ಬೀದರ್: ತಾಲೂಕಿನ ಅಣದೂರ ಗ್ರಾಮದಲ್ಲಿ ಫೆ.25ರಿಂದ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ 3ನೇ ಬೌದ್ಧ ಧಮ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಅಣದೂರ ವೈಶಾಲಿನಗರದ ಭಂತೆ ಧಮ್ಮಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಸಮ್ಮೇಳನಗಳನ್ನು ಆಯೋಜಿಸಿ ಜನರಿಗೆ ಬುದ್ಧನ ಸಂದೇಶಗಳನ್ನು ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಮಾಘ ಪೂರ್ಣಿಮಾ ಫೆ.25ರಿಂದ ಎರಡು ದಿನಗಳ ವರೆಗೆ ಸಮ್ಮೇಳನ ನಡೆಯಲಿದೆ ಎಂದರು.
ಮೆರವಣಿಗೆ: ಫೆ.25ರಂದು ಬೆ.5.30ಕ್ಕೆ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿದೆ. ಮ.3ಕ್ಕೆ ಆಣದೂರ ಗ್ರಾಮ ಪಂಚಾಯಿತಿಯಿಂದ ಥೈಲ್ಯಾಂಡ್ ದೇಶದ ವಲ್ಲಭಾ ಹಾಗೂ ಚರಣಶ್ರೀ ಭವ್ಯ ಮೆರವಣಿಗೆ ನಡೆಸಿ ಸ್ಥಳಕ್ಕೆ ಕರೆದೊಯ್ಯಲಾಗುವುದು.
ನಂತರ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಭಂತೆ ಹೇಮಚಂದ್ರ ಮಹಾಥೇರೋ, ಉಪಗುಪ್ತ ಮಹಾಥೇರೋ, ಪೂನಾದ ಆನಂದ ಮಹಾಥೇರೋ, ಮುಂಬೈ ಹಾಗೂ ಧಮ್ಮ ದರ್ಶನ ಭೂಮಿಯ ಮುಖ್ಯಗುರು ಭಂತೆ ಧಮ್ಮಾನಂದ ಹಾಗೂ ಭಿಕ್ಕು ಸಂಘದವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಜನರು ಭಾಗವಹಿಸುವ ನಿರಿಕ್ಷೆ ಇದೆ ಎಂದರು.
ಭಂತೆ ಜ್ಞಾನಸಾಗರ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದ ಸಂಯೋಜಕರಾದ ಭಂತೆ ವರಜ್ಯೋತಿ, ಭಂತೆ ಸಂಘ ರಕ್ಷಿತ, ಧಮ್ಮ ರಕ್ಷಿತ ಹಾಗೂ ಇನ್ನಿತರ ಭಂತೆಗಳು ಸಹಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ. ಮಾರನೇ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಧುರಿಣರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಭಂತೆ ಜ್ಞಾನಸಾಗರ, ಶಂಭುಲಿಂಗ ಬಾನೆ, ಸೂರ್ಯಕಾಂತ ಬಾವಿದೊಡ್ಡಿ, ಬಾಬು ಆಣದೂರೆ, ಎಸ್.ಎಂ. ಜನವಾಡಕರ್, ಉಪೇಂದ್ರ ಇದ್ದರು.