ಬಳ್ಳಾರಿಯಲ್ಲಿ ಆರ್ಸೆಲರ್ ಮಿತ್ತಲ್ ಜಮೀನು ಬೇಲಿಗೆ ತಡೆ
ಬಳ್ಳಾರಿ: ಆರ್ಸೆಲರ್ ಮಿತ್ತಲ್ ಸಂಸ್ಥೆಗೆ ನೀಡಿರುವ ಜಮೀನಿಗೆ ಸಂಬಂಧಿಸಿದಂತೆ ಭೂ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವವರೆಗೆ ತಂತಿ ಬೇಲಿ ಹಾಕಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟುಹಿಡಿದು, ಕರ್ನಾಟಕ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಕುಡಿತಿನಿ ಸಮೀಪದ ಆರ್ಸೆಲರ್ ಮಿತ್ತಲ್ ಉಕ್ಕಿನ ಸ್ಥಾವರ ಸ್ಥಾಪಿಸಲು ವಶಪಡಿಸಿಕೊಂಡಿರುವ ಜಮೀನಿನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಆರ್ಸೆಲರ್ ಮಿತ್ತಲ್ ಉಕ್ಕು ಘಟಕದ ಜಮೀನಿಗೆ ತಂತಿ ಬೇಲಿ ಹಾಕುವುದಕ್ಕೆ ಮುಂದಾಗಿರುವ ವಿಷಯ ತಿಳಿದ ಕುಡಿತಿನಿ, ಜಾನೆಕುಂಟೆ, ತಿಮ್ಮಲಾಪುರ, ಹರಗಿನಡೋಣಿ, ವೇಣಿ ವೀರಾಪುರ, ಕೊಳಗಲ್ ಗ್ರಾಮಗಳ ರೈತರು ಪ್ರತಿಭಟನೆ ಹೊರಟು, ಆರ್ಸೆಲರ್ ಮಿತ್ತಲ್ ಉಕ್ಕಿನ ಕೈಗಾರಿಕೆಗೆ ವಶಪಡಿಸಿಕೊಂಡಿರುವ ಪ್ರದೇಶಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಭೂ ಸಂತ್ರಸ್ತರ ಬೇಡಿಕೆಗಳು ಈಡೇರುವವರೆಗೂ ತಂತಿ ಬೇಲಿ ಹಾಕಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟಿಸಿದರು. ಏಪ್ರಿಲ್ ತಿಂಗಳಲ್ಲೂ ಪ್ರತಿಭಟನೆ ನಡೆಸಿ, ತಂತಿ ಬೇಲಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ತಂತಿಬೇಲಿ ನಿರ್ಮಾಣ ಮಾಡದಿರಲು ಒಪ್ಪಿದೆ. ಹೀಗಾಗಿ ಪ್ರತಿಭಟನೆ ಕೈ ಬಿಡುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದರಿಂದ ರೈತರು ಪ್ರತಿಭಟನೆ ಕೈ ಬಿಟ್ಟರು.