ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಮೇಲೆ ನಿಗಾ
ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾಸಿಗಾಗಿ ಸುದ್ದಿ ಹಾಗೂ ಜಾಹೀರಾತು ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲು ಎಂಸಿಎಂಸಿ ತಂಡ, ವೀಡಿಯೋ ವೀವಿಂಗ್ ತಂಡ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಂಸಿಎಂಸಿ ಹಾಗೂ ವಿಡಿಯೋ ವೀವಿಂಗ್ ತಂಡಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಸಿಗಾಗಿ ಸುದ್ದಿ ಮತ್ತು ಜಾಹೀರಾತುಗಳ ಪ್ರಸಾರ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತು ವರದಿ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಗರಾಭಿವೃದ್ಧಿ ಕೋಶ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮ ಪರಿಶೀಲನಾ ಕೊಠಡಿ ಪ್ರಾರಂಭಿಸಬೇಕು. ಎಲ್ಲ ಪತ್ರಿಕೆ ಪಡೆದು ಪರಿಶೀಲಿಸಬೇಕು. ಟಿವಿ ಅಳವಡಿಸಿ ಪ್ರಮುಖ ಕೇಬಲ್ಗಳ ಸಂಪರ್ಕ ನೀಡಲಾಗುವುದು. ಇಂಟರ್ನೆಟ್ ಸೌಲಭ್ಯವಿರುವ ಕಂಪ್ಯೂಟರ್ಗಳನ್ನು ಅಳವಡಿಸಲಾಗುವುದು ಎಂದರು.
ಸಾಮಾಜಿಕ ಜಾಲತಾಣ ವ್ಯಾಪ್ತಿಗೆ ಬರುವ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಫೇಸ್ಬುಕ್, ವೆಬ್ಸೈಟ್, ಟ್ವಿಟರ್, ವಾಟ್ಸ್ಅಫ್, ಯುಟ್ಯೂಬ್, ಗೂಗಲ್ ಟಾಕ್ ಪರಿಶೀಲಿಸಲು ಜಿಲ್ಲಾಡಳಿತ ತನ್ನ ಅಕೌಂಟ್ ತೆರೆದು ಕಂಪ್ಯೂಟರ್ ತಂತ್ರಜ್ಞಾನ ಹೊಂದಿರುವರನ್ನು ನಿಯೋಜಿಸಿ ಇವುಗಳನ್ನು ಪರಿಶೀಲನೆ ಮಾಡಲಾಗುವುದು. ಯಾವುದೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರಚಾರ ಕಂಡು ಬಂದರೆ ದಾಖಲಾತಿ ಮುದ್ರಿಸಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು. ಜಿಲ್ಲಾಡಳಿತ ತನ್ನ ವೆಬ್ಸೈಟ್, ಟ್ವಿಟರ್, ಫೇಸ್ಬುಕ್ಗಳಲ್ಲಿ ಮತದಾರರ ಜಾಗೃತಿ ಮಾಹಿತಿ, ಸೂಚನೆಗಳು, ಚುನಾವಣಾ ನೀತಿ ಸಂಹಿತೆ ಕುರಿತು ಅಪ್ಲೋಡ್ ಮಾಡಲಿದೆ. ಕೇಬಲ್ಗಳಲ್ಲಿ ಜಾಹೀರಾತು ಪ್ರಸಾರ ಮಾಡಲು ಕಡ್ಡಾಯವಾಗಿ ಎಂಸಿಎಂಸಿ ಸಮಿತಿಯಿಂದ ಪ್ರಸಾರ ಮಾಡುವ ಸಿಡಿಯಲ್ಲಿರುವ ವಿವರ, ಪ್ರಸಾರ ವೆಚ್ಚ, ಎಷ್ಟು ಸಮಯ ಪ್ರಸಾರವಾಗುತ್ತದೆ ಎನ್ನುದನ್ನು ಪರಿಶೀಲಿಸಲು ಸಿಡಿ ನೀಡಿ ಎಂಸಿಎಂಸಿ ಸಮಿತಿಗೆ ಒಪ್ಪಿಸಿ, ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪೋಸ್ಟರ್, ಕರಪತ್ರಗಳನ್ನು ಮುದ್ರಿಸಲು ರಾಜಕೀಯ ಪಕ್ಷಗಳು ಅನುಮತಿ ಪಡೆಯಬೇಕು.
ಪ್ರಿಂಟಿಂಗ್ ಪ್ರೆಸ್ಗಳು ಕಡ್ಡಾಯವಾಗಿ ಮುದ್ರಣ ಮಾಡುವ ಕರಪತ್ರಗಳಿಗೆ ವಿಳಾಸ, ವಿವರ, ಸಂಖ್ಯೆ ನಮೂದಿಸಬೇಕು. ಜಿಲ್ಲಾಡಳಿತಕ್ಕೆ ಬಿಲ್ ನೀಡಬೇಕು. ತಾಲೂಕು ಮಟ್ಟದ ತಂಡಗಳು ಪ್ರತಿದಿನ ಜಿಲ್ಲಾ ಮಟ್ಟದ ತಂಡಕ್ಕೆ ಪ್ರತಿದಿನ ಸ್ಕ್ಯಾನ್ ಮಾಡಿ ಪತ್ರಿಕಾ ತುಣುಕುಗಳು ಹಾಗೂ ವರದಿ ಕಳುಹಿಸಬೇಕು. ಎಫ್ಎಂ ರೇಡಿಯೋ ಮೇಲೂ ನಿಗಾ ವಹಿಸಲಾಗುವುದು ಎಂದರು. ಸಮಿತಿ ಕಾರ್ಯದರ್ಶಿ, ವಾರ್ತಾಧಿಕಾರಿ ಎಚ್. ಶ್ರೀನಿವಾಸ್, ಸದಸ್ಯ ಸಿದ್ದಯ್ಯ ಹಿರೇಮಠ, ವೀಡಿಯೋ ವೀವಿಂಗ್ ತಂಡದ ಮುಖ್ಯಸ್ಥ ರಾಜಶೇಖರ್ ಇದ್ದರು.
ಸಾಮಾಜಿಕ ಜಾಲತಾಣ ವ್ಯಾಪ್ತಿಗೆ ಬರುವ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು. ಫೇಸ್ಬುಕ್, ವೆಬ್ಸೈಟ್, ಟ್ವಿಟರ್, ವಾಟ್ಸ್ ಆ್ಯಪ್, ಯುಟ್ಯೂಬ್, ಗೂಗಲ್ ಟಾಕ್ ಪರಿಶೀಲಿಸಲು ಜಿಲ್ಲಾಡಳಿತ ತನ್ನ ಅಕೌಂಟ್ ತೆರೆದು ಕಂಪ್ಯೂಟರ್ ತಂತ್ರಜ್ಞಾನ ಹೊಂದಿರುವವರನ್ನು ನಿಯೋಜಿಸಿ ಇವುಗಳನ್ನು ಪರಿಶೀಲಿಸಲಾಗುವುದು. ಯಾವುದೇ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರಚಾರ ಕಂಡರೆ ದಾಖಲಾತಿ ಮುದ್ರಿಸಿ ಚುನಾವಣೆ ವೆಚ್ಚಕ್ಕೆ ಸೇರಿಸಲಾಗುವುದು.
- ಎ.ಎ. ಬಿಸ್ವಾಸ್, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