ಸರ್ಕಾರಿ ನೌಕರನ ಸೆರೆ: ಬಿಡುಗಡೆ
ಬಳ್ಳಾರಿ: ಸರ್ಕಾರಿ ಹುದ್ದೆಯಲ್ಲಿದ್ದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ನಾಮಪತ್ರಕ್ಕೆ ಅಫಿಡವಿಟ್ ಇತರ ಪೇಪರ್ ತಯಾರು ಮಾಡುತ್ತಿದ್ದ ಆರೋಪದ ಮೇಲೆ ಸರ್ಕಾರಿ ನೌಕರ ಸೋಮನಾಥ್ ಎನ್ನುವವರನ್ನು ಗಾಂಧಿನಗರ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿ, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ನೌಕರರಾಗಿ ಸೋಮನಾಥ್ ಅವರು ಬಳ್ಳಾರಿ ಬಾಲಾರಿಜೆನ್ಸಿ ಹೋಟೆಲ್ನಲ್ಲಿ ಶ್ರೀರಾಮುಲು ಅವರ ಪರ ನಾಮಪತ್ರಕ್ಕೆ ಸಂಬಂಧಿಸಿದಂತೆ ಪೇಪರ್ ಸಿದ್ಧಪಡಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರಾವಣ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮುರುಗಣ್ಣನ ನೇತೃತ್ವದ ತಂಡ ದಾಳಿ ಮಾಡಿ, ಸೋಮನಾಥ್ನನ್ನು ಬಂಧಿಸಿ, ಪ್ರಿಂಟರ್ಸ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸೋಮನಾಥ್ನ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿಗಳ ಬಂಧನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 26
ಇತ್ತೀಚೆಗೆ ಗಡಂಗ ಸ್ಟ್ರೀಟ್ನಲ್ಲಿ ಸಿಡಿ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರ ತಂಡ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿ, ಬಂಧಿತರಿಂದ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರು ಬಳ್ಳಾರಿಯ ಬಂಡಿಹಟ್ಟಿ ನಾಗಿ, ನಾಗಲಕೇರಿ ಉಮೇಶ್ ಹಾಗೂ ಯೇಸು ಬಂಧಿತ ಆರೋಪಿಗಳಾಗಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಿಡಿ ರವಿಯನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ಎಎಸ್ಐ ಬಸವರಾಜ್, ಸಿಬ್ಬಂದಿ ಜಟ್ಟಿಂಗಪ್ಪ, ಸಿದ್ದಯ್ಯ, ನಾಗರಾಜ್, ಅನ್ವರ್ ಭಾಷಾ ತಂಡ ಆರೋಪಿಗಳನ್ನು ಬುಧವಾರ ಬೆಳಗ್ಗೆ ರೇಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಡಿವೈಎಸ್ಪಿ ಮುರುಗಣ್ಣನವರ್ ಮಾತನಾಡಿ, ಸಿಡಿ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಮಾರಾಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಇನ್ನುಳಿದ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದರು.
ಡಿಸಿ ಕಚೇರಿ ಒಳಗೆ ಬಿಟ್ಟಿಲ್ಲ...
ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಡಿಸಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದಾಗ ಅವರ ಹಿಂದೆ ಬಂದಿದ್ದ ಬಳ್ಳಾರಿ ಸಂಸದೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಹೋಗಲು ಬಿಡಲಿಲ್ವಂತೆ, ಹೀಗಂತ ಆರೋಪ ಮಾಡಿದ್ದಾರೆ ಸಂಸದೆ ಜೆ. ಶಾಂತಾ. ಕಾಂಗ್ರೆಸ್ನ ಸಾಕಷ್ಟು ಜನರನ್ನು ಒಳಗಡೆ ಬಿಡುತ್ತಾರೆ. ಆದರೆ, ಬಿಜೆಪಿಯವರಿಗೆ ಬಿಡುತ್ತಿಲ್ಲ. ಅದು ಸಂಸದರಾಗಿ ನನಗೆ ಒಳಗೆ ಬಿಟ್ಟಿಲ್ಲ. ಇದು ಸರಿಯೇ ಎಂದು ಜಿಲ್ಲಾಧಿಕಾರಿ ಆವರಣದ ಹೊರಗಡೆ ನಿಂತು ಪೊಲೀಸರು, ಅಧಿಕಾರಿಗಳ ಕ್ರಮವನ್ನು ಶಾಂತಾ ಖಂಡಿಸಿದರು.
ಅಭ್ಯರ್ಥಿಗಳತ್ತ ಕ್ಯಾಮೆರಾ ಕಣ್ಣು...
ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿಗಳ ಪ್ರತಿ ಮಾತಿನ ಮೇಲೆ ಚುನಾವಣೆ ಆಯೋಗ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ಯಾಮೆರಾ ಕಣ್ಣಿತ್ತು. ಮಾಧ್ಯಮ ಜಗೆ ಬಿಜೆಪಿ, ಕಾಂಗ್ರೆಸ್ ಇತರ ಪಕ್ಷಗಳ ಅಭ್ಯರ್ಥಿಗಳು ಮಾತನಾಡುವಾಗ ನಾಲ್ಕೈದು ಕ್ಯಾಮೆರಾಗಳು ಅವರ ಮಾತನ್ನು ತದೇಕ ಚಿತ್ತದಿಂದ ಸೆರೆ ಹಿಡಿದಿವು.
ಬಿಎಸ್ಸಾರ್ ಶಾಸಕರಿಗೆ ಬಿಜೆಪಿ ಶಾಲು
ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ನಾಮಪತ್ರ ಸಲ್ಲಿಸುವ ವೇಳೆ ಬಿಎಸ್ಸಾರ್ನ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಬಿಜೆಪಿ ಶಾಲು ಹಾಕಿಕೊಂಡು ಶ್ರೀರಾಮುಲು ಹಿಂದೆ ಬಂದಿದ್ದರು. ಈ ಸಂದರ್ಭ ಬಿಎಸ್ಸಾರ್ ಶಾಸಕರು ಬಿಜೆಪಿ ಶಾಲು ಹಾಕಿಕೊಂಡ ದೃಶ್ಯ ಛಾಯಾಗ್ರಾಹಕರು ಸೆರೆ ಹಿಡಿಯಲು ಮುಂದಾದಾಗ, ತಿಪ್ಪೇಸ್ವಾಮಿ ಶಾಲು ತೆಗೆಯಲು ಮುಂದಾದರು.
ಕಡ್ಡಾಯ ಮತದಾನ ಮಾಡಿ: ಲತೀಫಾ
ಕಂಪ್ಲಿ: ಮತದಾರರು ಕಡ್ಡಾಯ ಮತದಾನ ಮಾಡಲು ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲತೀಫಾ ಬೇಗಂ ತಿಳಿಸಿದರು. ಸಮೀಪದ ಇಂದಿರಾನಗರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಬಳ್ಳಾರಿ ಮಹಿಳಾ-ಕಲ್ಯಾಣ ಇಲಾಖೆ, ಹೊಸಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ. ರಾಧಾಬಾಯಿ, ಮಧುಮತಿ, ಸಿ. ಸರ್ವಮಂಗಳ, ಎಸ್.ಎಂ. ಜಯಲಕ್ಷ್ಮೀ ಇತರರಿದ್ದರು.
ಇಂದು ಕ್ಲಬ್ ಉದ್ಘಾಟನೆ
ಹೊಸಪೇಟೆ: ವಾಸವಿ ಇಂಟರ್ನ್ಯಾಷನಲ್ ಕ್ಲಬ್ ನೂತನ ಶಾಖೆ ಉದ್ಘಾಟನಾ ಸಮಾರಂಭ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮಾ. 27ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ. ವಾಸವಿ ಇಂಟರ್ ನ್ಯಾಷನಲ್ ಕ್ಲಬ್ನ ನೂತನ ಶಾಖೆಯನ್ನು ಎಂ.ಎಲ್. ಉದಯಕುಮಾರ್ ಉದ್ಘಾಟಿಸುವರು. ಕೆ.ಆರ್. ನಾಗರಾಜ್, ಕೆ.ಎನ್. ರಾಜೇಶ್ವರಿ, ಡಾ. ವೆಂಕಟಾಚಲಪತಿ ಶೆಟ್ಟಿ ಭಾಗವಹಿಸುವರು.
