ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಾಸಕರ ಗೈರು ನೋವಾಗಿದೆ

Srinivasa Murthy VN
Updated On : 27 Mar 2014, 10:35 am

ಬಳ್ಳಾರಿ: ಶಾಸಕರು ಜೈಲಿಗೆ ಹೋಗಿರುವುದು, ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿರುವುದು ನೋವು ತಂದಿದೆ. ಆದರೆ, ಅವರ ಬೆಂಬಲ ತಮಗಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗೆಳೆಯ ಜನಾರ್ದನ ರೆಡ್ಡಿ, ಇತರ ಶಾಸಕರು ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಆರೋಪದ ಹಿನ್ನೆಲೆಯಲ್ಲಿ ಅವರು ಜೈಲಿಗೆ ಹೋಗಿರುವ ಸಂದರ್ಭ ನೋವಿನಿಂದ ಕೂಡಿದ್ದು, ತಮ್ಮನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ, ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬರಲಿವೆ ಎಂದರು. ಶಾಸಕರು ಜೈಲಿನಲ್ಲಿದ್ದರೂ ಅವರು ಮಾಡಿರುವ ಒಳ್ಳೆ ಕೆಲಸಗಳು ಕ್ಷೇತ್ರದಲ್ಲಿ ಬಿಜೆಪಿಗೆ ವರವಾಗಲಿವೆ. ಶಾಸಕರು ಜೈಲಿಗೆ ಹೋಗಿರುವುದು ಕ್ಷೇತ್ರದಲ್ಲಿನ ಜನರಿಗೆ ಅಸಮಾಧಾನಗಳು ಬಿಜೆಪಿಗೆ ಋಣಾತ್ಮಕವಾಗುವುದಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಶಾಸಕರು ಆರೋಪದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದಾರೆ. ಆದರೆ, ಅವರ, ಅಭಿವೃದ್ಧಿ ಬಗ್ಗೆ ಕ್ಷೇತ್ರದ ಜನರಿಗೆ ನಂಬಿಕೆ ಇದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ 4 ದಿನಗಳಿಂದ ಮತ ಯಾಚನೆ ಮಾಡುತ್ತಿದ್ದೇನೆ, ಮಠಾಧೀಶರ ಆಶೀರ್ವಾದ ಪಡೆದಿದ್ದೇನೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಾನು ರಾಜ್ಯ ರಾಜಕಾರಣ ಬಿಟ್ಟು, ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದೇನೆ, ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಲೋಕಸಭೆಗೆ ಸ್ಪರ್ಧಿಸಿದಾಗ ಜಿಲ್ಲಾದ್ಯಂತ ಸುತ್ತಾಡಿದ ಅನುಭವವಿದೆ. ಇದೀಗ ನಾನೇ ಸ್ಪರ್ಧಿಸಿದ್ದೇನೆ ಎಂದ ಅವರು, ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರು ತಮ್ಮ ಜತೆ ಇದ್ದಾರೆ. ಜನರ ಆಶೀರ್ವಾದವೂ ನಮ್ಮ ಮೇಲಿದೆ ಎಂದರು. ಜಿ. ಸೋಮಶೇಖರ ರೆಡ್ಡಿ, ಮೃತ್ಯುಂಜಯ ಜಿನಗಾ, ನೇಮಿರಾಜ ನಾಯ್ಕ ಇತರರಿದ್ದರು.

