ಕಾವಿಧಾರಿ ಮಾಡಿದ ಕೊಲೆ ಮೊಬೈಲ್‌ನಿಂದ ಬಹಿರಂಗ
-ಶಶಿಧರ ಮೇಟಿ
ಬಳ್ಳಾರಿ: ಇದು ಸ್ವಾಮೀಜಿಯೊಬ್ಬ ಹಂತಕನಾದ ಕತೆ. ಅದೂ ಕೇವಲ ಎರಡೇ ಸಾವಿರಕ್ಕೆ. ಮಹಿಳೆ ಜತೆ ಜಗಳ ಮಾಡಿದ. ಕೊಂದು ಮೊಬೈಲ್ ಜತೆ ಪರಾರಿಯಾದ. ಆದ್ರೆ ಗ್ರಹಚಾರ ಕೆಟ್ಟಿತ್ತು. ಅಪರಿಚಿತನ ಕೈಗೆ ಮೊಬೈಲ್ ಕೊಟ್ಟು ಸಿಕ್ಕಿಬಿದ್ದ!
ಕೊಲೆ ಮಾಡಿದರೂ ಏನೂ ಆಗಿಲ್ಲವೆಂಬ ರೀತಿಯಲ್ಲಿ ತಿರುಗಾಡುತ್ತಿದ್ದ ಈ ಸ್ವಾಮೀಜಿ ಒಂದು ಕ್ಷಣ ಯಾಮಾರಿದ್ದೇ ಸಿಕ್ಕಿಬೀಳಲು ಕಾರಣವಾಯಿತು.
ನಡೆದಿದ್ದೇನು?: ಏ.3ರಂದು ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮದ ಹೊಲವೊಂದರಲ್ಲಿ ನಾಗಮ್ಮ (45) ಎಂಬಾಕೆ ಹತ್ಯೆಯಾಗಿದ್ದಳು. ಕೊಲೆಯಾಗಿ 14 ದಿನಗಳ ಬಳಿಕ ಶವ ಸಿಕ್ಕಿದ್ದರಿಂದ ಗುರುತು ಸಿಗಲಾರದಷ್ಟು ಕೊಳೆತಿತ್ತು. ಪೊಲೀಸರು ಮಹಿಳೆ ಯಾರೆಂಬುದನ್ನು ಪತ್ತೆ ಮಾಡಿದ್ದರೂ, ಆರೋಪಿ ಸೆರೆ ಹಿಡಿಯಲು ಪರದಾಡಿದ್ದರು. ಆಗ ನೆರವಾಗಿದ್ದು, ನಾಗಮ್ಮನ ಬಳಿಯಿದ್ದ ಮೊಬೈಲ್!
ರು. 2 ಸಾವಿರಕ್ಕೆ ಕೊಲೆ: ಕೊಲೆ ಮಾಡಿದ ಆರೋಪಿ ಹನುಮಂತಪ್ಪ ಸ್ವಾಮೀಜಿ ಮೂಲತಃ ಗದಗಿನವ. ಕಾವಿ ಧರಿಸಿ, ಮಠಗಳಲ್ಲಿ ಕಾಲ ಕಳೆಯುತ್ತಿದ್ದ. ಹೆಚ್ಚಾಗಿ ಹಂಪಿಯಲ್ಲಿರುತ್ತಿದ್ದ. ಬಳ್ಳಾರಿಗೆ ರೈಲಿನಲ್ಲಿ ಹೋಗುತ್ತಿರುವ ಕುಡಿತಿನಿ ರೇಲ್ವೆ ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ನಾಗಮ್ಮನ ಪರಿಚಯವಾಗಿತ್ತು.
ಪರಿಚಯ ಆತ್ಮೀಯತೆಗೆ ತಿರುಗಿದ ಮೇಲೆ ಹನುಮಂತಪ್ಪ ನಾಗಮ್ಮಳಿಗೆ 2 ಸಾವಿರ ಹಣ ಕೊಟ್ಟಿದ್ದ. ಆಕೆ ಅದನ್ನು ಮರಳಿಸಲು ನಿರಾಕರಿಸಿದಳು.
ಒಂದು ಮುಂಜಾನೆ ಕುಡಿತಿನಿ ರೇಲ್ವೆ ನಿಲ್ದಾಣದಲ್ಲಿ ಮಾತಿನ ಚಕಮಕಿ ನಡೆಯಿತು. ಸಿಟ್ಟಿನಲ್ಲಿ ಹನುಮಂತಪ್ಪ ನಾಗಮ್ಮಳ ತಲೆಗೆ ಹೊಡೆದು, ಸೀರೆಯಿಂದ ಕತ್ತು ಬಿಗಿದಿದ್ದಾನೆ. ನಂತರ ಹೊಲದಲ್ಲಿ ಎಸೆದು, ಆಕೆಯ ಮೊಬೈಲ್ ಎತ್ತಿಕೊಂಡು ಹೋಗಿದ್ದ.
ಮೊಬೈಲ್ ಕೊಟ್ಟು ಸಿಕ್ಕಿಬಿದ್ದ ಸ್ವಾಮಿ: ಮೊಬೈಲ್ ಒಯ್ದಿದ್ದ ಸ್ವಾಮೀಜಿ ತಾರಾನಗರಕ್ಕೆ ಹೋದ. ಅದನ್ನು ಬಳಸುವುದು ಹೇಗೆಂದೇ ತಿಳಿದಿರಲಿಲ್ಲ. ಸಿಮ್ ಎಸೆದು, ಮೊಬೈಲ್‌ನಲ್ಲಿದ್ದ ಮೆಮೊರಿ ಕಾರ್ಡ್‌ನಿಂದ ಹಾಡುಗಳನ್ನಷ್ಟೇ ಕೇಳುತ್ತಿದ್ದ. ಹಂಪಿಯಲ್ಲಿ ಮುರುಗನ್ ಎಂಬ ವ್ಯಕ್ತಿ ಬಂದು, ಸ್ವಾಮೀಜಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ನಿಮ್ಮ ಮೊಬೈಲ್ ಕೊಡಿ, ಅದರಲ್ಲಿ ನನ್ನ ಸಿಮ್ ಹಾಕಿ, ಕರೆ ಮಾಡುತ್ತೇನೆ ಎಂದು ಹೇಳಿ, ಹಾಗೇ ಮಾಡಿದ.
ಕೈಗೆ ಸಿಕ್ಕ ಆರೋಪಿ: ಆರೋಪಿಯ ಪತ್ತೆಗಾಗಿ ಹೊಂಚು ಹಾಕಿದ್ದ ಪೊಲೀಸರು, ಆಕೆ ಮೈಬೈಲ್‌ನ ಐಎಂಐ ನಂಬರ್ ಇಟ್ಟುಕೊಂಡಿದ್ದರು. ಹೀಗಾಗಿ ನಾಗಮ್ಮಳ ಮೊಬೈಲ್‌ನಿಂದ ಕರೆ ಹೋಗಿದ್ದರಿಂದ ಫೋನ್ ಎಲ್ಲಿದೆ ಎಂಬುದು ಗೊತ್ತಾಯಿತು. ಸಿಪಿಐ ಲಕ್ಷ್ಮೀಕಾಂತಯ್ಯ ಹಾಗೂ ಪಿಎಸ್‌ಐ ವಾಸುಕುಮಾರ್ ಹಂಪಿಯಲ್ಲಿ ಮುರುಗನ್‌ರನ್ನು ವಿಚಾರಿಸಿದಾಗ, ಸ್ವಾಮೀಜಿ ಸಿಕ್ಕಿಬಿದ್ದಿದ್ದಾನೆ.