'ಇಚ್ಛಾಶಕ್ತಿ ಇಲ್ಲದಿದ್ದರೆ ಕನ್ನಡವೂ ಮೃತ ಭಾಷೆಯಾದೀತು'
-ಪರಶುರಾಮ ಶಿವಶರಣ
ಬಿಜಾಪುರ: ರಾಜ್ಯ ಸರ್ಕಾರ ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಇಚ್ಛಾಶಕ್ತಿಯಿಂದ ಜಾರಿಗೆ ತರದಿದ್ದರೆ ಸಂಸ್ಕೃತದಂತೆ ಕನ್ನಡ ಭಾಷೆಯೂ ಮೃತ ಭಾಷೆಯಾಗಲಿದೆ ಎಂದು ಡಾ. ಸತ್ಯನಾರಾಯಣ ಅವರು ಕಳವಳ ವ್ಯಕ್ತಪಡಿಸಿದರು.
ನಗರದ ಸೈನಿಕ ಶಾಲೆಯ ಆವರಣದಲ್ಲಿ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಕನ್ನಡ ಮುನ್ನಡೆಯ ಸವಾಲುಗಳ ಕುರಿತ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕನ್ನಡ ಭಾಷೆಯನ್ನು ಸಮರೋಪಾದಿಯಲ್ಲಿ ಜಾರಿ ಮಾಡುವುದು ಅತಿ ಅವಶ್ಯವಾಗಿದೆ. ಕಂಪ್ಯೂಟರ್ಗಳು ಇಂದು ಜಗತ್ತನ್ನು ವ್ಯಾಪಿಸಿವೆ. ಕಂಪ್ಯೂಟರ್ ಭಾಷೆ ಕೇವಲ ಇಂಗ್ಲಿಷ್ ಅಲ್ಲ. ಕನ್ನಡ ಭಾಷೆಯೂ ಇದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ತಿಳಿಸಿಕೊಡಬೇಕು. ಕನ್ನಡದಲ್ಲಿ ತಂತ್ರಾಂಶಗಳ ಕೊರತೆ ಇದ್ದು, ಕನ್ನಡ ಭಾಷೆಯಲ್ಲಿ ತಂತ್ರಾಂಶ ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.
ಡಾ. ಜಿ. ಕೃಷ್ಣಪ್ಪ ಮಾತನಾಡಿ, ಕನ್ನಡಿಗರ ಉದ್ಯೋಗ ಸಮಸ್ಯೆ ನಿವಾರಣೆಗೆ ಸರೋಜನಿ ಮಹಿಷಿ ವರದಿ ಜಾರಿಯಾಗಬೇಕು. ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಲಭಿಸುವಂತೆ ಕಾಯ್ದೆ ರೂಪಿಸಬೇಕು. ಬಿಜಾಪುರ ಜಿಲ್ಲೆಯ ಜನರು ಹೊಟ್ಟೆ ತುಂಬಿಸಿಕೊಳ್ಳಲು ಪಕ್ಕದ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಇಲ್ಲಿನ ಜನರಿಗೆ ಸರ್ಕಾರ ಉದ್ಯೋಗ ಭದ್ರತೆಯನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಡಾ. ಕೆ.ಎಸ್. ಚೈತ್ರ ಮಾತನಾಡಿ, ಸ್ವಸ್ತ ಮನ, ಸದೃಢ ದೇಹ ರೂಪಿಸುವಲ್ಲಿ ವೈದ್ಯ ಸಾಹಿತ್ಯ ಮಹತ್ವದ ಕಾರ್ಯ ಮಾಡುತ್ತದೆ. ವೈದ್ಯ ಸಾಹಿತ್ಯವು ಇಂದು ಜನರಲ್ಲಿನ ಮೂಢನಂಬಿಕೆಯನ್ನು ತೊಲಗಿಸಿ ವೈಜ್ಞಾನಿಕವಾಗಿ ಆರೋಗ್ಯದ ಕುರಿತು ಮಾಹಿತಿ ನೀಡುತ್ತಿದೆ. ಆದರೆ ವೈದ್ಯ ಸಾಹಿತ್ಯವನ್ನು ಸಾಹಿತಿಗಳು ಗಣನೆಗೆ ತೆಗೆದುಕೊಳ್ಳದಿರುವುದು ನೋವಿನ ಸಂಗತಿ. ವೈದ್ಯ ಸಾಹಿತ್ಯವನ್ನು ಸಾಹಿತಿಗಳು ಸಾಹಿತ್ಯವೆಂದು ಗುರುತಿಸಬೇಕು. ಜನಸಾಮಾನ್ಯರು ನಂಬುವ ಹಾಗೂ ಓದುವ ಸಾಹಿತ್ಯವಾಗಬೇಕು ಎಂದು ಅವರು ಹೇಳಿದರು. ಡಾ. ವಸಂತ ಕುಲಕರ್ಣಿ ಆಶಯ ನುಡಿ ವ್ಯಕ್ತಪಡಿಸಿದರು.
ಯ.ರು. ಪಾಟೀಲ ಸ್ವಾಗತಿಸಿದರು. ಡಾ. ಆನಂದ ಕುಲಕರ್ಣಿ ನಿರೂಪಿಸಿದರು. ಮಲ್ಲಿಕಾರ್ಜುನ ಅವಟಿ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.