'ಮಠ, ಮಂದಿರದಿಂದ ಸಂವಿಧಾನದ ಆಶಯಕ್ಕೆ ಧಕ್ಕೆ'
ಮಹಿಪತಿದಾಸ ಮಂಟಪ, ಬಿಜಾಪುರ: ಬಜೆಟ್ನಲ್ಲಿ ಮಠ-ಮಂದಿರಗಳಿಗೆ ಅನುದಾನ ನೀಡುವ ಬಿಜೆಪಿ ಸರ್ಕಾರದ ನಿಲುವಿನ ವಿರುದ್ಧ ಸಾಹಿತಿಗಳು, ಪ್ರಗತಿಪರ ಆಲೋಚನೆಯುಳ್ಳವರು ತೀವ್ರ ವಿರೋಧಿಸಿದರು.
ಸಾರ್ವಜನಿಕರ ತೆರಿಗೆ ಹಣವನ್ನು ಕೆಲವೇ ವರ್ಗ-ಜಾತಿಯ ಮಠ-ಮಂದಿರಗಳಿಗೆ ನೀಡುವುದರಿಂದ ಮಠಗಳೇ ಇಲ್ಲದ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕುಕ್ಕೆಯಲ್ಲಿ ಮಾತ್ರ ಮಡೆಸ್ನಾನ ಇಲ್ಲ, ಅಷ್ಟೇ ಅಪಾಯಕಾರಿ ತಾರತಮ್ಯ ರಾಜ್ಯದ ಬಹುತೇಕ ಮಠ-ಮಂದಿರಗಳಲ್ಲಿ ಇದ್ದು ಇಂಥ ನೀಚ ಆಚರಣೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಜಾರಿಯಾಗಲಿ. ಧಾರ್ಮಿಕ ಬೋಧನೆಯನ್ನೂ ಮಾರಾಟದ ಸರಕು ಮಾಡಿಕೊಂಡಿರುವ ಧರ್ಮಗುರುಗಳನ್ನು ಜನತೆ ತಿರಸ್ಕರಿಸಬೇಕು. ಕೃಷಿಗೆ ಅಪಾಯಕಾರಿಯಾಗಿರುವ ಕಬ್ಬು ಬೆಳೆಯುವುದನ್ನು ನಿಲ್ಲಿಸಬೇಕು.
ಇಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ 7ನೇ ಗೋಷ್ಠಿಯಲ್ಲಿ ಇಂಥದೊಂದು ಆಕ್ರೋಶ, ಆಗ್ರಹ ಕೇಳಿ ಬಂತು.
ವರ್ತಮಾನದ ತಲ್ಲಣಗಳ ಕುರಿತು ಮಾತನಾಡಿದ ಡಾ.ಬಂಜಗೆರೆ ಪ್ರಕಾಶ್, ಡಾ.ನಟರಾಜ ಹುಳಿಯಾರ, ಡಾ.ಕೆ. ನೀಲಾ ಮತ್ತು ಡಾ.ವಾಸು ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ವಿವಿಧ ಸ್ಥರಗಳಲ್ಲಿ ಆಗುತ್ತಿರುವ ಅನಾಹುತ, ಅಪಾಯಗಳಿಗೆ ಕನ್ನಡಿ ಹಿಡಿದ ಅವರು, ಜನತೆ ಜಾಗೃತರಾಗದಿದ್ದರೆ ನಮ್ಮವರೇ ನಮ್ಮನ್ನು ನುಂಗಿ ಹಾಕುವ, ನಮ್ಮವರೇ ನಮ್ಮನ್ನು ದೋಚುವ ಮಹಾ ದುರಂತ ಕಣ್ಣೆದುರಿಗಿದೆ. ಬಹುರಾಷ್ಟ್ರೀಯ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಆಡಳಿತಾರೂಢ ಸರ್ಕಾರಗಳು ನಮ್ಮನ್ನು ಮತ್ತೆ ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.
ಮತದಾರರು ಮಾರಾಟಕ್ಕಿಲ್ಲ: ಸರ್ಕಾರದ ಉದ್ದೇಶಪೂರ್ವಕ ನಿಲುವಿನಿಂದ ಸಾರ್ವಜನಿಕ ಉದ್ದಿಮೆಗಳು ಕಡಿಮೆಯಾಗಿ ಖಾಸಗಿ ಕಾರ್ಖಾನೆಗಳು ಹೆಚ್ಚುತ್ತಿವೆ. ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿ ಕಾನ್ವೆಂಟ್ ಶಾಲೆಗಳು ಕಣ್ಣು ತೆರೆಯುತ್ತಿವೆ. ಇದರಿಂದ ಬಡವರು, ಗ್ರಾಮೀಣರು, ಶೋಷಿತರ ಮಕ್ಕಳು ಶಿಕ್ಷಣದಿಂದ ವಂಚಿತರಾದರೆ, ಯುವಕರು ಮತ್ತೆ ಜೀತಕ್ಕೆ ಹೋಗುವ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ ಎಂದು ಡಾ.ಬಂಜಗೆರೆ ಕಳವಳ ವ್ಯಕ್ತಪಡಿಸಿದರು.
ದೇಶದ ಆರ್ಥಿಕತೆ ಖಾಸಗಿ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಇದರಿಂದಾಗಿ ಮತದಾರರು ಮಾರಾಟಕ್ಕಿದ್ದಾರೆ ಎನ್ನುವ ಮನೋಭಾವನೆ ಹೊಂದಿರುವ ಶಾಸನ ಕರ್ತರು ಆ ಬಂಡವಾಳಶಾಹಿಗಳಿಗೆ ಅನುಕೂಲ ಆಗುವ ರೀತಿಯಲ್ಲಿ ಶಾಸನ ರೂಪಿಸಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಸ ಹೊಸ ಚಳವಳಿಗಳು ಹುಟ್ಟಿಕೊಳ್ಳಬೇಕಿದೆ ಎಂದರು.