ಡಿಕ್ಕಿ: ಓರ್ವ ಸಾವು
ಹೂವಿನಹಡಗಲಿ: ತಾಲೂಕಿನ ಇಟಗಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಲಾರಿ-ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ. ಮೃತ ವ್ಯಕ್ತಿ ಹೊಸಪೇಟೆ ತಾಲೂಕು ಹಳ್ಳಿಯೂರಿನ ಗಯದೇವಪ್ಪ (47) ಎಂದು ತಿಳಿದು ಬಂದಿದೆ. ಈ ಕುರಿತು ಇಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಹೊಸಪೇಟೆ: ಜೀವನದಲ್ಲಿ ಜಿಗುಪ್ಸೆ ಹೊಂದಿ ಅಸ್ಸಾಂ ಮೂಲದ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಅಸ್ಸಾಂ ಮೂಲದ ಧರ್ಮೇಶ್ವರ ನಾಯ್ಕ (36) ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾದ ವ್ಯಕ್ತಿ. ಅಸ್ಸಾಂನಿಂದ 9 ಸ್ನೇಹಿತರ ಗುಂಪು ಬೆಂಗಳೂರಿಗೆ ಬಂದಿದ್ದು, 7 ಜನ ಬೆಂಗಳೂರಿನಲ್ಲಿ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇನ್ನಿಬ್ಬರು ಬೆಂಗಳೂರಿನಿಂದ ಹುಬ್ಬಳ್ಳಿಗೆ ರೈಲು ಹತ್ತಿ ಬಂದಿದ್ದು, ಲಕ್ಕಿ ಪ್ರಸಾದ್ ತಿವಾರಿ ಎನ್ನುವ ಸ್ನೇಹಿತ ರೈಲಿನಲ್ಲಿ ನಿದ್ರೆ ಮಾಡುತ್ತಾ, ಹುಬ್ಬಳ್ಳಿಗೆ ತೆರಳಿದ್ದಾನೆ. ಧರ್ಮೇಶ್ವರ ನಾಯ್ಕ ಹೊಸಪೇಟೆ ರೇಲ್ವೆ ನಿಲ್ದಾಣದಲ್ಲಿ ಇಳಿದು ನಗರದ ಹೊರ ವಲಯದ ಬಳ್ಳಾರಿ ರಸ್ತೆಯ ಎಚ್ಎಲ್ಸಿ ಕಾಲುವೆ ರಸ್ತೆಯಲ್ಲಿ ಹಾಕಿರುವ ಕಬ್ಬಿಣದ ಸರಳಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತರ ಬಂಧನ
ಬಳ್ಳಾರಿ: ಸ್ಥಳೀಯ ಕೆಸಿ ರಸ್ತೆಯಲ್ಲಿರುವ ಕಪಿಲ ಬಾರ್ವೊಂದರಲ್ಲಿ ಮದ್ಯ ಸೇವಿಸಿ ಊಟ ಮಾಡುತ್ತಿದ್ದ ಬಿಜೆಪಿಗೆ ಸೇರಿದ್ದಾರೆ ಎನ್ನಲಾದ 9 ಜನರನ್ನು ನಗರದ ಬ್ರೂಸ್ಪೇಟೆ ಠಾಣೆ ಪೊಲೀಸರು ಎಸಿ ಅನಿರುದ್ಧ ಶ್ರವಣ್ ನೇತೃತ್ವದಲ್ಲಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತರಿಂದ ರು. 14,720 ನಗದು ಮತ್ತು ಬಿಜೆಪಿ ಬಾವುಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಸಿಪಿಐ ಮಾಲತೇಶ್, ಚುನಾವಣಾ ಪ್ಲೈಯಿಂಗ್ ಸ್ಕ್ವಾಡ್ನ ರಾಜು ಭಾವಿಹಳ್ಳಿ ಸಿಬ್ಬಂದಿ ಇದ್ದರು.
ಕೈ, ಬಿಜೆಪಿಯಿಂದ ಬಂಡವಾಳಶಾಹಿಗಳಿಗೆ ಮಣೆ
ಹೂವಿನ ಹಡಗಲಿ: ಕಾಂಗ್ರೆಸ್, ಬಿಜೆಪಿ ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದ್ದರೆ ಅತ್ತ ಎಡಪಂಥಿ ಪಕ್ಷಗಳಾದ ಸಿಪಿಐ, ಸಿಪಿಎಂ ಜನಾಂದೋಲ ಹೋರಾಟಕ್ಕೆ ಹಿಂದೇಟು ಹಾಕಿ ಅಧಿಕಾರಕ್ಕೆ ಅಂಟಿಕೊಂಡಿವೆ ಎಂದು ಎಸ್ಯುಸಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಆರೋಪಿಸಿದ್ದಾರೆ. ಎಸ್ಯುಸಿಐದಿಂದ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಎ. ದೇವದಾಸ್ ಅಭ್ಯರ್ಥಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಸ್ಯುಸಿಐ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳ್ಳಾರಿ ಲೋಕಸಭಾ ಅಭ್ಯರ್ಥಿ ಎ. ದೇವದಾಸ್, ತಾಲೂಕು ಪ್ರಧಾನ ಕಾರ್ಯದರ್ಶಿ ರಹಮತ್ ಬೀರಬ್ಬಿ ಎಸ್ಯುಸಿಐಗೆ ಮತ ಹಾಕಿ ಎಂದು ಮತದಾರರಿಗೆ ಮನವಿ ಮಾಡಿದರು.