ಜ್ಞಾನಪೀಠರ ಪರಿಚಯಿಸಿದ ವಾರ್ತಾ ಇಲಾಖೆ
ಬಿಜಾಪುರ: ಐತಿಹಾಸಿಕ ನಗರ ಬಿಜಾಪುರದ ಸೈನಿಕ ಶಾಲೆಯ ಆವರಣದಲ್ಲಿ ನಡೆಯುತ್ತಿರುವ 79 ನೇ ಸಾಹಿತ್ಯ ಸಮ್ಮೇಳನದಲ್ಲಿ ವಾರ್ತಾ ಇಲಾಖೆಯು ಏರ್ಪಡಿಸಿದ್ದ ಸಾಹಿತ್ಯ ಸಾಹಿತಿಗಳ ಪರಿಚಯ ಚಿತ್ರಗಳ, ಪ್ರತಿಮೆಗಳ ಪ್ರದರ್ಶನ ಮಳಿಗೆ ಜನರನ್ನು ಕಳೆದ ಎರಡು ದಿನಗಳಿಂದ ಆಕರ್ಷಸುತ್ತಿತ್ತು. ಈ ಪ್ರದರ್ಶನದ ಮುಂದೆ ಆಕರ್ಷಕವಾದ ಶೈಲಿಯಲ್ಲಿ ಜ್ಞಾನಪೀಠದ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳನ್ನು ಇಡಲಾಗಿದ್ದು. ಪ್ರತಿಮೆಗಳ ಕೆಳಗೆ ಆಯಾ ಸಾಹಿತಿಗಳ ಹೆಸರು, ಕೃತಿಯನ್ನು ಬರೆಯಲಾಗಿದೆ. ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಇದರ ಮುಂದೆ ನಿಂತುಕೊಂಡು ಫೋಟೋಗಳನ್ನು ತೆಗೆದುಕೊಳ್ಳುವ ದೃಶ್ಯ ಕಂಡು ಬಂತು.
ವಾರ್ತಾ ಇಲಾಖೆಯ ಪ್ರದರ್ಶನ ಮಳಿಗೆ ಒಳ ಪ್ರವೇಶ ಮಾಡುತ್ತಿದಂತೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಂದೇಶ ಕಣ್ಣಿಗೆ ಎದುರಿಗೆ ಕಾಣುತ್ತದೆ. ಬಿಜಾಪುರ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳು, ದ್ರಾಕ್ಷಿ, ಸಾಹಿತ್ಯದ ಕೊಡುಗೆ, ಭಾವೈಕ್ಯತೆ ಕುರಿತಾದ ಸಂಕ್ಷೀಪ್ತವಾದ ಮಾಹಿತಿ ಫಲಕಗಳನ್ನು ಕಾಣಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ನೀಡುವ ಪಂಪ, ಟೀಯೆಸ್ಸಾರ್ , ಬಸವ ಪರಸ್ಕಾರ ಪುರಸ್ಕ್ರತರ ಪಟ್ಟಿ ಫಲಕಗಳು ಕಂಡು ಬಂದವು. ಕನ್ನಡ ನಾಡಿಗೆ ಬಂದ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ಪುರಸ್ಕ್ರತರ ಭಾವಚಿತ್ರ, ಆಲಮಟ್ಟಿಯ ಜಲಾಶಯದಲ್ಲಿ ಕಂಡು ಬರುವ ಉದ್ಯಾನದ ಆಕರ್ಷಣೀಯ ಚಿತ್ರಗಳ ಫಲಕಗಳನ್ನು ಜನರು ತದೇಕ ಚಿತ್ತದಿಂದ ನೋಡುವುದು ಕಂಡು ಬಂತು. ಕೆಲ ವೀಕ್ಷಕರು ಇಲ್ಲಿನ ನೀಡಿದ ಮಾಹಿತಿಗಳನ್ನು ಬರೆದುಕೊಳ್ಳುತ್ತಿದ್ದರು.
ಪ್ರದರ್ಶನದ ಮಳಿಗೆ ಮುಂದೆ ಸ್ಥಾಪಿಸಿಲಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರ ಪ್ರತಿಮೆಗಳ ಕೆಳಗೆ ಹಾಕಲಾಗಿರುವ ಹೆಸರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಹೆಸರು ಮಾಸ್ತಿ ವೆಂಕಟೇಶ ಐಂಗಾರ ಎಂದು ತಪ್ಪಾಗಿ ಬರೆದಿರುವುದು ಎದ್ದು ಕಾಣುತ್ತಿತ್ತು.
ಜಮಖಂಡಿಯ ವೀಣಾ ಬೋವೇರ, ಅಶ್ವಿನಿ ಪಡಶೆಟ್ಟಿ ಅವರು ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಸಾಹಿತ್ಯಿಕ ಸಂಬಂಧಿಸಿದ ಚಿತ್ರ ಫಲಕಗಳ ಪ್ರದರ್ಶನವು ಸಮ್ಮೇಳನಕ್ಕೆ ಆಗಮಿಸುವವರಿಗೆ ಆನಂದ ತರುವ ಜೊತೆಗೆ ಕನ್ನಡ ನಾಡಿನ ಪರಿಚಯ ಮಾಡಿಕೊಡುತ್ತದೆ. ವಾರ್ತಾ ಇಲಾಖೆಯು ಹಮ್ಮಿಕೊಂಡಿದ್ದ ಚಿತ್ರ ಫಲಕಗಳು ಮಾಹಿತಿ ಪೂರ್ಣವಾಗಿವೆ. ನಾಡಿನ ಜನರಿಗೆ ನಾಡಿನಲ್ಲಿರುವ ಪ್ರಶಸ್ತಿ ಪುರಸ್ಕ್ರತರ ಸಾಧಕರ ಬಗ್ಗೆ, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿಸಿಕೊಡುವಲ್ಲಿ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.ಅಪಝಲಪೂರ ತಾಲೂಕಿನ ಚಿನಮಳ್ಳಿಯ ನಾಗೇಶ ನಾಗೂರ ಅವರು, ಸಮ್ಮೇಳನದಲ್ಲಿ ವಾರ್ತಾ ಇಲಾಖೆಯು ಹಮ್ಮಿಕೊಂಡಿರುವ ಪ್ರದರ್ಶನ ನಿಜಕ್ಕೂ ಅರ್ಥಪೂರ್ಣ. ಆದರೆ ಇನ್ನಷ್ಟು ಮಾಹಿತಿಯನ್ನು ಒದಗಿಸಬೇಕಾಗಿತ್ತು ಎಂದರು.
- ಬಸವರಾಜ ನಂದಿಹಾಳ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.