ಅಧ್ಯಕ್ಷೀಯ ಭಾಷಣ ಮೊಟಕು
ಬಿಜಾಪುರ: ಕನ್ನಡದ ಮುನ್ನಡೆಯ ಸವಾಲುಗಳ ಗೋಷ್ಠಿಯ ಅಧ್ಯಕ್ಷರು ಹಠಾತ್ತನೇ ಭಾಷಣ ಮೊಟಕುಗೊಳಿಸಿದ ಪ್ರಸಂಗ ಭಾನುವಾರ ನಡೆಯಿತು.
ನಗರದ ಸೈನಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಗೋಷ್ಠಿಯಲ್ಲಿ ಆಶಯ ನುಡಿ, ಸೇರಿದಂತೆ ವಿಷಯ ಉಪನ್ಯಾಸಕರ ಮಾತುಗಳು ಮುಗಿದಿದ್ದವು. ಇನ್ನೇನು ಕೊನೆಗೆ ಅಧ್ಯಕ್ಷರ ಭಾಷಣ ಮುಗಿದು ಮುಂದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಬೇಕಾಗಿತ್ತು. ಡಾ. ಸತ್ಯನಾರಾಯಣ ಅವರು ವಿಜ್ಞಾನ-ತಂತ್ರಜ್ಞಾನ ಹಾಗೂ ಕನ್ನಡ ಮುನ್ನಡೆಯ ಸವಾಲುಗಳ ಕುರಿತು ತಮ್ಮ ಅಧ್ಯಕ್ಷೀಯ ಭಾಷಣಕ್ಕೆ ಅಣಿಯಾಗಿ ಕೇವಲ 5 ನಿಮಿಷ ಮಾತ್ರ ಕಳೆದಿದ್ದವು. ಸಭಾಂಗಣದಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರು ಗಂಭೀರವಾದ ಗೋಷ್ಠಿಯಲ್ಲಿ ನಿರಾಸಕ್ತಿಯಿಂದ ಕೂಗಾಟ, ಚೀರಾಟ ಮಾಡುತ್ತ ಆಗಾಗ ದಾಂದಲೆ ಎಬ್ಬಿಸುತ್ತಿದ್ದರು. ಗೋಷ್ಠಿಯ ಅಧ್ಯಕ್ಷರು ಕನ್ನಡ ಮುನ್ನಡೆಯ ಸವಾಲುಗಳ ಬಗ್ಗೆ ತುಂಬ ಮುತುವರ್ಜಿಯಿಂದ ಕನ್ನಡ ಬೆಳವಣಿಗೆಯ ಕುರಿತು ವಿಷಯ ಮಂಡಿಸುತ್ತಿದ್ದರು. ಒಂದೆಡೆ ಕನ್ನಡ ಉಳಿವು-ಅಳಿವಿನ ಬಗ್ಗೆ ಇಂದು ಗಂಭೀರವಾಗಿ ಚರ್ಚೆ ನಡೆಸುವುದರ ಜೊತೆಗೆ ಪ್ರತಿಯೊಬ್ಬರೂ ಕನ್ನಡ ಸಂರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ಅವರು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಸಾಹಿತ್ಯಾಸಕ್ತರಿಗೆ ಬರೀ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತೇ ಚಿಂತೆಯಾಗಿತ್ತು.
ಇದರಿಂದ ಸಾಹಿತ್ಯಾಸಕ್ತರು ಭಾಷಣದ ಮಧ್ಯ ಮಧ್ಯದಲ್ಲಿಯೇ ಚೀರಾಟ, ಕೂಗಾಟ ಮಾಡುತ್ತ, ಅಧ್ಯಕ್ಷರನ್ನು ಪೇಚಿಗೆ ಸಿಲಿಕಿಸುತ್ತಿದ್ದರು. ಇದರಿಂದ ಗೋಷ್ಠಿಯ ಅಧ್ಯಕ್ಷರು ಬೇಸತ್ತು ನಿಮಗೆ ಈ ಗೋಷ್ಠಿಗಿಂತಲೂ ಸಾಂಸ್ಕೃತಿಕ ಕಾರ್ಯಕ್ರಮವೇ ಹೆಚ್ಚಾದರೆ ನನ್ನ ಅಧ್ಯಕ್ಷೀಯ ಭಾಷಣ ಇಲ್ಲಿಗೆ ನಿಲ್ಲಿಸುತ್ತೇನೆ ಎಂದು ತಮ್ಮ ಭಾಷಣ ಮೊಟಕುಗೊಳಿಸಿದ ಪ್ರಸಂಗ ಜರುಗಿತು. ಇದು ಕನ್ನಡದ ಮುನ್ನಡೆಯ ಸವಾಲುಗಳಿಗೆ ಹಿಡಿದ ಕೈಗನ್ನಡಿಯಾದದ್ದು ವಿಷಾದಕರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.