ಸನಾತನ ಪಾಳೇಗಾರಿಕೆ: ಗ್ರಾಮೀಣ ಆರ್ಥಿಕತೆ ಮತ್ತು ಸಾಂಸ್ಕೃಕತೆಯ ಮೇಲೆ ದಾಳಿ ನಡೆಸುವ ಮೂಲಕ ಸನಾತನ ಶಕ್ತಿಗಳು, ಪಾಳೆಗಾರಿಕೆ ಮನೋವೃತ್ತಿಗಳು ಮತ್ತೆ ಮತ್ತೆ ಹೂಂಕರಿಸುತ್ತಿವೆ. ಗ್ರಾಮೀಣರ ಶೇ.71 ರಷ್ಟು ಜನರ ತಲಾ ಆದಾಯ ಕೇವಲ ರು. 20. ದಲಿತರಲ್ಲಿ ಶೇ.20 ರಷ್ಟು ಮಹಿಳೆಯರು ಮಾತ್ರ ಅಕ್ಷರಸ್ಥರಾಗಿದ್ದಾರೆ. ಇಷ್ಟೆಲ್ಲ ಇಲ್ಲಗಳ ಮಧ್ಯೆ ಹೋಂ ಸ್ಟೇ, ಸದನದಲ್ಲಿ ಬ್ಲ್ಯೂ ಫಿಲ್ಮ ವೀಕ್ಷಣೆ, ಆಪರೇಷನ್ ಕಮಲದಂತ ಅನಾಹುತಗಳು ನಡೆಯುತ್ತಲೇ ಇವೆ. ಇವಕ್ಕೆಲ್ಲ ಉತ್ತರ ಕೊಡಬೇಕಿರುವ ಸರ್ಕಾರವು ಸನಾತನ, ಕೋಮುತನ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಬ್ಬು ಕೃಷಿಗೆ ಅಪಾಯ: ಬರಗಾಲದ ನೆಲ ಎನಿಸಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಅದಕ್ಕೆ ತಕ್ಕಂತೆ ಸಕ್ಕರೆ ಕಾರ್ಖಾನೆಗಳೂ ತಲೆ ಎತ್ತುತ್ತಿವೆ. ಬೀಜ, ಗೊಬ್ಬರ ನೀಡಿ ಕಬ್ಬು ಬೆಳೆಯಲು ಹಚ್ಚುವ ಕಾರ್ಖಾನೆಗಳ ಪ್ರೋತ್ಸಾಹದ ಹಿಂದೆ ಈಥೇನ ಲಾಭಿ ಕೆಲಸ ಮಾಡುತ್ತಿದೆ. ಮುಂದಿನ ನಾಲ್ಕಾರು ವರ್ಷಗಳಲ್ಲಿ ಇಡೀ ಭೂಮಿ ಬಂಜರು ಆಗುವ ಅಪಾಯವಿದೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ವಾಸು ಆತಂಕ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಚಲನೆ ಕುರಿತು ಮಾತನಾಡಿದ ಡಾ.ನಟರಾಜ ಹುಳಿಯಾರ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರ್ಕಾರಗಳು ಜಾಹೀರಾತುಗಳ ಮೂಲಕ ಜನತೆಗೆ ನಿರಂತರವಾಗಿ ಸುಳ್ಳು ಹೇಳುತ್ತಿದೆ. ಕೆಲವು ಧರ್ಮ ಗುರುಗಳು ಧಾರ್ಮಿಕತೆಯನ್ನು ಮಾರುಕಟ್ಟೆಯ ಸರಕು ಮಾಡುತ್ತಿದ್ದರೂ ಮಾಧ್ಯಮ ತನ್ನ ಕರ್ತವ್ಯ ನಿಭಾಯಿಸದೇ ಕೈ ಕಟ್ಟಿ ಕುಳಿತಿದೆ ಎಂದರು.
ಬುದ್ದ, ಬಸವ, ಕಬೀರ, ಶರೀಫರು ಎಂದೂ ತಮ್ಮ ಬೋಧನೆಗಳನ್ನು ಮಾರಾಟ ಮಾಡಿರಲಿಲ್ಲ. ಆದರೆ, ಇಂದು ಅದು ತಿರುವು-ಮುರುವಾಗಿದೆ. ಇಂಥ ಪ್ರವೃತ್ತಿ ವಿರೋಧಿಸಲೆಂದು ಮತ್ತು ಕೋಮುವಾದಕ್ಕೆ ಸವಾಲು ಎನ್ನುವಂತೆ ದಲಿತರು ಬೌದ್ಧ ಧರ್ಮ ಸೇರುತ್ತಿದ್ದಾರೆ. ಇದು ಅವರ ಸಿಟ್ಟು, ಆಕ್ರೋಶ, ಶೋಷಣೆಯ ವಿರುದ್ಧದ ಬಂಡಾಯ ಎಂದು ಡಾ.ನಟರಾಜ್ ವಿಶ್ಲೇಷಿಸಿದರು.
ನಾಗರಾಜ ಜೆ.ಪಿ, ವೈ.ಎಲ್.ಹನುಮಂತರಾವ ಇದ್ದರು.
- ಮಲ್ಲಿಕಾರ್ಜುನ ಸಿದ್ದಣ್ಣವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.