ಶ್ರೀರಾಮುಲು ಚರ, ಸ್ಥಿರಾಸ್ತಿ ರು. 13.29 ಕೋಟಿ
ಬಳ್ಳಾರಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಒಟ್ಟಾರೆ ಆಸ್ತಿ ಮೌಲ್ಯ ರು. 13.29 ಕೋಟಿ.
ಬಳ್ಳಾರಿ ಅವಂಭಾವಿಯಲ್ಲಿ ರು. 4 ಕೋಟಿ ಮೌಲ್ಯದ 1.41 ಎಕರೆ ಪ್ರದೇಶದಲ್ಲಿ ಮನೆ, ಪತ್ನಿ ಬಿ. ಭಾಗ್ಯಲಕ್ಷ್ಮೀ ಹೆಸರಲ್ಲಿ ರು. 1.84 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಶ್ರೀರಾಮುಲು ಹಾಗೂ ಪತ್ನಿ ಹೆಸರಲ್ಲಿ ರು. 2,13,550, ನಗದು, ಬ್ಯಾಂಕು, ಸಹಕಾರಿ ಸಂಘಗಳಲ್ಲಿ ರು. 5,48,745, ಠೇವಣಿ, ಷೇರು, ಬಾಂಡ್, ಮ್ಯೂಚುವಲ್ ಫಂಡ್‌ನಲ್ಲಿ ರು. 18,17,454, ರು. 44,96,615 ಇನ್ಶೂರೆನ್ಸ್ ಪಾಲಿಸಿ, ರು. 2.2 ಕೋಟಿ ಹೂಮರ್ ಹಾಗೂ ಬಿಎಂಡಬ್ಲ್ಯೂ ಕಾರು, ಪತ್ನಿ ಹೆಸರಲ್ಲಿ ರು. 14,35,380 ಸಫಾರಿ ಕಾರು ಇವೆ. ಶ್ರೀರಾಮುಲು ಕಡೆ 4.257 ಕೆಜಿ ಚಿನ್ನ, 9.550 ಕೆಜಿ ಬೆಳ್ಳಿ, ಹೆಂಡತಿ ಕಡೆ 2.330 ಕೆಜಿ ಬಂಗಾರ ಇದೆ.
ಸ್ಥಿರಾಸ್ತಿ: ಕೃಷಿಯೇತರ ಭೂಮಿ- ಬಳ್ಳಾರಿ ಹದ್ದಿನಗುಂಡು ಸ.ನಂ. 67ರಲ್ಲಿ 2.25 ಎಕರೆ, ಗದಗ ಸ.ನಂ. 43ಬಿ/2ಎನಲ್ಲಿ 5615 ಚ.ಅ. ನಿವೇಶನ, ಬಳ್ಳಾರಿ ಬೆಳಗಲ್ ಕ್ರಾಸ್ ಬಳಿ ಸ.ನಂ. 597ಬಿ/2ಎ/2ರಲ್ಲಿ 12 ಎಕರೆ,  ಹಾಗೂ ಸ.ನಂ. 597ಬಿ/2ಎ/2 ಮತ್ತು 3ರಲ್ಲಿ 20.72 ಎಕರೆ (ಇದನ್ನು ಉಡುಗೊರೆ ಬಂದಿದ್ದು), ಸ.ನಂ. 597ಬಿ/2ಎ1ಬಿ1 27.25 ಎಕರೆ ಪ್ರದೇಶ ಹೊಂದಿದ್ದಾರೆ. ಬಿ. ಭಾಗ್ಯಲಕ್ಷ್ಮೀ ಹೆಸರಲ್ಲಿ ಬೆಳಗಲ್ ಕ್ರಾಸ್ ಹತ್ತಿರ ಸ.ನಂ. 597ಬಿ2/ಎ3ರಲ್ಲಿ 20.71 ಎಕರೆ ಹೊಂದಿದ್ದಾರೆ.
ವಾಣಿಜ್ಯ ಕಟ್ಟಡಗಳು: ಬಳ್ಳಾರಿ ಎಸ್ಪಿ ವೃತ್ತದ ಸ.ನಂ. 19, 19/5ಬಿ1ರಿಂದ ಬಿ3ಎ, ಪ್ಲಾಟ್ ನಂ. 1, 1421 ಚ.ಅ. ವಾಣಿಜ್ಯ ಕಟ್ಟಡ,  ಗಣೇಶ ನಗರ ಸ.ನಂ. 3813ರಲ್ಲಿ 1.41 ಎಕರೆ ಪ್ರದೇಶದಲ್ಲಿ ಅವಂಭಾವಿ ಪ್ರದೇಶದಲ್ಲಿ ಮನೆ, ಗದಗ ಸ.ನಂ. 43ಬಿ, ಪ್ಲಾಂಟ್ ನಂ. 1/ಎ 11,070 ಚ.ಅ. ನಿವೇಶನ ಹೊಂದಿದ್ದಾರೆ. ಬಳ್ಳಾರಿ ಸಿರುಗುಪ್ಪ ರಸ್ತೆಯಲ್ಲಿ ಸ.ನಂ. 107 3 ಎಕರೆ, ಅವರ ತಾಯಿ ಹೆಸರಲ್ಲಿ 50್ಢ20 ಮನೆ ಇದೆ. ಶ್ರೀರಾಮುಲು ಸ್ಥಿರಾಸ್ತಿ ಮೌಲ್ಯ ರು. 9,16,00,000, ಭಾಗ್ಯಲಕ್ಷ್ಮೀ ಹೆಸರಲ್ಲಿ ರು. 1,04,00,000 ಮೌಲ್ಯದ ಸ್ಥಿರಾಸ್ತಿ ಇದೆ. ಶ್ರೀರಾಮುಲು ಸ್ಥಿರಾಸ್ತಿ, ಚರಾಸ್ತಿ ಸೇರಿ ರು. 13,29,83,766, ಪತ್ನಿ ಹೆಸರಲ್ಲಿ ರು. 1,84,09,078 ಸ್ಥಿರಾಸ್ತಿ, ಚರಾಸ್ತಿ ಇದೆ. ಪತಿ-ಪತ್ನಿ ಒಟ್ಟು ಆಸ್ತಿ ಮೌಲ್ಯ ರು. 15,13,92,844 ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement