ಭಾರತೀಯ ಸಿನಿ ರಂಗಕ್ಕೆ ಅಮೀರಬಾಯಿ ಸೇವೆ ಅನನ್ಯ
ಬಿಜಾಪುರ: ಅಮೀರಬಾಯಿ ಕರ್ನಾಟಕಿ ಅವರು ಭಾರತೀಯ ಚಲನಚಿತ್ರ ರಂಗಕ್ಕೆ ಅಮೋಘ ಸೇವೆ ನೀಡಿದ್ದರು ಎಂದು ಧಾರವಾಡದ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸುರೇಶ ಕುಲಕರ್ಣಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕಲಾ ಮಾಧ್ಯಮ, ಸುರಸಿಂಗಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಕೋಗಿಲೆ ಅಮೀರಬಾಯಿ ಕರ್ನಾಟಕಿ ಅವರ ಜನ್ಮ ಶತಮಾನೋತ್ಸವ ಹಾಗೂ ಡಾ. ರಹಮತ ತರೀಕೆರೆ ಅವರು ರಚಿಸಿದ ಅಮೀರಬಾಯಿ ಕರ್ನಾಟಕಿ ಗ್ರಂಥ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
1931ರಲ್ಲಿ ಭಾರತೀಯ ಚಲನಚಿತ್ರ ರಂಗ ಮೂಕಿ ಚಿತ್ರದಿಂದ ಟಾಕಿ ಚಿತ್ರದ ಕಡೆಗೆ ವಾಲುತ್ತಿತ್ತು. ಅಂಥ ಸಮಯದಲ್ಲಿ ಅಮೀರಬಾಯಿ ಕರ್ನಾಟಕಿ ಅವರು ತಮ್ಮ ಅದ್ಭುತ ಕಂಠ ಹಾಗೂ ನಟನೆಯಿಂದ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು ಎಂದರು.
ಅಮೋಘ ಕಂಠದ ಜೊತೆಗೆ ಸೌಂದರ್ಯದ ಸಿರಿಯಾಗಿದ್ದ ಅಮೀರಾಬಾಯಿಯವರನ್ನು ಚಲನಚಿತ್ರರಂಗ ಮುಖ್ಯ ನಟಿಯ ಪಾತ್ರ ನೀಡದೇ ಹೆಚ್ಚಾಗಿ ಪೋಷಕ ಪಾತ್ರದಲ್ಲಿ ಬಳಿಸಿಕೊಂಡದ್ದು ಶೋಚನೀಯ. ಅಮೀರಬಾಯಿ ಅವರು ಹಿಂದಿ, ಗುಜರಾತಿ, ಮರಾಠಿ, ಉರ್ದು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ, 400 ಸಿನಿಮಾ ಹಾಡುಗಳನ್ನು ಹಾಡಿದ್ದಾರೆ. ಅಂತಹ ಮಹಾನ್ ಕಲಾವಿದೆ ಅವಿಭಜಿತ ಬಿಜಾಪುರ ಜಿಲ್ಲೆಯವರಾಗಿದ್ದು ಎಲ್ಲರಿಗೂ ಹೆಮ್ಮೆ ಎಂದರು.
ಹೊಸಪೇಟೆಯ ಹಿರಿಯ ರಂಗ ಚೇತನ ಲಾಡಸಾಬ ಅಮೀನಗಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡದ ವಿಮರ್ಶಕ ಸದಾನಂದ ಕನವಳ್ಳಿ ಅವರು ಡಾ. ರಹಮತ ತರೀಕೆರೆ ಅವರು ರಚಿಸಿದ ಅಮೀರಬಾಯಿ ಕರ್ನಾಟಕಿ ಗ್ರಂಥ ಬಿಡುಗಡೆ ಮಾಡಿದರು.
ಡಾ. ರಹಮತ ತರೀಕೆರೆ, ಸುರಸಿಂಗಾರದ ಅಧ್ಯಕ್ಷ ಭೋಜಣ್ಣ ಬೀಳಗಿ, ಕಲಾ ಮಾಧ್ಯಮದ ಅಧ್ಯಕ್ಷ ಜಿ.ಎನ್. ದೇಶಪಾಂಡೆ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.