ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೇಲ್ವೆ ನೇಮಕ ಹೆಸರಲ್ಲಿ 38 ಲಕ್ಷ ಪಂಗನಾಮ

Srinivasa Murthy VN
Updated On : 1 Jun 2014, 12:47 pm

-ಶಶಿಧರ ಮೇಟಿ
ಬಳ್ಳಾರಿ: ರೇಲ್ವೆ ನೇಮಕ ಮಂಡಳಿ(ಆರ್‌ಆರ್‌ಬಿ) ಮಾದರಿಯಲ್ಲೇ ಪರೀಕ್ಷೆ ಪ್ರವೇಶಾತಿ ಪತ್ರ, ನೇಮಕ ಪಟ್ಟಿ ಹಾಗೂ ಪೊಲೀಸ್ ಪರಿಶೀಲನಾ ಪತ್ರ ಕಳುಹಿಸಿ ಜಾಲವೊಂದು ರಾಜ್ಯಾದ ಹಲವೆಡೆ ಲಕ್ಷಾಂತರ ರುಪಾಯಿ ಪಂಗನಾಮ ಹಾಕಿದೆ.
ರಾಜ್ಯಾದ್ಯಂತ ವಿಸ್ತರಿಸಿರುವ ಈ ಜಾಲದ ಪ್ರಮುಖ ರೂವಾರಿ ಉಮಾಶಂಕರ್. ಬಳ್ಳಾರಿಯ 7 ನಿರುದ್ಯೋಗಿಗಳಿಂದ 38 ಲಕ್ಷ ಪಡೆದಿರುವ ಈ ಜಾಲ ಬೆಂಗಳೂರಿನಲ್ಲೂ 20 ಜನರನ್ನು ವಂಚಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ನಂಬಿಸಿದ ವಂಚಕರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಹಣ ಪಡೆಯುವುದು ಅಲ್ಲಲ್ಲಿ ನಡೆಯುತ್ತಲೇ ಇದೆ. ಆದರೆ, ಈ ಜಾಲ ಇನ್ನಷ್ಟು ಮುಂದೆ ಹೋಗಿ, ರೇಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ, ನೇಮಕಕ್ಕೆ ಸಂಬಂಧಿಸಿ ಆರ್‌ಆರ್‌ಬಿ ಮಾದರಿಯಲ್ಲೇ ನೇಮಕ ಪ್ರಕ್ರಿಯೆ ನಡೆಸಿ, ದುಡ್ಡು ಕೊಟ್ಟವರಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ.
ಅವರಿಗೆ ಆರ್‌ಆರ್‌ಬಿ ಅರ್ಜಿ ನಮೂನೆ, ಹಾಲ್‌ಟಿಕೆಟ್ ಸೃಷ್ಟಿಸಿ, ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಕೊನೆಗೆ ಪರೀಕ್ಷೆ ಇಲ್ಲದೇ ನೇಮಕ ಪಟ್ಟಿ ಹಾಗೂ ಪೊಲೀಸ್ ಇಲಾಖೆಗೆ ಪರಿಶೀಲನಾ ಪತ್ರವನ್ನೂ ಕಳುಹಿಸಿದ್ದಾರೆ.
ಅಭ್ಯರ್ಥಿಗಳ ಪರಿಶೀಲನೆ: ನೇಮಕವಾದ ಆರು ಅಭ್ಯರ್ಥಿಗಳ ಪರಿಶೀಲನೆ ಮಾಡುವಂತೆ ಆರೋಪಿಗಳು ಜಿಲ್ಲಾ ಪೊಲೀಸ್ ಕಚೇರಿಗೂ ಪತ್ರ ಬರೆದಿದ್ದಾರೆ. ಈ ಆರು ಅಭ್ಯರ್ಥಿಗಳ ಮಾಹಿತಿ ಪರಿಶೀಲಿಸಿದ ಪೊಲೀಸರು, ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೇಲ್ವೆ ಚೀಫ್ ಪರ್ಸನಲ್ ಆಫೀಸರ್‌ಗೆ ಮಾಹಿತಿ ರವಾನಿಸಿದ್ದಾರೆ. ಆದರೆ, ರೇಲ್ವೆ ಇಲಾಖೆಯಿಂದ ಯಾವುದೇ ನೇಮಕಕ್ಕೆ ಅರ್ಜಿ ಕರೆದಿಲ್ಲ, ಪೊಲೀಸ್ ಪರಿಶೀಲನೆಗೂ ಪತ್ರ ಕಳುಹಿಸಿಲ್ಲ ಎಂಬ ಉತ್ತರ ಬಂದಾಗ, ಈ ವಂಚನೆ ಜಾಲ ಬಯಲಾಗಿದೆ. ಹಣ ನೀಡಿದ ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿದಾಗ  ಉಮಾಶಂಕರ್ ಎಂಬಾತ ತಾನು ರೇಲ್ವೆ ಇಲಾಖೆಯಲ್ಲಿ ಉನ್ನತ ಅಧಿಕಾರಿ ಎಂದು ನಂಬಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಇನ್ನೂ ಕೆಲವರಲ್ಲಿ ರೇಲ್ವೆ ನೇಮಕ ಮಂಡಳಿಯಲ್ಲಿ ಸಾಕಷ್ಟು ಪರಿಚಯಸ್ಥರಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಬಳ್ಳಾರಿ ತಾಲೂಕಿನ ಯರ್ರಗುಡಿ, ಗೋನಾಳ್, ಕೋಳೂರು ಸಂಗನಕಲ್, ಸಿರಿವಾರ ಮತ್ತಿತರ ಕಡೆ 7 ಜನರಿಂದ 38 ಲಕ್ಷವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.
ದುಡ್ಡು ಕಳೆದುಕೊಂಡ ಗಾದಿಲಿಂಗಪ್ಪ ಹಾಗೂ ಇತರ 6 ಜನರು ಗಾಂಧಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಡಿವೈಎಸ್ಪಿ ಮುರುಗಣ್ಣನವರ್, ಇನ್‌ಸ್ಪೆಕ್ಟರ್ ರವಿಕುಮಾರ್ ನಕಲಿ ಹಾಲ್ ಟಿಕೆಟ್, ನೇಮಕ ಪಟ್ಟಿ ಇಟ್ಟುಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement