ಸಮ್ಮೇಳನಕ್ಕೆ ನೋಂದಣಿ ಮಾಡಿಸಿಕೊಂಡವರನ್ನೂ ಕೇಳುವವರಿಲ್ಲ...
ಬಿಜಾಪುರ: ಸಾಹಿತ್ಯ ಸಮ್ಮೇಳನಕ್ಕೆಂದು ರು. 250 ಕಟ್ಟಿ ನೋಂದಣಿ ಮಾಡಿಕೊಂಡ ಪ್ರತಿನಿಧಿಗಳನ್ನು ಕೇಳುವವರೇ ಇಲ್ಲ. ಸಾಮಾನ್ಯ ಜನ ಬಿಡಿ, ಹಣ ಕಟ್ಟಿ ಪ್ರತಿನಿಧಿಗಳಾದವರಿಗೂ ಊಟ, ವಸತಿ ಸಿಕ್ಕಿಲ್ಲ. ಕೆಲವರಿಗೆ ಹಣ ಕಟ್ಟಿದ ರಸೀದಿ ಬಿಟ್ಟರೆ ಬೇರೇನೂ ದೊರೆತಿಲ್ಲ.
ದೂರದ ಊರುಗಳಿಂದ ಬರುವ ಸಾಹಿತ್ಯ ಪರಿಷತ್ ಸದಸ್ಯರು, ಸಾಹಿತ್ಯಾಭಿಮಾನಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತು ಮೊದಲೇ ಹೆಸರು ನೋಂದಾಯಿಸಿರುತ್ತಾರೆ. ಇದರರ್ಥ ಅವರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುತ್ತಾರೆ ಎಂಬುದು ಸಂಘಟಕರಿಗೆ ಮೊದಲೇ ತಿಳಿದಿರುತ್ತದೆ. ಈ ಬಾರಿಯಂತೂ ಪ್ರತಿ ಜಿಲ್ಲಾ ಸಾಹಿತ್ಯ ಪರಿಷತ್ ಕಚೇರಿಯಲ್ಲೂ ಹೆಸರು ನೋಂದಾಯಿಸುವ ಅವಕಾಶ ಕಲ್ಪಿಸಲಾಗಿತ್ತು. ಆದರೂ ಅವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಸಾಕಷ್ಟು ಜನ ಪ್ರತಿನಿಧಿಗಳಿಗೆ ಊಟ ಸಿಕ್ಕಿಲ್ಲ. ಇನ್ನು ಕೆಲವರಿಗೆ ವಸತಿ ದೊರೆತಿಲ್ಲ. ಈಗಾಗಲೇ ಇರುವ ಹೋಟೆಲ್ಗಳೆಲ್ಲ ಭರ್ತಿಯಾಗಿವೆ.
ಈ ಅವ್ಯವಸ್ಥೆ ಕುರಿತು ಮಂಡ್ಯದಿಂದ ಆಗಮಿಸಿರುವ ಎಂ.ಜಿ. ದಯಾನಂದ ಕಟ್ಟೆ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ರು. 250 ಕಟ್ಟಿ ಸಾಹಿತ್ಯ ಸಮ್ಮೇಳನಕ್ಕೆಂದು ದೂರದ ಊರಿನಿಂದ ಆಗಮಿಸಿದ್ದೇನೆ. ದುಡ್ಡು ಕಟ್ಟಿಸಿಕೊಂಡಿರುವ ಸಂಘಟಕರು, ನೋಂದಣಿ ಮಾಡಿಕೊಂಡವರಿಗೆ ಊಟ ಮತ್ತು ವಸತಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದಾದರೆ ಹಣ ಕಟ್ಟಿಸಿಕೊಳ್ಳಲೇ ಬಾರದಿತ್ತು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಗೂ, ಕೇಂದ್ರ ಸಮಿತಿಗೂ ಹೊಂದಾಣಿಕೆ ಇದ್ದಂತಿಲ್ಲ. ಇದರ ಪರಿಣಾಮ ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಕನಿಷ್ಠ ಊಟ ಕೂಡ ಸಿಕ್ಕಿಲ್ಲ. ಹಣ ಕಟ್ಟಿದ ಪ್ರತಿನಿಧಿಗಳನ್ನೇ ಕೇಳುವವರಿಲ್ಲ ಅಂದ ಮೇಲೆ ಸಾಮಾನ್ಯ ಜನರ ಗತಿಯೇನು ಎಂದವರು ಪ್ರಶ್ನಿಸಿದರು. ಈ ಕುರಿತು ನೊಂದಣಿ ಮಾಡಿಸಿದ ಪ್ರತಿನಿಧಿಗಳು ಹಾಗೂ ಸಮ್ಮೇಳನದಲ್ಲಿ ಭಾಗವಹಿಸಲು ಒಒಡಿ ರಜೆ ಮೇಲೆ ಬಂದಿರುವ ಶಿಕ್ಷಕರಿಗೆ ಹಾಜರಾತಿ ಪ್ರಮಾಣ ಪತ್ರ ನೀಡದ್ದಕ್ಕೆ ಆಕ್ಷೇಪಿಸಿ ಶಿಕ್ಷಕರು ಸಂಘಟಕರ ವಿರುದ್ಧ ಧಿಕ್ಕಾರ ಕೂಗುತ್ತ ಸಚಿವ ಗೋವಿಂದ ಕಾರಜೋಳ ಭಾಷಣಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದರಿಂದ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕಾರಜೋಳರ ಅತ್ತ ಕಡೆ ಲಕ್ಷ್ಯ ವಹಿಸದೇ ತಮ್ಮ ಭಾಷಣ ಮುಂದುವರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಧಿಕ್ಕಾರ ಕೂಗುತ್ತಿದ್ದವರನ್ನು ಸುಮ್ಮನಾಗಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.