ಕುಂಭಮೇಳದಿಂದ 'ನಿತ್ಯಾ' ನಿಷೇಧಿಸಿ
ಬೆಂಗಳೂರು: ವಿವಾದಿತ ನಿತ್ಯಾನಂದ ಸ್ವಾಮಿಯನ್ನು ಕುಂಭಮೇಳದಿಂದ ನಿಷೇಧಿಸುವಂತೆ ಸ್ಥಳೀಯ ಸಂತರು, ಕುಂಭಮೇಳ ಆಯೋಜಕರು ಉತ್ತರ ಪ್ರದೇಶ ಸರ್ಕಾರ, ಅಲಹಾಬಾದ್ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಅತ್ಯಾಚಾರ ಸೇರಿದಂತೆ ನಾನಾ ವಿವಾದಗಳಲ್ಲಿ ಆರೋಪಿಯಾಗಿರುವ ನಿತ್ಯಾನಂದರನ್ನು ಮೇಳದಿಂದ ಬಹಿಷ್ಕರಿಸಬೇಕು. ಇಲ್ಲವಾದಲ್ಲಿ ಕುಂಭಮೇಳಕ್ಕೆ ಆಗಮಿಸುವ ಮುಗ್ಧ ಭಕ್ತರ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಒಂದೊಮ್ಮೆ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಸಂತರು ಹಾಗೂ ಮೇಳದ ಆಯೋಜಕರು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕುಂಭಮೇಳ ಅಖಾಡದ ವಕ್ತಾರರು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಫೆ.4ಕ್ಕೆ ನಿತ್ಯಾನಂದ ಕುಂಭಮೇಳಕ್ಕೆ ಆಗಮಿಸುತ್ತಾರೆ ಎಂಬ ಮಾಹಿತಿಯಿದೆ. ಈಗಾಗಲೇ ಕುಂಭಮೇಳ ನಡೆಯುವ ಪ್ರದೇಶದಲ್ಲಿ ನಿತ್ಯಾನಂದ ಟ್ರಸ್ಟ್ ವತಿಯಿಂದ ಟೆಂಟ್ ನಿರ್ಮಿಸಿ, ನಿತ್ಯಾನಂದರ ಮೂರ್ತಿ ನಿರ್ಮಿಸಲಾಗಿದೆ. ಪ್ರತಿದಿನವೂ ಪೂಜೆ ನಡೆಯುತ್ತಿದೆ. ಫೆ.4ರಿಂದ 10 ದಿನಗಳ ಕಾಲ ನಿತ್ಯಾನಂದ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ನಿತ್ಯವೂ ಯಜ್ಞ ಹಾಗೂ ಪ್ರವಚನ ಕಾರ್ಯಕ್ರಮ ನಡೆಯಲಿದೆ.
'ಗಂಗೆಯಲ್ಲಿ ಸ್ನಾನ ಮಾಡುವ ಮೂಲಕ ನಿತ್ಯಾನಂದ ಮಾಡಿರುವ ಪಾಪದ ಕೆಲಸಗಳು ತೊಳೆದುಹೋಗುವುದಿಲ್ಲ. ಆತ ನಡೆಸಿರುವ ಕರ್ಮಗಳು ಕೂಡ ಚಾರಿತ್ರ್ಯವನ್ನು ಸೂಚಿಸುತ್ತವೆ. ಇಂತಹ ವ್ಯಕ್ತಿಯನ್ನು ಮೇಳಕ್ಕೆ ಪ್ರವೇಶಿಸಲು ಬಿಟ್ಟರೆ ಧಾರ್ಮಿಕ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ ಎಂದು ವಕ್ತಾರರು ಎಚ್ಚರಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.