷಣೆ ಕೂಗುತ್ತಾ ನಗರದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಡಿಸಿ ಕಚೇರಿ ತಲುಪಿದರು. ಅಲ್ಲಂ ವೀರಭದ್ರಪ್ಪ, ಕಮಲಾ ಮರಿಸ್ವಾಮಿ, ಎಚ್.ಆರ್. ಗವಿಯಪ್ಪ, ಅಬ್ದುಲ್ ವಹಾಬ್, ಕೋಳೂರು ಬಸವನಗೌಡ, ನಾಜಿರ್, ಅರುಣ್ಕುಮಾರ್, ಮಮತಾ ಸುರೇಶ್ ಇದ್ದರು.
ಎನ್.ವೈ. ಹನುಮಂತಪ್ಪ ಆಸ್ತಿ ರು. 2.25 ಕೋಟಿ
ಬಳ್ಳಾರಿ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ಆಸ್ತಿ ಮೌಲ್ಯ ರು. 2.25 ಕೋಟಿ. ರು. 25 ಸಾವಿರ ನಗದು, ಬ್ಯಾಂಕ್ಗಳಲ್ಲಿ ರು. 6.45 ಠೇವಣಿ ಸೇರಿ ರು. 6.85 ಲಕ್ಷ ಚರಾಸ್ತಿ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ವರದಹಳ್ಳಿಯಲ್ಲಿ ರು. 5 ಲಕ್ಷ ಮೌಲ್ಯದ 11.30 ಎಕರೆ ಜಮೀನು, ಬೆಂಗಳೂರಿನ ಜೂಡಿಷಿಯಲ್ ಲೇಔಟ್ನಲ್ಲಿ ರು. 1,78,36,500 ಮೌಲ್ಯದ 11891 ಚ.ಅ. ಕೃಷಿಯೇತರ ಜಮೀನು, ಬಳ್ಳಾರಿ ಗಾಂಧಿನಗರದಲ್ಲಿ 4472 ಚ.ಅ. ರು. 40,24,800 ಮೌಲ್ಯದ 20 ಮಳಿಗೆಯ ಶಾಪಿಂಗ್ ಕಾಂಪ್ಲೆಕ್ಸ್ ಸೇರಿ ಒಟ್ಟಾರೆ ರು. 2,18,86,300 ಸ್ಥಿರಾಸ್ತಿ ಹೊಂದಿದ್ದಾರೆ.